×
Ad

ಕೇಂದ್ರ ಸರಕಾರದ ವಿರುದ್ಧ ಕನ್ನಡಿಗರ ದಂಗೆ: ವಾಟಾಳ್ ನಾಗರಾಜ್

Update: 2018-01-25 18:21 IST

ಬೆಂಗಳೂರು, ಜ.25: ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಮಧ್ಯಪ್ರವೇಶ ಮಾಡದಿದ್ದರೆ ಕೇಂದ್ರ ಸರಕಾರದ ವಿರುದ್ಧ ಸಮಗ್ರ ಕನ್ನಡಿಗರು ದಂಗೆ ಏಳಲಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನವನದವರೆಗೆ ಸಾವಿರಾರು ಮಂದಿ ಕನ್ನಡಪರ ಕಾರ್ಯಕರ್ತರೊಂದಿಗೆ ನಡೆಸಿದ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸಚಿವರು ಕರ್ನಾಟಕಕ್ಕೆ ಬಂದರೆ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ. ಉತ್ತರ ಕರ್ನಾಟಕದ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನರೇಂದ್ರ ಮೋದಿಯನ್ನು ನಮ್ಮ ಪ್ರಧಾನಿ ಎಂದು ಕರೆಯಲು ನೋವಾಗುತ್ತದೆ ಎಂದು ಅವರು ಹೇಳಿದರು.

ಮೂರು ವರ್ಷಗಳಿಂದ ನಿರಂತರವಾಗಿ ನರಗುಂದ, ನವಲಗುಂದ, ಅಣ್ಣಿಗೇರಿಯಲ್ಲಿ ಉತ್ತರ ಕರ್ನಾಟಕದ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಪ್ರಧಾನಿ ನರೇಂದ್ರಮೋದಿ ಐದು ಬಾರಿ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಆದರೆ, ಒಮ್ಮೆಯೂ ಕಳಸಾ ಬಂಡೂರಿ ಬಗ್ಗೆ ಮಾತನಾಡಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಫೆ.4ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅಷ್ಟರಲ್ಲಿ ಅವರು ಈ ಬಗ್ಗೆ ಮಧ್ಯಸ್ಥಿಕೆ ವಹಿಸುವ ಭರವಸೆಯನ್ನು ನೀಡಬೇಕು. ಇಲ್ಲದಿದ್ದರೆ, ಅಂದು ಮೈಸೂರು ಬ್ಯಾಂಕ್ ವೃತ್ತದಿಂದ ಪ್ರಧಾನಿಯ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಒಂದು ಲಕ್ಷ ಜನರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ತಾಕತ್ತಿದ್ದರೆ ಪೊಲೀಸರು ನಮ್ಮನ್ನು ತಡೆಯಲಿ ನೋಡೋಣ ಎಂದು ಅವರು ಸವಾಲು ಹಾಕಿದರು.

ರಾಜ್ಯ ಬಿಜೆಪಿ ಮನಸ್ಸು ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ರಾಜ್ಯದಲ್ಲಿ ಹೆಚ್ಚಿನ ಬಿಜೆಪಿ ಸಂಸದರಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲಿಯೂ ಬಿಜೆಪಿ ಆಡಳಿತ ನಡೆಸುತ್ತಿದೆ. ಪ್ರಧಾನಮಂತ್ರಿ ಈ ವಿಚಾರದಲ್ಲಿ ಮೌನವಹಿಸುವುದು ಬೇಡ, ಸಮಸ್ಯೆಯನ್ನು ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಕರ್ನಾಟಕ ಏಕೀಕರಣವಾದ ನಂತರ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕವನ್ನು ಕಡೆಗಣಿಸಲಾಗಿದೆ. ನಮ್ಮ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗೋವಾ, ಆಂಧ್ರ ಸುತ್ತಮುತ್ತಲಿನ ರಾಜ್ಯಗಳಿಂದ ನಮಗೆ ತೊಂದರೆಯಾಗುತ್ತಿದೆ. ನಾವು ಯಾರಿಗೂ ಹೆದರಬೇಕಾಗಿಲ್ಲ. ಮೇಕೆದಾಟು ಕುಡಿಯುವ ನೀರು ಯೋಜನೆಗೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಜತೆಗೆ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ರಾಮನಗರ, ಚಾಮರಾಜನಗರ, ಬೆಂಗಳೂರು, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಈ ಯೋಜನೆಯಿಂದ ಸಿಗುತ್ತದೆ ಎಂದು ಅವರು ಹೇಳಿದರು.

ಇದೊಂದು ಐತಿಹಾಸಿಕವಾದ ದಿನ, ಕರ್ನಾಟಕದಲ್ಲಿ ಇಂತಹ ಬಂದ್ ಯಾವತ್ತೂ ನಡೆದಿರಲಿಲ್ಲ. ಈ ಬಂದ್ ಬಗ್ಗೆ ಕೆಲವರು ಅಪಪ್ರಚಾರ ನಡೆಸಿದರು. ಆದರೂ, ಕನ್ನಡಿಗರ ಶಕ್ತಿ ಪ್ರದರ್ಶನವಾಗಿದೆ. ಕನ್ನಡ ಒಕ್ಕೂಟದ ಮುಖಂಡರು ಒಂದು ಶಕ್ತಿಯಾಗಿ ಈ ಕೆಲಸವನ್ನು ಸಾಕಾರಗೊಳಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಕರ್ನಾಟಕ ಬಂದ್‌ಗೆ ಬಿಜೆಪಿ ಬಿಟ್ಟು ಎಲ್ಲರೂ ಬೆಂಬಲ ನೀಡಿದ್ದಾರೆ. ಬಿಜೆಪಿ ಬೆಂಬಲ ನೀಡಿದ್ದರೆ ಸ್ವಾಗತಿಸುತ್ತಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಬಹಿರಂಗವಾಗಿ ಬೆಂಬಲ ನೀಡಿದೆ. ಅದೇ ರೀತಿ ಜೆಡಿಎಸ್ ಬೆಂಬಲ ನೀಡಿದೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ವಾಟಾಳ್ ನಾಗರಾಜ್ ತಿಳಿಸಿದರು.

ಕನ್ನಡಿಗರ ಪರವಾಗಿ ಯಾರು ಹೋರಾಟ ಮಾಡುತ್ತಾರೋ ಅವರಿಗೆ ಧನ್ಯವಾದಗಳು. 2018ರ ಚುನಾವಣೆಯಲ್ಲಿ ಕನಿಷ್ಟ 50 ಜನವಾದರೂ ಕನ್ನಡದ ಕಟ್ಟಾಳುಗಳು ವಿಧಾನಸೌಧದಲ್ಲಿ ಕನ್ನಡದ ಬಾವುಟವನ್ನು ಹಾರಿಸಬೇಕು. ಅದಕ್ಕಾಗಿ ರಾಜ್ಯದ ಜನರು ಬೆಂಬಲ ನೀಡಬೇಕು ಎಂದು ವಾಟಾಳ್‌ ನಾಗರಾಜ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಎಚ್.ವಿ.ಗಿರೀಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಸದರಿಗೆ ಗೃಹ ಬಂಧನ
ಕರ್ನಾಟಕ ಬಂದ್‌ಗೆ ಬಿಜೆಪಿ ಬಿಟ್ಟು ಎಲ್ಲರೂ ಬೆಂಬಲ ನೀಡಿದ್ದಾರೆ. ಒಂದೂವರೆ ತಿಂಗಳಲ್ಲಿ ಮಹಾದಾಯಿ, ಕಳಸಾ ಬಂಡೂರಿ ಯೋಜನೆಯ ಸಮಸ್ಯೆ ಇತ್ಯರ್ಥವಾಗಬೇಕು. ಇಲ್ಲದಿದ್ದರೆ, ನಮ್ಮ ಹೋರಾಟದ ಮುಂದುವರೆದ ಭಾಗವಾಗಿ ರಾಜ್ಯದ ಎಲ್ಲ ಸಂಸದರನ್ನು ಗೃಹ ಬಂಧನದಲ್ಲಿರಿಸಲಾಗುವುದು. ಅವರು ಮನೆಯಿಂದ ಹೊರಗಡೆ ಬರಲು ಬಿಡುವುದಿಲ್ಲ.
-ವಾಟಾಳ್ ನಾಗರಾಜ್, ಹಿರಿಯ ಕನ್ನಡ ಹೋರಾಟಗಾರ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News