×
Ad

ಫೆ.8 ರಿಂದ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ

Update: 2018-01-27 18:14 IST

ಬೆಂಗಳೂರು, ಜ.27: ಕಂದಾಯ ಇಲಾಖೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಗ್ರೂಪ್ ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಫೆ.8 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ರಾಜ್ಯ ಸರಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮುದ್ದುಕೃಷ್ಣ, ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಗ್ರಾಮ ಸಹಾಯಕರು ಯಾವುದೇ ಸೌಲಭ್ಯಗಳು ಹಾಗೂ ಕನಿಷ್ಠ ಭದ್ರತೆಯಿಲ್ಲದೆ ಜೀವನ ಮಾಡುತ್ತಿದ್ದಾರೆ. 100 ರಿಂದ ಆರಂಭ ಮಾಡಿ ಇಂದಿನ 10 ಸಾವಿರ ವೇತನವರೆಗೂ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಗ್ರಾಮ ಸಹಾಯಕರನ್ನು ಡಿ ದರ್ಜೆಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರಿಗೆ ಯಾವುದೇ ರೀತಿಯ ಆರೋಗ್ಯದ ಭದ್ರತೆಯಿಲ್ಲ. ಸರಕಾರ ನೀಡುವ ಗೌರವಧನದಲ್ಲಿ ಜೀವನ ನಡೆಸುವುದು ಕಷ್ಟ ಸಾಧ್ಯ. ಹೀಗಿರುವಾಗ ಕುಟುಂಬದವರು ಅನಾರೋಗಕ್ಕೆ ತುತ್ತಾದರೆ, ಅವರು ಸಾಯುವುು ಬಿಟ್ಟರೆ ಬೇರೆ ದಾರಿಯಿಲ್ಲದಂತಾಗಿದೆ.ಅಲ್ಲದೆ, ದಿನನಿತ್ಯ ಎಲ್ಲ ರೀತಿಯ ಕೆಲಸಗಳಲ್ಲದೆ, ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ.

ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಕೆಲಸ ಮಾಡಿಸುತ್ತಾರೆ. ಹಾಗೂ ರಾತ್ರಿ ಸಮಯದಲ್ಲಿ ಮರಳು ದಂಧೆ ನಡೆಯುತ್ತಿದೆ ಎಂದು ರಾತ್ರಿ ಪಾಳಿ ಕೆಲಸ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಜೀವ ಭಯವನ್ನು ಲೆಕ್ಕಿಸದೇ ಕೆಲಸ ಮಾಡುತ್ತೇವೆ. ಆದರೆ, ನಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದಿಂದ ನೀಡುತ್ತಿರುವ ವೇತನದಲ್ಲಿ ಒಂದು ತಿಂಗಳು ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರನ್ನು ಉನ್ನತ ಶಿಕ್ಷಣಕ್ಕೆ ಕಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ರಾಜ್ಯ ಸರಕಾರ ಮುಂದಿನ ಬಜೆಟ್ ಅಧಿವೇಶನದಲ್ಲಿ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರು ಎಂದು ಪರಿಗಣಿಸುವ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಹಾಗೂ ಸಂಘದ ಮುಖಂಡರೊಂದಿಗೆ ಮಾತುತೆ ನಡೆಸಿ ಭರವಸೆ ನೀಡಬೇಕು.

ಇಲ್ಲದಿದ್ದರೆ, ನಮ್ಮ ಬೇಡಿಕೆ ಈಡೇರುವವರೆಗೂ 10 ಸಾವಿರ ನೌಕರರು ಹಾಗೂ ನೌಕರರ ಕುಟುಂಬ ಸವೆುೀತ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುತ್ತೇವೆ. ಸಾಧ್ಯವಾದರೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಶಿವರುದ್ರಪ್ಪ, ಸಾಮಾಜಿಕ ಕಾರ್ಯಕರ್ತ ಕಾಕೋಡು ಲಕ್ಕಪ್ಪ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News