×
Ad

ಕ್ಯಾಪ್ಟನ್ ಗೋಪಿನಾಥ್ ಮತ್ತಿತರರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

Update: 2018-01-24 22:37 IST

ಬೆಂಗಳೂರು, ಜ.24: ಕಿಂಗ್‌ಫಿಷರ್ ವಿಮಾನ ಯಾನ ಸಂಸ್ಥೆ ಸಾಲ ತೀರಿಸದೆ ಸುಸ್ತಿಯಾಗಿರುವ ಪ್ರಕರಣದಲ್ಲಿ ಗಂಭೀರ ಅಪರಾಧಗಳ ವಂಚನೆ ತನಿಖಾ ಕಚೇರಿ(ಎಸ್‌ಎಫ್‌ಐಒ) ಡೆಕ್ಕನ್ ಚಾರ್ಟರ್ಸ್ ಲಿಮಿಟೆಡ್‌ನ ಕ್ಯಾಪ್ಟನ್ ಗೋಪಿನಾಥ್ ಮತ್ತಿತರರ ವಿರುದ್ಧದ ಹೂಡಿರುವ ಕೇಸುಗಳ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಗೋಪಿನಾಥ್ ಮತ್ತಿತರರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಆಲಿಸಿದ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ಏಕ ಸದಸ್ಯಪೀಠ ಈ ಮಧ್ಯಂತರ ಆದೇಶ ನೀಡಿ, ಎಸ್‌ಎಫ್‌ಐಒಗೆ ನೋಟಿಸ್ ನೀಡಿ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚನೆ ನೀಡಿತು.

ಎಸ್‌ಎಫ್‌ಐಎಂ ಹೂಡಿರುವ ಪ್ರಕರಣಗಳ ವಿಚಾರಣೆ ನಡೆಸಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ, ಐವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ಆ ಆದೇಶಕ್ಕೂ ಇದೀಗ ಹೈಕೋರ್ಟ್ ತಡೆ ನೀಡಿದೆ.

ಮುಂಬೈ ಮೂಲದ ಉದ್ಯಮಿಗಳಾದ ಅಶೋಕ್ ಮತ್ತು ವಿನೋದ, ಆಂಬಿಟ್ ಪ್ರೈವೇಟ್ ಲಿಮಿಟೆಡ್ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದವು.
ಅರ್ಜಿದಾರರ ಪರ ವಕೀಲರು ವಿಶೇಷ ನ್ಯಾಯಾಲಯ ತನ್ನ ವ್ಯಾಪ್ತಿಯನ್ನು ಗಮನಿಸಿಲ್ಲ ಮತ್ತು ಅಪರಾಧ ದಂಡ ಸಂಹಿತೆಯಲ್ಲಿರುವ ನಿಯಮಗಳನ್ನು ಪಾಲನೆ ಮಾಡದೆ ಏಕಾಏಕಿ ವಿಜಯ್ ಮಲ್ಯ ಸೇರಿದಂತೆ 19 ಆರೋಪಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಹಣ ದುರ್ಬಳಕೆ ತಡೆ ಕಾಯಿದೆ 2002ರ ಅಡಿಯಲ್ಲಿ ಸುಪ್ರೀಂಕೋರ್ಟ್ ಇಂಥದ್ದೇ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಬಹುದು, ಆದರೆ ಕಠಿಣ ಷರತ್ತುಗಳನ್ನು ವಿಧಿಸಬೇಕು ಎಂದು ಆದೇಶ ನೀಡಿದೆ ಎಂದು ವಾದಿಸಿದ ವಕೀಲರು, 2013ರ ಕಂಪೆನಿ ಕಾಯಿದೆ ಸೆಕ್ಷನ್ 212ರ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ ಎಂದರು.

ಎಸ್‌ಎಫ್‌ಐಎ ದೂರು ಆರಿಸಿ ಬೆಂಗಳೂರಿನ ವಿಶೇಷ ಕೋರ್ಟ್ 2017ರ ಡಿ.28ರಂದು ಎಲ್ಲ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿಕೊಂಡಿತ್ತಲ್ಲದೆ, ಎಲ್ಲ ಆರೋಪಿಗಳಿಗೂ ಬಂಧನ ವಾರೆಂಟ್ ಜಾರಿಗೊಳಿಸಿತ್ತು, ಕೋಟ್ಯಂತರ ರೂ. ವಂಚನೆ ಆಗಿದೆ ಎನ್ನಲಾಗಿರುವ ಇದು ಗಂಭೀರ ಪ್ರಕರಣ ಎಂದು ವಿಶೇಷ ಕೋರ್ಟ್ ಹೇಳಿಕೆ ನೀಡಿತ್ತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News