×
Ad

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

Update: 2018-01-25 18:14 IST

ಬೆಂಗಳೂರು, ಜ.25: ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಮಾಜಕ್ಕೆ 70 ವರ್ಷಗಳಿಂದ ಸಲ್ಲಿಸಿರುವ ಅಪರಿಮಿತ ಸೇವೆಯನ್ನು ಸ್ಮರಿಸಿ ದೇಶದ ಅತ್ಯುನ್ನತ ನಾಗರಿಕ ಸನ್ಮಾನ ‘ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸುವಂತೆ ಪ್ರಧಾನಿ ನರೇಂದ್ರಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಸಿದ್ದಗಂಗಾ ಮಠಕ್ಕೆ ಸುಮಾರು 600 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. 1941ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡ ಡಾ.ಶಿವಕುಮಾರ ಸ್ವಾಮೀಜಿ 1908ರ ಎಪ್ರಿಲ್ 1ರಂದು ಜನಿಸಿದರು. 110 ವಯೋಮಾನದವರಾಗಿದ್ದರೂ ಇಂದಿಗೂ ಮಠದ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜಾತಿ, ಧರ್ಮದ ಭೇದ ಭಾವವಿಲ್ಲದೆ ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಶಿವಕುಮಾರಸ್ವಾಮೀಜಿ ಸ್ಥಾಪನೆ ಮಾಡಿರುವ ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿಯು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ 130ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಈ ಸಂಸ್ಥೆಗಳು ಸಂಸ್ಕೃತ ಶಿಕ್ಷಣದಿಂದ ಹಿಡಿದು ಎಂಜಿನಿಯರಿಂಗ್, ತಾಂತ್ರಿಕ ಶಿಕ್ಷಣವನ್ನು ನೀಡುತ್ತಿವೆ. ಶೈಕ್ಷಣಿಕ ಅಭಿವೃದ್ಧಿಯಲ್ಲಿ ಇದು ಬಹುದೊಡ್ಡ ಕೊಡುಗೆಯಾಗಿದೆ.

ಸಿದ್ದಗಂಗಾಮಠವು ಸುಮಾರು 9 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣವನ್ನು ನೀಡುತ್ತಿದೆ. ಸಮಾಜದ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ರಂಗದಲ್ಲಿ ಸುಮಾರು 7ದಶಕಗಳಿಗೂ ಹೆಚ್ಚಿನ ಕಾಲ ಅವಿಸ್ಮರಣೀಯ ಸೇವೆಯನ್ನು ಶಿವಕುಮಾರಸ್ವಾಮೀಜಿ ಸಲ್ಲಿಸಿದ್ದಾರೆ. ತಮ್ಮ ಜೀವನವನ್ನೇ ಮಾನವ ಕಲ್ಯಾಣಕ್ಕೆ ಮುಡಿಪಾಗಿಟ್ಟಿದ್ದಾರೆ. ಸಿದ್ದಗಂಗಾ  ಮಠದ ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಚಿರಪರಿಚಿತವಾಗಿರುವ ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ಸಿಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News