ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು: ಬಿಎಸ್‌ಎನ್‌ಎಲ್‌ಗೆ ಕೋಟ್ಯಂತರ ರೂ. ನಷ್ಟ

Update: 2018-01-25 14:25 GMT

ಬೆಂಗಳೂರು, ಜ.25: ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಿಗೆ ಮಾರ್ಪಾಡು ಮಾಡಿ ಸರಕಾರಕ್ಕೆ ಮತ್ತು ಬಿಎಸ್‌ಎನ್‌ಎಲ್ ಸಂಸ್ಥೆಗೆ ಕೋಟ್ಯಾಂತರ ರೂ. ನಷ್ಟವನ್ನುಂಟು ಮಾಡಿ ಅಕ್ರಮ ಲಾಭ ಮಾಡಿಕೊಳ್ಳುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ ಪ್ರಗತಿನಗರದ ಗೋಪಾಲಕೃಷ್ಣ ವರ್ಮ(35) ಬಂಧಿತ ಆರೋಪಿ ಎಂದು ಸಿಸಿಬಿ ತಿಳಿಸಿದೆ.

ನಗರದ ಬಾಬುಸಾಪಾಳ್ಯದ ಡಿಆರ್ ಲೇಔಟ್‌ನ ಮನೆಯೊಂದರಲ್ಲಿ ಅಕ್ರಮವಾಗಿ ಟೆಲಿಫೋನ್ ಎಕ್ಸ್‌ಚೇಂಜ್ ನೆಟ್‌ವರ್ಕ್-ಇಂಟರ್‌ನೆಟ್‌ಗೆ ಸಂಪರ್ಕ ಕಲ್ಪಿಸಿಕೊಂಡು ಅಮೆರಿಕಾದ ಗುಡ್‌ನ್ ಎಂಬ ವ್ಯಕ್ತಿಯ ಸಹಾಯದಿಂದ ಯುಎಸ್‌ಎ ಚಿಕಾಗೋನಲ್ಲಿರುವ ಯುನಿಟೆಲ್ ಎಂಬ ಕಂಪೆನಿಯ ಸಂಪರ್ಕದೊಂದಿಗೆ, ಉಚಿತ ಕರೆ ಸಿಮ್ ಸಹಾಯದಿಂದ ವಿದೇಶಿ ಅಂತರ್ಜಾಲ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದ. ವಿದೇಶಿ ಕರೆಗಳಿಗಿಂತ ಕಡಿಮೆ ದರಕ್ಕೆ ಕೆಲವು ಕಂಪೆನಿ- ಸಂಸ್ಥೆಯ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದ್ದ. ದೇಶದಲ್ಲಿರುವ ಗ್ರಾಹಕರು ಮಾಡುವ ಇಂಟರ್‌ನೆಟ್ ಕರೆಗಳಿಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ರೂಟ್ ಮಾಡಿ ಕರೆಗಳು ಇಲ್ಲಿಂದಲೇ ಜನರೇಟ್ ಆದಂತೆ ಅಕ್ರಮ ಲಾಭ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮಾಹಿತಿ ಅರಿತು ಸ್ಥಳಕ್ಕೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಸಿಬಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಗೋಪಾಲಕೃಷ್ಣ ವರ್ಮನಿಂದ 2 ಲಕ್ಷ ರೂ.ಮೌಲ್ಯದ ನಾಲ್ಕು ಸಿಮ್‌ಬಾಕ್ಸ್, ಮೂರು ಡಿ-ಲಿಂಕ್,ಕಂಪ್ಯೂಟರ್, ಮೊಬೈಲ್ ವಶಕ್ಕೆ ಪಡೆದು, ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೋಟ್ಯಂತರ ರೂ.ನಷ್ಟ

ಈ ಅಕ್ರಮದಿಂದಾಗಿ ಬಿಎಸ್‌ಎನ್‌ಎಲ್ ಕಂಪೆನಿಗೆ ಸುಮಾರು 9.50 ಕೋಟಿ ರೂ. ಮತ್ತು ಕೇಂದ್ರ ಸರಕಾರಕ್ಕೆ ಸುಮಾರು 75 ಲಕ್ಷ ರೂ. ತೆರಿಗೆ ಹಣ ನಷ್ಟವಾಗಿದೆ ಎಂದು ಸಿಸಿಬಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News