ಸೈನಾ, ಸಿಂಧು ಕ್ವಾರ್ಟರ್ ಪೈನಲ್ ಗೆ

Update: 2018-01-25 18:35 GMT

ಜಕಾರ್ತ, ಜ.25: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು 350,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿರುವ ಸೈನಾ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.20ನೇ ಆಟಗಾರ್ತಿ ಚೀನಾದ ಚೆನ್ ಕ್ಸಿಯಾಕ್ಸಿನ್ ವಿರುದ್ಧ 21-12, 21-18 ಗೇಮ್‌ಗಳಿಂದ ಜಯ ಸಾಧಿಸಿದರು.

ಮತ್ತೊಂದು ಏಕಪಕ್ಷೀಯವಾಗಿ ಸಾಗಿದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಪಿ.ವಿ. ಸಿಂಧು ಮಲೇಷ್ಯಾದ ಗೊ ವೀ ಅವರನ್ನು 21-12, 21-9 ಅಂತರದಿಂದ ಸೋಲಿಸಿದ್ದಾರೆ.

ಸೈನಾ ಹಾಗೂ ಸಿಂಧು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಈ ಮೊದಲು 2 ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದು ಬಾರಿ ಜಯ ಸಾಧಿಸಿದ್ದಾರೆ. 2014ರ ಸೈಯದ್ ಮೋದಿ ಜಿಪಿ ಗೋಲ್ಡ್ ಟೂರ್ನಿಯಲ್ಲಿ ಸೈನಾ ಅವರು ಸಿಂಧುರನ್ನು ಸೋಲಿಸಿದ್ದರು. ಕಳೆದ ವರ್ಷ ನಡೆದ ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಸಿಂಧು ಅವರು ಸೈನಾರನ್ನು ಮಣಿಸಿದ್ದರು.

ಪುರುಷರ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಲಿಯೊ ಮಿನ್ ಚುನ್ ಹಾಗೂ ಸು ಚಿಂಗ್ ಹೆಂಗ್‌ರನ್ನು 21-17, 21-16 ಗೇಮ್‌ಗಳಿಂದ ಮಣಿಸಿರುವ ಭಾರತದ ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News