ಬೆಂಗಳೂರು : ಜೈಲಿನಿಂದ ಪರಾರಿಯಾಗಿದ್ದವ 8 ವರ್ಷಗಳ ಬಳಿಕ ಪೊಲೀಸರ ಬಲೆಗೆ
ಬೆಂಗಳೂರು, ಜ.27: ಕೊಲೆ ಪ್ರಕರಣವೊಂದರ ಸಂಬಂಧ ಶಿಕ್ಷೆಗೆ ಗುರಿಯಾಗಿ ಜೈಲಿಗೆ ಸೇರಿ ಪರೋಲ್ ರಜೆ ಮೇಲೆ ಹೊರ ಬಂದು ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೇರಿ ಇಬ್ಬರನ್ನು ಇಲ್ಲಿನ ಪೀಣ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಆರೋಪಿ ವೆಂಕಟೇಶ್(40) ಮತ್ತು ಈತನಿಗೆ ಜಾಮೀನು ನೀಡಿದ್ದ ಸಹೋದರ ಮುರಳಿ(38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
2005ರಲ್ಲಿ ಪೀಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಆರೋಪಿ ವೆಂಕಟೇಶ್ ತುರ್ತು ಪರೋಲ್ ರಜೆ ಮೇಲೆ ಹೊರಬಂದು ನಿಗದಿತ ದಿನಾಂಕದಂದು ಕಾರಾಗೃಹಕ್ಕೆ ಶರಣಾಗದೆ ತಲೆಮರೆಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷೆಗೊಳಗಾಗಿದ್ದ ವೆಂಕಟೇಶ್ ಮತ್ತು ಜಾಮೀನುದಾರರಾದ ಸಹೋದರ ಮುರಳಿ ವಿರುದ್ಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ರಜೆ ಮೇಲೆ ಹೊರ ಹೋಗಿ ಎಂಟು ವರ್ಷದಿಂದ ತಲೆಮರೆಸಿಕೊಂಡಿದ್ದ. ಅಲ್ಲದೆ, ವೆಂಕಟೇಶ್, ಪೊಲೀಸರಿಗೆ ಗುರುತು ಸಿಗದಂತೆ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದು ವಿಚಾರಣೆಯಿಂದ ತಿಳಿದುಬಂದಿದೆ.