ಪುತ್ರನಿಗೆ ಅಮಾನವೀಯವಾಗಿ ಥಳಿಸಿದ ವೀಡಿಯೊ ವೈರಲ್ : ತಂದೆಯ ಬಂಧನ
ಬೆಂಗಳೂರು, ಜ.27: ಮಗನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು ತಂದೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಂಧಿತ ಆರೋಪಿ ತಂದೆಯನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಮಹೇಂದ್ರ ತನ್ನ ಹತ್ತು ವರ್ಷದ ಮಗನಿಗೆ ಮನಬಂದಂತೆ ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ವಿಡಿಯೊ?: ಮಗನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪದಲ್ಲಿ ನಡೆದಿದೆ. ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡು ಮಹೇಂದ್ರ ಅವರು ಮನಬಂದಂತೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ವೈರಲ್ ಹೇಗೆ?: ಕೆಲವು ದಿನಗಳ ಹಿಂದೆ ಮಹೇಂದ್ರ ಮೊಬೈಲ್ ಹಾಳಾಗಿದ್ದ ಕಾರಣ ರಿಪೇರಿಗೆ ಎಂದು ಕೊಟ್ಟಿದ್ದರು. ಫೋನ್ ರಿಪೇರಿಗೆ ಕೊಟ್ಟಿದ್ದಾಗ ಅದರಲ್ಲಿನ ಎಲ್ಲ ಫೋಟೋ, ವಿಡಿಯೊಗಳನ್ನು ತನ್ನ ಕಂಪ್ಯೂಟರ್‌ನಲ್ಲಿ ಹಾಕುತ್ತಿದ್ದರು. ಆಗ ಈ ವಿಡಿಯೊವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಈ ವರ್ತನೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದ್ದರೂ ತಿರಸ್ಕರಿಸುತ್ತಿದ್ದ. ಹಾಗಾಗಿ ಅವನ ತಾಯಿ ಮುಂದೆನೆ ಆತನನ್ನು ನಾನು ಹೊಡೆಯುತ್ತಿದ್ದೆ. ಅದನ್ನು ಚಿತ್ರೀಕರಿಸಲು ನಾನೇ ಪತ್ನಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲೆಂದು ಆ ವೀಡಿಯೊ ಮಾಡಿರುವುದಾಗಿ ಮಹೇಂದ್ರ ತಪ್ಪೊಪ್ಪಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಮಹೇಂದ್ರ ವಿರುದ್ಧ ಕೆಂಗೇರಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.