ಹೆಲಿಕಾಪ್ಟರ್‌ಗಳ ಖರೀದಿಗೆ ಶೀಘ್ರ ರಷ್ಯಾದೊಂದಿಗೆ ಒಪ್ಪಂದ

Update: 2018-01-23 15:19 GMT

ಹೊಸದಿಲ್ಲಿ,ಜ.23: ಭಾರತದಿಂದ 48 ಎಂಐ-17ವಿ-5 ಹೆಲಿಕಾಪ್ಟರ್‌ಗಳ ಖರೀದಿ ಗಾಗಿ ಕಳೆದ ವರ್ಷವೇ ಅಂಕಿತ ಬೀಳಬೇಕಿದ್ದ ಒಪ್ಪಂದವು ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ರಷ್ಯಾದ ರೋಸ್ಟೆಕ್ ಸ್ಟೇಟ್ ಕಾರ್ಪೊರೇಷನ್‌ನ ಸಿಇಒ ಸೆರ್ಗಿ ಕೆಮೆರೆವ್ ಅವರು ಮಂಗಳವಾರ ತಿಳಿಸಿದರು.

ಭಾರತವು ಸದ್ಯ ಸುಮಾರು 151 ಎಂಐ-17ವಿ-5 ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಈ ಪೈಕಿ ಕೊನೆಯ ಹೆಲಿಕಾಪ್ಟರ್‌ನ್ನು ಅದು ಜನವರಿ 2016ರಲ್ಲಿ ಸ್ವೀಕರಿಸಿತ್ತು. ಇದು ಎಂಐ-8/17 ವರ್ಗದ ಅತ್ಯಂತ ಆಧುನಿಕ ಹೆಲಿಕಾಪ್ಟರ್ ಆಗಿದ್ದು, ರಾತ್ರಿ ಗೋಚರತೆ ತಂತ್ರಜ್ಞಾನ, ಹವಾಮಾನ ರಾಡಾರ್, ಹೊಸ ಪಿಕೆವಿ-8 ಆಟೋಪೈಲಟ್ ವ್ಯವಸ್ಥೆ ಇತ್ಯಾದಿಗಳನ್ನು ಒಳಗೊಂಡಿದೆ.

 ಭಾರತೀಯ ವಾಯುಪಡೆಯ ಹಲವಾರು ಪ್ರಕೃತಿ ವಿಕೋಪ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಈ ಹೆಲಿಕಾಪ್ಟರ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. 2008ರ ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿಯೂ ಈ ಹೆಲಿಕಾಪ್ಟರ್‌ಗಳು ಬಳಕೆಯಾಗಿದ್ದು, ಚಾಬಾದ್ ಹೌಸ್‌ನ್ನು ಭಯೋತ್ಪಾದಕರಿಂದ ಮರಳಿ ವಶಪಡಿಸಿ ಕೊಳ್ಳುವಲ್ಲಿ ಕಮಾಂಡೋಗಳಿಗೆ ನೆರವಾಗಿದ್ದವು. 2016,ಸೆಪ್ಟೆಂಬರ್‌ನಲ್ಲಿ ನಿಯಂತ್ರಣ ರೇಖೆಯಾಚೆ ನಡಸಲಾಗಿದ್ದ ಸರ್ಜಿಕಲ್ ದಾಳಿಯಲ್ಲಿಯೂ ಈ ಹೆಲಿಕಾಪ್ಟರ್‌ಗಳು ಬಳಕೆಯಾಗಿದ್ದವು ಎನ್ನಲಾಗಿದೆ. ಟಿವಿ3-117 ಬಿಎಂ ಟರ್ಬೋಶಾಫ್ಟ್ ಇಂಜಿನ್‌ಗಳನ್ನು ಹೊಂದಿರುವ ಈ ಹೆಲಿಕಾಪ್ಟರ್ ಹಿಮಾಲಯದ ದುರ್ಗಮ ಪರ್ವತ ಪ್ರದೇಶಗಳಲ್ಲಿಯೂ ಯಾವುದೇ ಅಡೆತಡೆಯಿಲ್ಲದೆ ಕಾರ್ಯ ನಿರ್ವಹಿಸುತ್ತದೆ.

111 ಹೆಲಿಕಾಪ್ಟರ್‌ಗಳ ಖರೀದಿಗಾಗಿ ಭಾರತೀಯ ನೌಕಾಪಡೆಯು ಕರೆದಿರುವ ಟೆಂಡರ್‌ನಲ್ಲಿ ರಷ್ಯಾ ತನ್ನ ಕಮೋವಾ-ಕೆಎ-226ಟಿ ಹೆಲಿಕಾಪ್ಟರ್‌ನೊಂದಿಗೆ ಪಾಲ್ಗೊಳ್ಳಲಿದೆ ಎಂದೂ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೆಮೆರೆವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News