ರಾಜಸ್ಥಾನಕ್ಕೆ ಶರಣಾದ ಕರ್ನಾಟಕ; ದಿಲ್ಲಿ ವಿರುದ್ಧ ಬಂಗಾಳಕ್ಕೆ ಜಯ

Update: 2018-01-23 18:34 GMT

ಕೋಲ್ಕತಾ, ಜ.23: ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್‌ನ ಗ್ರೂಪ್‌‘ಎ’ ಸೂಪರ್ ಲೀಗ್ ಪಂದ್ಯದಲ್ಲಿ ವೇಗಿ ದೀಪಕ್ ಚಹಾರ್ ದಾಳಿ ನೆರವಿನಲ್ಲಿ ರಾಜಸ್ಥಾನ ತಂಡ ಕರ್ನಾಟಕ ವಿರುದ್ಧ 22 ರನ್‌ಗಳ ಜಯ ಗಳಿಸಿದೆ.

ಇನ್ನೊಂದು ಪಂದ್ಯದಲ್ಲಿ ದಿಲ್ಲಿ ತಂಡವನ್ನು ಪಶ್ಚಿಮ ಬಂಗಾಳ ಸೋಲಿಸಿದೆ.

ಜಾಧವ್‌ಪುರ ವಿವಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 161 ರನ್‌ಗಳ ಸವಾಲನ್ನು ಪಡೆದ ಕರ್ನಾಟಕ ತಂಡ 20 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟಾಗಿದೆ.

ವೇಗಿ ದೀಪಕ್ ಚಹಾರ್ (15ಕ್ಕೆ 5) ಜೀವನಶ್ರೇಷ್ಠ ಬೌಲಿಂಗ್ ನಡೆಸುವ ಮೂಲಕ ಕರ್ನಾಟಕ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ಕರ್ನಾಟಕದ ಅನಿರುದ್ಧ್ ಜೋಶಿ (ಔಟಾಗದೆ 73) ಮತ್ತು ಕೆ.ಗೌತಮ್(13) ಎರಡಂಕೆಯ ಕೊಡುಗೆ ನೀಡಿದರು.

ಇದರೊಂದಿಗೆ ರಾಜಸ್ಥಾನ ಆಡಿರುವ ಎರಡು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿ 8 ಅಂಕ ಸಂಪಾದಿಸಿದೆ. ಇದೇ ವೇಳೆ ಕರ್ನಾಟಕ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

 ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಆದಿತ್ಯ ಗರ್ವಾಲ್ (31) ಅಂಕಿತ್ ಲಾಂಬಾ(58) ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿತ್ತು.

 ಲಾಂಬಾ ಮತ್ತು ಗರ್ವಾಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಲಾಂಬಾ ಮತ್ತು ಸಲ್ಮಾನ್ ಖಾನ್ (20)ಎರಡನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದರು. ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್(29ಕ್ಕೆ 2) ಮತ್ತು ಶ್ರೀನಾಥ್ ಅರವಿಂದ್(25ಕ್ಕೆ 3) ಪ್ರಹಾರದ ನಡುವೆಯೂ ರಾಜಸ್ಥಾನ ಉತ್ತಮ ಮೊತ್ತ ದಾಖಲಿಸಿತ್ತು.

 ರಾಜಸ್ಥಾನದ ಲಾಂಬಾ ಅವರು ಮೊದಲ ಓವರ್‌ನ ಐದನೇ ಎಸೆತದಲ್ಲಿ ಕರ್ನಾಟಕದ ಆರಂಭಿಕ ದಾಂಡಿಗ ಕರುಣ್ ನಾಯರ್‌ಗೆಪೆವಿಲಿಯನ್ ಹಾದಿ ತೋರಿಸಿದರು. ಆನಂತರ ಚಹಾರ್ ಅವರು ಆರ್.ಸಮರ್ಥ್ ಮತ್ತು ಭಡ್ತಿ ಪಡೆದು ಆಗಮಿಸಿದ ಅಭಿಮನ್ಯು ಮಿಥುನ್‌ಗೆ ಎರಡನೇ ಓವರ್‌ನ 5 ಮತ್ತು 6ನೇ ಎಸೆತದಲ್ಲಿ ಪೆವಿಲಿಯನ್‌ಗೆ ಅಟ್ಟಿದರು. ತಮ್ಮ ಮೂರನೇ ಓವರ್‌ನಲ್ಲಿ ಸಿ.ಎಂ.ಗೌತಮ್ ಮತ್ತು ಸ್ಟುವರ್ಟ್ ಬಿನ್ನಿ ವಿಕೆಟ್ ಉಡಾಯಿಸಿ ಮತ್ತೊಮ್ಮೆ ಹ್ಯಾಟ್ರಿಕ್ ಗಳಿಸುವ ಹಾದಿಯಲ್ಲಿದ್ದರು. ಆದರೆ ಅವರಿಗೆ ಅವಕಾಶ ಕೈತಪ್ಪಿತು. ಕರ್ನಾಟಕ ತಂಡ ಇವರ ದಾಳಿಗೆ ಸಿಲುಕಿ 24ಕ್ಕೆ 5 ವಿಕೆಟ್ ಕಳೆದುಕೊಂಡಿತು. ಬಳಿಕ ಜೋಶಿ ಕರ್ನಾಟಕ ತಂಡವನ್ನು ಆಧರಿಸಿದರು. ಅವರು 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಲ್ಲಿ 73 ರನ್ ಜಮೆ ಮಾಡಿದರು. ಸೋಮವಾರ ಜಾರ್ಖಂಡ್ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿದ ಚಾಹರ್ ರಾಜಸ್ಥಾನಕ್ಕೆ ಗೆಲುವು ತಂದು ಕೊಟ್ಟಿದ್ದರು. ಕರ್ನಾಟಕ ವಿರುದ್ಧ ಅಂತಹದ್ದೇ ಪ್ರದರ್ಶನ ನೀಡಿ ಎರಡನೇ ಗೆಲುವಿಗೆ ಸಹಾಯ ಮಾಡಿದರು.

ಗ್ರೂಪ್ ‘ಬಿ’ ಪಂದ್ಯದಲ್ಲಿ ದಿಲ್ಲಿ ವಿರುದ್ಧ ಬಂಗಾಳ ಜಯ ಗಳಿಸಿದೆ. ಉತ್ತರ ಪ್ರದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಬಂಗಾಳ ಎರಡನೇ ಪಂದ್ಯದಲ್ಲಿ ಗೆಲುವಿನೊಂದಿಗೆ ಚೇತರಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್

►ರಾಜಸ್ಥಾನ 20 ಓವರ್‌ಗಳಲ್ಲಿ 160/8 (ಅಂಕಿತ್ ಲಾಂಬಾ 58, ಆದಿತ್ಯ ಗರ್ವಾಲ್ 31; ಅರವಿಂದ 25ಕ್ಕೆ 3, ವಿನಯ್ ಕುಮಾರ್ 29ಕ್ಕೆ 2).

►ಕರ್ನಾಟಕ 20 ಓವರ್‌ಗಳಲ್ಲಿ ಆಲೌಟ್ 138(ಜೋಶಿ ಔಟಾಗದೆ 73; ದೀಪಕ್ ಚಾಹರ್ 15ಕ್ಕೆ 5, ಚಂದ್ರಪಾಲ್ ಸಿಂಗ್ 31ಕ್ಕೆ 2).

►ಪಶ್ಚಿಮ ಬಂಗಾಳ 20 ಓವರ್‌ಗಳಲ್ಲಿ 170/6( ಸುದೀಪ್ ಚಟರ್ಜಿ 51, ವಿವೇಕ್ ಸಿಂಗ್ 32, ಮನೋಜ್ ತಿವಾರಿ 25; ಪ್ರದೀಪ್ ಸಾಂಗ್ವಾನ್ 27ಕ್ಕೆ 2, ಕುಲ್ವಂತ್ 25ಕ್ಕೆ 2), ದಿಲ್ಲಿ 167/8 ( ಧ್ರುವ್ ಶೋರೈ 84, ಲಲಿತ್ ಯಾದವ್ 45; ಕಾನಿಷ್ಕ ಸೇಠ್ 25ಕ್ಕೆ 3, ಸಾಯನ್ ಘೋಷ್ 24ಕ್ಕೆ 3).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News