ಪ್ರಧಾನಿ 'ಪಕೋಡಾ' ಹೇಳಿಕೆಗೆ ಖಂಡನೆ : ಬಿಜೆಪಿ ಕಚೇರಿ ಮುಂಭಾಗ ಪಕೋಡಾ ಮಾರಿ ಪ್ರತಿಭಟನೆ
ಬೆಂಗಳೂರು, ಜ.27: ಉದ್ಯೋಗ ಕೇಳಿದರೆ ‘ಪಕೋಡಾ ಮಾರುವುದು ಉದ್ಯೋಗವಲ್ಲವೆ’ ಎಂದಿರುವ ನರೇಂದ್ರ ಮೋದಿಯ ಹೇಳಿಕೆಯನ್ನು ಖಂಡಿಸಿ ಉದ್ಯೋಗಕ್ಕಾಗಿ ಯುವ ಜನತೆ ಸಂಘಟನೆಯ ಕಾರ್ಯಕರ್ತರು ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗ ಪಕೋಡ ಮಾರುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದರು.
ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡಾ ಮಾರುವಂತೆ ಹೇಳಿದ್ದಾರೆ. ಆದರೆ, ಪಕೋಡಾ ಮಾರುವ ಉದ್ಯೋಗ ಸೃಷ್ಟಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟ ಮಾಡಿ ಎನ್ನುವುದಲ್ಲ. ನಿರ್ದಿಷ್ಟವಾದ ಉದ್ಯೋಗ ಪಡೆಯುವುದಕ್ಕಾಗಿ ಹತ್ತಾರು ವರ್ಷ ವಿದ್ಯಾಭ್ಯಾಸ ಮಾಡಿ, ಲಕ್ಷಾಂತರ ರೂ.ಖರ್ಚು ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಧಾನಿ ಬಿಟ್ಟಿ ಸಲಹೆ ನೀಡಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಉದ್ಯೋಗಕ್ಕಾಗಿ ಯುವಜನತೆಯ ಸಂಚಾಲಕ ಮುತ್ತುರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಪಕೋಡಾ ವೃತ್ತಿಯ ಘನತೆಯ ಕುರಿತು ಮಾತನಾಡಿಲ್ಲ. ಬದಲಿಗೆ ಪಕೋಡಾ ಮಾರುವವರ ಬದುಕನ್ನು ಆಡಿಕೊಂಡಿದ್ದಾರೆ. ಚುನಾವಣೆ ಭಾಷಣದಲ್ಲಿ ಪ್ರತಿಭೆಗೆ ತಕ್ಕ ಉದ್ಯೋಗ ಸಿಗಬೇಕೊ, ಬೇಡವೊ ಅಂದವರು, ಈಗ ಪಕೋಡಾ ಮಾರಿ 200 ರೂ. ಗಳಿಸುವುದು ಉದ್ಯೋಗವಲ್ಲವೆ ಎಂದು ಪ್ರಶ್ನಿಸುವ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೃಷಿ ಮಾಡುವುದು ಉದ್ಯೋಗ ಅಲ್ಲವೆ ಎಂದು ಕೇಳುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆಡಳಿತದಲ್ಲಿ ರೈತ ವಿರೋಧಿ ನೀತಿಗಳನ್ನೆ ಜಾರಿ ಮಾಡಿದ್ದಾರೆ. ಬಿಜೆಪಿ ದೇಶದ ಸಾಮಾನ್ಯ ಜನರನ್ನು ಕುರಿಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವುದು ಪ್ರಧಾನಿ ಮೋದಿಯ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಫೆ.4ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕನಿಷ್ಠ ಒಂದು ಗಂಟೆಯಾದರು ಯುವ ಜನತೆಯೊಂದಿಗೆ ಸಂವಾದ ನಡೆಸಲು ಹಾಗೂ ಯುವ ಪ್ರಣಾಳಿಕೆಯ ಕರಡನ್ನು ಕೊಡಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟನಾತ್ಮಕವಾಗಿ ನಡೆಸುತ್ತಿರುವ ಪಕೋಡಾ ಸ್ಟಾಲ್ ಮುಂದುವರೆಯಲಿದೆ.
-ಮುತ್ತುರಾಜ್ ಸಂಚಾಲಕ, ಉದ್ಯೋಗಕ್ಕಾಗಿ ಯುವಜನತೆ