×
Ad

ಸರಳ ಜೀನವ ರೂಢಿಸಿಕೊಂಡು ವ್ಯಸನ ಮುಕ್ತರಾಗೋಣ: ವಜುಭಾಯಿ ವಾಲಾ

Update: 2018-01-27 18:07 IST

ಬೆಂಗಳೂರು, ಜ.27: ದೇಶದ ಜನತೆ ಸರಳ ಜೀನವಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಾಗ ಮಾತ್ರ ವ್ಯಸನ ಮುಕ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಿಸಿದರು.

ಶನಿವಾರ ಬ್ರಹ್ಮಕುಮಾರಿ ಸಂಸ್ಥೆ ನಗರದಲ್ಲಿ ಏರ್ಪಡಿಸಿದ್ದ ‘ನಮ್ಮ ಭಾರತ ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಿಳಾ ಸಶಕ್ತೀಕರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಬಾಟಾ ಶೂ, ಸೂಟುಗಳಿಗೆ ಆದ್ಯತೆ ಕೊಟ್ಟಿಲ್ಲ. ಒಂದು ಲಂಗೋಟಿ, ಎರಡು ಹೊತ್ತಿನ ಊಟ ಸೇವಿಸಿ ಸರಳ ಜೀವನ ನಡೆಸಿದರು. ಅವರ ತತ್ವಾದರ್ಶಗಳು ಸರಳ ಜೀವನಕ್ಕೆ ಮಾದರಿ ಎಂದು ತಿಳಿಸಿದರು.

ಮಾತೃಶಕ್ತಿಯ ಸಶಕ್ತೀಕರಣದಿಂದ ಯುವ ಜನತೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಗಾಂಧೀಜಿಯನ್ನು ಮಹಾತ್ಮನನ್ನಾಗಿ ರೂಪಿಸಿದ್ದು, ಅವರ ತಾಯಿ ಪುತಲೀಬಾಯಿ. ಹಾಗೆಯೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಶಿವಾಜಿ ಮಹಾನ್ ಸಾಮ್ರಾಟನಾಗಿ ರೂಪುಗೊಳ್ಳಲು ಜೀಜಾಬಾಯಿ ಕಾರಣರಾದರು. ಇದೇ ರೀತಿ ಪ್ರತಿಯೊಬ್ಬರ ಜೀವನದಲ್ಲಿ ತಾಯಂದಿರ ಪಾತ್ರ ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಮತ್ತು ಶಿಕ್ಷಕರಿಗೆ ಆಧ್ಯಾತ್ಮಿಕ ಶಿಕ್ಷಣ ದೊರೆಯುವ ಅಗತ್ಯವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಸಾರ ‘ವಸುದೈವ ಕುಟುಂಬಕಂ’ ಆಗಿದೆ. ಜೊತೆಗೆ ಸತ್ಯವನ್ನು ಹೇಳುವ ಮತ್ತು ಧರ್ಮವನ್ನು ಅನುಸರಿಸುವ ಸಂಸ್ಕೃತಿಯಾಗಿದ್ದು, ಇಲ್ಲಿ ಧರ್ಮವೆಂದರೆ ಕರ್ತವ್ಯವಾಗಿದೆ ಎಂದ ಅವರು ಅಭಿಪ್ರಾಯಿಸಿದರು.

ಶಾಂತಿಯುತ ಜೀವನ ನಡೆಸಲು ಪ್ರತಿಯೊಬ್ಬರು ವ್ಯಸನಗಳಿಂದ ಮುಕ್ತರಾಗಬೇಕು. ಹಾಗೂ ಆ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರು ಸಶಕ್ತೀಕರಣಗೊಂಡರೆ ದೇಶದ ಪ್ರತಿಯೊಬ್ಬ ನಾಗರಿಕರು ಸಶಕ್ತರಾಗುತ್ತಾರೆ ಎಂದು ಅವರು ಆಶಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಅಂಬಿಕಾ ಬೇನ್, ಮೃತ್ಯುಂಜಯ ಭಾಯ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News