‘ಫ್ರೀಡಂ ಪಾರ್ಕ್ ಕಬಳಿಕೆ ಕೈಬಿಡಿ’
ಬೆಂಗಳೂರು, ಜ.27: ನಗರದ ಫ್ರೀಡಂ ಪಾರ್ಕ್ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿರ್ಧಾರ ಕೈ ಬಿಟ್ಟು, ಎರಡು ಎಕರೆ ಪ್ರದೇಶವನ್ನು ಪ್ರತಿಭಟನೆಗೆ ಮೀಸಲಿಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್ ಮುಂಭಾಗ ವಿವಿಧ ಸಂಘಟನೆಗಳೆ ಸದಸ್ಯರು ಪ್ರತಿಭಟನೆ ನಡೆಸಿ, ರಾಜ್ಯ ಸರಕಾರ ಈ ಜಾಗವನ್ನು ಕಬಳಿಸುವ ಹುನ್ನಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, 22 ಎಕರೆ ವಿಸ್ತೀರ್ಣದ ಸ್ವಾತಂತ್ರ್ಯ ಉದ್ಯಾನ ಬಿಬಿಎಂಪಿ ನಿರ್ವಹಣೆಯಲ್ಲಿದೆ. ಕಾರ್ಯಕ್ರಮಗಳಿಗೆ ಉದ್ಯಾನ ಬಾಡಿಗೆ ನೀಡುವ ಬಿಬಿಎಂಪಿ ವರ್ಷಕ್ಕೆ ಸುಮಾರು 1 ಕೋಟಿ ರೂ. ಆದಾಯ ಗಳಿಸುತ್ತಿದೆ. ಉದ್ಯಾನವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಉದ್ಯಾನದ ಎಲ್ಲ ಜಾಗವನ್ನು ಪ್ರವಾಸಿ ತಾಣವಾಗಿ ರೂಪಿಸಿ ಪ್ರತಿಭಟನೆಗೆ ಅವಕಾಶವಿಲ್ಲದಂತೆ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ಈ ನಿರ್ಧಾರವನ್ನು ಹಿಂಪಡೆದು ಎರಡು ಎಕರೆ ಜಾಗವನ್ನು ಪ್ರತಿಭಟನೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಅನೇಕ ಸ್ಥಳಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಯಾಗಿವೆ. ಸ್ವಾತಂತ್ರ್ಯ ಉದ್ಯಾನವನ್ನೂ ಪ್ರವಾಸಿ ತಾಣವಾಗಿ ರೂಪಿಸುವ ಅವಶ್ಯಕತೆಯಿಲ್ಲ. ಈ ಹಿಂದೆಯೇ ಉದ್ಯಾನದ ಕೆಲ ಭಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ನೀಡಿ ಪ್ರತಿಭಟನೆಗೆ ಕಡಿಮೆ ಜಾಗ ನೀಡಲಾಗಿದೆ. ಈಗ ಸಂಪೂರ್ಣವಾಗಿ ಪ್ರತಿಭಟನೆ ರಹಿತ ಜಾಗವಾಗಿಸಲು ಯೋಜನೆ ರೂಪುಗೊಂಡಿದೆ. ಸರಕಾರ ಉದ್ಯಾನಕ್ಕೆ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ ಪ್ರತಿಭಟಿಸುವ ಜನರ ಅಹವಾಲುಗಳನ್ನು ಪಡೆಯುವಂತೆ ಮಾಡಬೇಕು. ಆದರೆ ಹೋರಾಟಗಳನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದರು.
ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಜನರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರವನ್ನು ಒತ್ತಾಯಿಸುತ್ತಾರೆ. ಹೀಗೆ ಒತ್ತಾಯಿಸುವವರ ಕತ್ತು ಹಿಸುಕುವ ಕೆಲಸಕ್ಕೆ ಸರಕಾರ ಮುಂದಾಗಿದೆ. ಉದ್ಯಾನದ ಜಾಗವನ್ನು ಪ್ರತಿಭಟನೆಗೆ ಮೀಸಲಿಡಬೇಕು ಎಂದು ಬಹಳ ವರ್ಷಗಳ ಹಿಂದೆ ಸದನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೂ ಬೆಲೆ ನೀಡದೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿಯ ಗಂಡಸಿ ಸದಾನಂದಸ್ವಾಮಿ, ವಿನಯ್‌ಗೌಡ ಸೇರಿ ಪ್ರಮುಖರಿದ್ದರು.