ಬಂದ್ ವಿರುದ್ಧ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

Update: 2018-01-25 18:21 GMT

ಬೆಂಗಳೂರು, ಜ.25: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಹಾಗೂ ಬೆಂಗಳೂರು ಬಂದ್ ವಿರುದ್ಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಇಲಾಖೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ವಾಟಾಳ್ ನಾಗರಾಜ್ ಕರೆ ನೀಡಿರುವ ಜ.25ರ ಕರ್ನಾಟಕ ಬಂದ್ ಹಾಗೂ ಫೆ.4ರ ಬೆಂಗಳೂರು ಬಂದ್ ಅನ್ನು ಅಸಂವಿಧಾನಿಕ, ಅಕ್ರಮ ಹಾಗೂ ನಿರಂಕುಶ ಮತ್ತು ಪ್ರಜೆಗಳ ಮೂಲಭೂತ ಹಕ್ಕುಗಳಲ್ಲಿನ ಮಧ್ಯಪ್ರವೇಶ ಎಂಬುದಾಗಿ ಘೋಷಿಸಬೇಕು. ಅಲ್ಲದೆ, ಬಂದ್ ತಡೆಯಲು ಅಗತ್ಯ ಕ್ರಮ ಜರುಗಿಸಲು, ಬಂದ್‌ನಿಂದ ರಾಜ್ಯ ಬೊಕ್ಕಸಕ್ಕೆ ಉಂಟಾಗುವ ನಷ್ಟ ವಾಟಾಳ್ ನಾಗರಾಜ್ ಮತ್ತಿತರರಿಂದ ವಸೂಲಿ ಮಾಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಬಂದ್ ನಡೆಸುವುದಕ್ಕೆ ತಡೆಯಾಜ್ಞೆ ನೀಡಬೇಕು. ಬಂದ್‌ಗೆ ಅನುಮತಿ ನೀಡದಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಬಂದ್ ನಡೆಸಲು ಉದ್ದೇಶಿಸುವ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಜರುಗಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಬಂದ್ ನಡೆಸಬೇಕಾದರೆ 500 ಕೋಟಿ ರೂ. ಭದ್ರತಾ ಠೇವಣಿಯಾಗಿಸಲು ವಾಟಾಳ್ ನಾಗರಾಜ್ ನಿದೇಶಿಸಬೇಕು. ಅರ್ಜಿ ಕುರಿತು ಅಂತಿಮ ಆದೇಶ ಹೊರಡಿಸುವಾಗ ಬಂದ್ ವೇಳೆ ನಷ್ಟಕ್ಕೆ ಗುರಿಯಾದವರಿಗೆ ಪರಿಹಾರ ವಿತರಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.

ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ಕೇವಲ 10 ದಿನಗಳ ಅಂತರದಲ್ಲಿ ಅಂದರೆ ಎರಡು ಬಂದ್‌ಗೆ (ಜ.25 ಮತ್ತು ಫೆ.4ರಂದು) ಕರೆ ನೀಡಲಾಗಿದೆ. ರಾಜ್ಯ ಸರಕಾರ ಸಹ ಬಂದ್ ತಡೆಯಲು ಬಯಸಿಲ್ಲ. ಬಂದ್‌ನಿಂದ ವಿದ್ಯಾರ್ಥಿಗಳಿಗೆ, ದಿನಗೂಲಿ ಕಾರ್ಮಿಕರಿಗೆ ಮತ್ತು ರಾಜ್ಯದ ಜನತೆಗೆ ಸಾಕಷ್ಟು ತೊಂದರೆ ಉಂಟಾಗಲಿದೆ. ಮೇಲಾಗಿ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಹೀಗಾಗಿ, ಬಂದ್ ನಡೆಸಲು ಅವಾಶ ಕಲ್ಪಿಸಬಾರದು ಎಂಬುದು ಅರ್ಜಿದಾರರ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News