ಬೆಂಗಳೂರು: ಜ.26 ರಿಂದ ಇಂದಿರಾ ಮೊಬೈಲ್ ಕ್ಯಾಂಟೀನ್

Update: 2018-01-25 18:23 GMT

ಬೆಂಗಳೂರು, ಜ.25: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗದ ಕೊರತೆ ಇರುವ ಕಡೆ ಜ.26 ರಿಂದ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಮುಂದಾಗಿದ್ದು, ನಗರದ ವಿವಿಧೆಡೆ 24 ಇಂದಿರಾ ಮೊಬೈಲ್ ಕ್ಯಾಂಟೀನ್‌ಗಳು ಕಾರ್ಯಾರಂಭವಾಗಲಿವೆ.

ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಮೊಬೈಲ್ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ, 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. ಉಳಿದ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸ್ಥಳದ ಅಭಾವವಿದ್ದರಿಂದ ಸಾಧ್ಯವಾಗಿರಲಿಲ್ಲ.
 
ಅಂತಹ ಕಡೆ ಮೊಬೈಲ್ ಕ್ಯಾಂಟೀನ್ ಆರಂಭಕ್ಕೆ ಮಾಡಲಾಗುತ್ತಿದೆ. ಹೀಗಾಗಿ, ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದಂತಾಗುತ್ತದೆ.

ಮೊಬೈಲ್ ಕ್ಯಾಂಟೀನ್ ವಿಶೇಷ: ಮೊಬೈಲ್ ಕ್ಯಾಂಟೀನ್‌ಗಾಗಿ ವಿಶೇಷ ಮಾದರಿಯಲ್ಲಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಆಹಾರ ವಿತರಿಸಲು ಪ್ರತ್ಯೇಕ ಆಹಾರದ ಕೌಂಟರ್‌ಗಳು ಮತ್ತು ನಗದು ಕೌಂಟರ್‌ಗಳನ್ನು ಅಳವಡಿಸಲಾಗಿದೆ. ಮಳೆ ಮತ್ತು ಬಿಸಿಲಿನ ರಕ್ಷಣೆಗಾಗಿ ಬಸ್‌ನ ಭಾಗಗಳಲ್ಲಿ ವಿಸ್ತರಿಸಬಹುದಾದ ಮೇಲ್ಛಾವಣಿ ನಿರ್ಮಿಸಲಾಗಿದೆ. ಬೆಳಗ್ಗೆ 7 ಗಂಟೆ, ಮಧ್ಯಾಹ್ನ 12.30 ಹಾಗೂ ರಾತ್ರಿ 7.30ಕ್ಕೆ ಇಂದಿರಾ ಕ್ಯಾಟೀನ್‌ಗಳಲ್ಲಿ ಆಹಾರ ಲಭ್ಯವಿರಲಿದೆ.

ಎಲ್ಲೆಲ್ಲಿ ಮೊಬೈಲ್ ಕ್ಯಾಂಟೀನ್: ಪೂರ್ವವಲಯದ ಕಾಚರಕನಹಳ್ಳಿ, ಮೋರಾಯನ ಪಾಳ್ಯ, ಹಲಸೂರು. ಪಶ್ಚಿಮ ವಲಯದ ಮೆಜೆಸ್ಟಿಕ್, ಕಾಡು ಮಲ್ಲೇಶ್ವರ, ಓಕಳಿಪುರ ದಯಾನಂದನಗರ, ಬಸವೇಶ್ವರನಗರ, ಚಾಮರಾಜಪೇಟೆ, ಶ್ರೀರಾಮ ಮಂದಿರ. ದಕ್ಷಿಣವಲಯದ ಶ್ರೀನಗರ, ಗಿರಿನಗರ, ಮಡಿವಾಳ, ಜಯನಗರ, ಜೆ.ಪಿ.ನಗರ, ಕೆಂಪಾಪುರ ಅಗ್ರಹಾರ, ಬಾಪೂಜಿನಗರ, ಯಡಿಯೂರು. ಬೊಮ್ಮನಹಳ್ಳಿ ವಲಯದ ಯಲೇಚನಹಳ್ಳಿ. ರಾಜ ರಾಜೇಶ್ವರಿ ನಗರವಲಯದ ಲಕ್ಷ್ಮಿದೇವಿನಗರ, ಜ್ಞಾನಭಾರತಿ, ಲಗ್ಗೆರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News