×
Ad

‘ಕರ್ನಾಟಕ ಬಂದ್’ ಸರಕಾರ ಪ್ರಾಯೋಜಿತವಲ್ಲ: ಗೃಹ ಸಚಿವ ರಾಮಲಿಂಗಾ ರೆಡ್ದಿ

Update: 2018-01-25 20:07 IST

ಬೆಂಗಳೂರು, ಜ. 25: ಮಹಾದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೂ ರಾಜ್ಯ ಸರಕಾರಕ್ಕೆ ಯಾವುದೇ ಸಂಬಂಧವಿಲ್ಲ. ಈ ಬಂದ್ ಸರಕಾರ ಪ್ರಾಯೋಜಿತ ಅಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಬಂದ್ ಕರೆ ಕೊಟ್ಟಿವೆ. ಅವರ್ಯಾರು ನಮ್ಮ ಅನುಮತಿ ಕೇಳಿ ಬಂದ್ ಕರೆ ನೀಡಿಲ್ಲ. ಬಿಜೆಪಿ ಮುಖಂಡರು ಆಧಾರರಹಿತ ಆರೋಪ ಮಾಡುತ್ತಿದ್ದು, ಸುಳ್ಳು ಹೇಳುವುದು ಅವರ ಕಸುಬು ಎಂದು ಟೀಕಿಸಿದರು.

ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಹತ್ತು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಪ್ರಧಾನಿ ಮೋದಿ ಅವರು ಹಲವು ಬಾರಿ ಬಂದು ಹೋಗಿದ್ದಾರೆ. ಕುಡಿಯುವ ನೀರು, ಉತ್ತರ ಕರ್ನಾಟಕದ ರೈತರ ಸಮಸ್ಯೆಗಿಂತ ಅವರ ಪಕ್ಷದ ರಾಷ್ಟ್ರೀಯಾಧ್ಯಕ್ಷರ ಸಭೆ ಮುಖ್ಯವಾಗಿದ್ದರೆ ಅವರು ಕನ್ನಡಪರ ಸಂಘಟನೆಗಳೊಂದಿಗೆ ಮಾತನಾಡಿ ಬಂದ್ ಹಿಂಪಡೆಯುವಂತೆ ಮನವೊಲಿಸಬೇಕಿತ್ತು. ಅನಗತ್ಯವಾಗಿ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಸಲ್ಲದು ಎಂದು ತಿರುಗೇಟು ನೀಡಿದರು.

ಗೋವಾ ಸಿಎಂ ಹಾಗೂ ಬಿಎಸ್‌ವೈ ಅವರನ್ನು ಕರೆಸಿ ಅಮಿತ್ ಶಾ ತಮ್ಮ ಮನೆಯಲ್ಲಿ ಸಭೆ ನಡೆಸಿದ್ದಾರೆ. ಗೋವಾ ಸಿಎಂ ಪತ್ರ ಬರೆದಿದ್ದಾರೆಂದು ಬಿಎಸ್‌ವೈ ನಾಟಕ ಮಾಡಿದ್ದು ಎಲ್ಲರಿಗೆ ಗೊತ್ತು ಎಂದ ಅವರು, ನಾವು ಕರ್ನಾಟಕ ರಾಜ್ಯದ ರೈತರ ಪರವಾಗಿದ್ದೇವೆ ಎಂದು ಅವರು ತಿಳಿಸಿದರು.

ಬಂದ್ ವೇಳೆ ರಾಜ್ಯದಲ್ಲಿ ಎಲ್ಲಿಯೂ ಯಾವುದೇ ಅಹಿತರಕ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. 65 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 15 ಪ್ಲಟೂನ್‌ಗಳನ್ನು ನಿಯೋಜಿಸಲಾಗಿದೆ ಎಂದ ಅವರು, ಅಗತ್ಯವಿರುವ ಕಡೆಗಳಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News