ಕರ್ನಿ ಸೇನಾ ಪ್ರತಿಭಟನೆ ವೇಳೆ ತಮ್ಮದೇ ಕಾರ್ಯಕರ್ತನ ಕಾರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು !

Update: 2018-01-25 07:40 GMT

ಭೋಪಾಲ್,ಜ.25 :  ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಿತ ಚಿತ್ರ 'ಪದ್ಮಾವತ್' ಬಿಡುಗಡೆ ವಿರೋಧಿಸಿ ನಗರದಲ್ಲಿ ಬುಧವಾರ ಕರ್ನಿ ಸೇನಾ ಕಾರ್ಯಕರ್ತರು  ಪ್ರತಿಭಟನೆಯ ಭರದಲ್ಲಿ ತಮ್ಮ ಸಹ ಕಾರ್ಯಕರ್ತನೊಬ್ಬನಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಜ್ಯೋತಿ ಟಾಕೀಸ್ ಜಂಕ್ಷನ್ನಿನಲ್ಲಿ ಕರ್ನಿ ಸೇನಾ  ಮತ್ತು ಕೆಲ ಇತರ ಸಂಘಟನೆಗಳು  ಬುಧವಾರ ಸಂಜೆ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದಾಗ  ಹತ್ತಿರದಲ್ಲಿಯೇ ನಿಲ್ಲಿಸಲಾಗಿದ್ದ ಮಾರುತಿ ಸ್ವಿಫ್ಟ್ ಕಾರೊಂದಕ್ಕೆ ಕೆಲ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.  ನಂತರ ಎಂಪಿ 04 ಎಚ್‍ಸಿ 9653 ನೋಂದಣಿ ಸಂಖ್ಯೆ ಹೊಂದಿದ ಈ ಕಾರು ಸುರೇಂದ್ರ ಸಿಂಗ್ ಚೌಹಾಣ್ ಎಂಬ ಕರ್ನಿ ಸೇನಾ ಕಾರ್ಯಕರ್ತನಿಗೆ ಸೇರಿದ್ದು ಎಂದು ತಿಳಿದು ಬಂದಿತ್ತು. ಈತ ಇಡಬ್ಲ್ಯುಎಸ್ ಕಾಲನಿ ನಿವಾಸಿಯಾಗಿದ್ದು ಆರ್ಥಿಕವಾಗಿ ಸಶಕ್ತನಲ್ಲವೆಂದು ತಿಳಿದು ಬಂದಿದೆ.

ಪ್ರತಿಭಟನೆ ವೇಳೆ ಹಿಂದು ಜಾಗರಣ ಮಂಚ್ ಕಾರ್ಯಕರ್ತರೂ ಇದ್ದು ಅಲ್ಲಿ ಈ ಹಿಂದೆ ಹಾಕಲಾಗಿದ್ದ ಬಿಜೆಪಿ ನಾಯಕರ ಹಾಗೂ ಸಚಿವರುಗಳ ಪೋಸ್ಟರುಗಳನ್ನು ಹರಿದು ಹಾಕಿದ್ದರು.

ಪೊಲೀಸರು ಆರು ಮಂದಿಯನ್ನು  ಬಂಧಿಸಿ ಠಾಣೆಗೆ ಕರೆದೊಯ್ದ ಕೂಡಲೇ ಠಾಣೆಯೆದುರು ಜಮಾಯಿಸಿದ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಕಾರಿನ ಮಾಲಕ ಯಾರ ವಿರುದ್ಧವೂ ದೂರು ನೀಡಿಲ್ಲದೇ ಇರುವುದರಿಂದ ಯಾರ ವಿರುದ್ಧವೂ ಪ್ರಕರಣ ದಾಖಲಿಸದಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News