ಮಹಾದಾಯಿಗಾಗಿ 'ಕರ್ನಾಟಕ ಬಂದ್' : ಬಹುತೇಕ ಯಶಸ್ವಿ

Update: 2018-01-25 14:12 GMT

ಬೆಂಗಳೂರು, ಜ.25: ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಬಹುತೇಕ ಯಶಸ್ವಿಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ನಗರದಲ್ಲೆಡೆ ವ್ಯಾಪಕ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತಾದರೂ ಮಲ್ಲೇಶ್ವರಂ, ಅವಿನ್ಯೂ ರಸ್ತೆ ಸೇರಿದಂತೆ, ಕೆಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಹೊಟೇಲ್ ಹಾಗೂ ಅಂಗಡಿ, ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಗಳು ನಡೆದಿವೆ. ಪೊಲೀಸರ ಗಸ್ತು ವಾಹನಗಳು ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ವಿವಿದೆಡೆ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಾ, ಯಾವುದೆ ಅಹಿತಕರ ಘಟನೆಗಳು ಜರುಗಲು ಅವಕಾಶ ನೀಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಚಾಮರಾಜನಗರ, ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ, ನವಲಗುಂದ, ಹಾವೇರಿ ಸೇರಿದಂತೆ ವಿವಿದೆಡೆ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ, ಹೋರಾಟಗಾರರು ಗೋವಾ ಮತ್ತು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದಲೇ ಬಿಎಂಟಿಸಿ, ಕೆಎರ್ಸ್ಸಾಟಿಸಿ ಬಸ್ಸುಗಳ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು, ಬಸ್ ನಿಲ್ದಾಣಗಳಲ್ಲೆ ಪರದಾಡುವಂತಾಗಿತ್ತು. ಇದರಿಂದಾಗಿ, ಕೆಲವು ಆಟೊ ಚಾಲಕರು ಪ್ರಯಾಣಿಕರದಿಂದ ದುಪ್ಪಟ್ಟು ಹಣ ವಸೂಲು ಮಾಡಿದ ಆರೋಪಗಳು ಕೇಳಿ ಬರುತ್ತಿದ್ದವು. ಅದೇ ವೇಳೆ, ಅಂಗವಿಕಲರಿಗೆ, ಗರ್ಭಿಣಿ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ಒದಗಿಸುತ್ತಿದ್ದ ಆಟೋ ಚಾಲಕರು ಕಂಡು ಬಂದರು.

ರೈಲು ತಡೆ: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ತಡೆಯಲು ಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಇದಕ್ಕೂ ಮೊದಲು ರೈಲು ನಿಲ್ದಾಣದೊಳಗೆ ಪ್ರವೇಶಿಸಿದ್ದ ಸಂಘಟನೆಯ ಮಹಿಳಾ ಕಾರ್ಯಕರ್ತರು, ಚೆನ್ನೈ ಎಕ್ಸ್‌ಪ್ರೆಸ್ ರೈಲನ್ನು ತಡೆದು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಯತ್ನಿಸಿದರು.

ಅಲ್ಲದೆ, ಕೇಂದ್ರ ಸರಕಾರದ ಅಧೀನದಲ್ಲಿರುವ ಅಂಚೆ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿಗಳು ಹಾಗೂ ಬೆಂಗಳೂರಿನ ದೂರದರ್ಶನ ಕೇಂದ್ರದ ಕಚೇರಿಗೂ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಸುಗಳು ಸಂಜೆ 4 ಗಂಟೆಯವೆಗೆ ರಸ್ತೆಗಿಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಮೆಜೆಸ್ಟಿಕ್ ಬಸ್‌ನಿಲ್ದಾಣವು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಅಲ್ಲದೆ, ಅವಿನ್ಯೂ ರಸ್ತೆ, ಎಸ್.ಪಿ.ರಸ್ತೆ, ಜೆ.ಸಿ.ರಸ್ತೆ ಸೇರಿದಂತೆ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಜನರ ಸಂಚಾರ ವಿರಳವಾಗಿತ್ತು.

ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡುವುದಾಗಿ ನಿನ್ನೆ ಘೋಷಿಸಿದ್ದ ಹೊಟೇಲ್‌ಗಳು, ಪೆಟ್ರೋಲ್ ಬಂಕ್‌ಗಳು ಇಂದು ತೆರೆಯದೆ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದವು. ಅಲ್ಲದೆ, ಕನ್ನಡ ಚಲನಚಿತ್ರ ಮಂದಿರಗಳು ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿ ಬೆಂಬಲ ನೀಡಿದವು. ಸಂಜೆ 4.30 ರಿಂದ ಚಲನಚಿತ್ರ ಮಂದಿರಗಳು ಎಂದಿನಂತೆ ಕಾರ್ಯ ಆರಂಭಿಸಿದವು. 

ಮಾಲ್‌ಗಳ ಬೆಂಬಲ: ನಗರದ ಮಂತ್ರಿಮಾಲ್, ಓರಿಯನ್ ಮಾಲ್, ಸೆಂಟ್ರಲ್ ಮಾಲ್, ಗರುಡಾ ಮಾಲ್, ಗೋಪಾಲನ್ ಮಾಲ್, ಫಿನಿಕ್ಸ್ ಮಾಲ್, ವಿ.ಆರ್.ಮಾಲ್, ಬಿಗ್‌ಜಬಾರ್, ಮೋರ್ ಸೇರಿದಂತೆ ಹಲವಾರು ಮಾಲ್‌ಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು.

ಬೀದಿ ಬದಿ ವ್ಯಾಪಾರಿಗಳ ಮಾನವೀಯತೆ: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಸುಗಳಲ್ಲಿದ್ದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಸದಸ್ಯರು, ಉಚಿತವಾಗಿ ಊಟ ಹಾಗೂ ನೀರು ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆದರು.

ಬೆಳಗ್ಗೆಯಿಂದಲೇ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದ್ದಲ್ಲದೆ, ಬಸ್ ನಿಲ್ದಾಣದ ಸುತ್ತಮುತ್ತಲ ಹೊಟೇಲ್‌ಗಳು ಮುಚ್ಚಲ್ಪಟ್ಟಿದ್ದವು. ಇದರಿಂದಾಗಿ, ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಊಟ, ತಿಂಡಿ ಸಿಗದೆ ಪರದಾಡುವಂತಾಗಿತ್ತು. ಮಧ್ಯಾಹ್ನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಒಕ್ಕೂಟದ ಪದಾಧಿಕಾರಿಗಳು ಸುಮಾರು 200 ಮಂದಿಗೆ ಉಚಿತವಾಗಿ ಜೋಳದ ರೊಟ್ಟಿ, ಚಟ್ನಿ, ಮೊಸರು ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸಿದರು.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ರೈಲುಗಳನ್ನು ತಡೆಯಲು ಯತ್ನಿಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಚನ್ನಮ್ಮ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನು ನಡೆಸಿದವು.

ಮೋದಿ ಅಣಕು ಶವಯಾತ್ರೆ: ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿ, ಅಣಕು ಶವಯಾತ್ರೆಯನ್ನು ಮಾಡಿದ ಹೋರಾಟಗಾರರು, ಬಿಜೆಪಿ ನಾಯಕರು ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಧಾರವಾಡದ ಜ್ಯೂಬಿಲಿ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರೈತರು ಅರೆಬೆತ್ತಲಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ಪ್ರತಿಭಟನೆ ನಡೆಸಿದರು.

ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News