ಜ.29ಕ್ಕೆ ಬೆಂಗಳೂರಿನಲ್ಲಿ ‘ಗೌರಿ ದಿನ’
ಬೆಂಗಳೂರು, ಜ. 27: ಪತ್ರಕರ್ತೆ ಗೌರಿ ಲಂಕೇಶ್ ನೆನಪಿನಲ್ಲಿ ‘ನಾಡು ಕಂಡಹಾಗೆ ನಮ್ಮ ಗೌರಿ, ಗೌರಿ ಕಂಡ ಕನಸು-ಭವಿಷ್ಯದ ಭಾರತ’ ವಿಚಾರಗೋಷ್ಠಿ ಹಾಗೂ ‘ನಾನು ಗೌರಿ’ ಮತ್ತು ‘ಗೌರಿ ಹೂವು’ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಜ.29ರಂದು ಇಲ್ಲಿನ ಪುರಭವನದಲ್ಲಿ ಏರ್ಪಡಿಸಲಾಗಿದೆ.
‘ಸಂವಿಧಾನದ ಆಶಯಗಳ ರಕ್ಷಣೆ’ಯ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ದೇಶಕಿ ಕವಿತಾ ಲಂಕೇಶ್, ನಟ ಪ್ರಕಾಶ್ ರೈ, ಸಿಎಂ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅಮೀನ್ ಮಟ್ಟು, ಗೌರಿ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಪಾಲ್ಗೊಳ್ಳಲಿದ್ದಾರೆ.
‘ಗೌರಿ ಕಂಡ ಕನಸು-ಭವಿಷ್ಯದ ಭಾರತ’ ವಿಚಾರಗೋಷ್ಠಿಯಲ್ಲಿ ಪತ್ರಕರ್ತೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟೆಲ್ವಾಡ್, ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ವೇಮುಲ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್.ಮುನಿಸ್ವಾಮಿ ವಹಿಸಲಿದ್ದಾರೆ.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಜೆಎನ್‌ಯು ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್, ಶೆಹ್ಲಾ ರಶೀದ್, ಉಮರ್ ಖಾಲಿದ್, ರೀಚಾಸಿಂಗ್, ಡಾ.ವಾಸು, ಲೇಖಕ ವಿಕಾಸ್ ಮೌರ್ಯ, ಪತ್ರಕರ್ತ ಕುಮಾರ್ ಬುರಡಿಕಟ್ಟಿ ಮಾತನಾಡಲಿದ್ದಾರೆ.
‘ನಾನು ಗೌರಿ-ಉರಿಯ ಬೆಳದಿಂಗಳು’ ಕವನ ಸಂಕಲನ ಹಾಗೂ ‘ಗೌರಿ ಹೂವು’ ಲೇಖನಗಳ ಸಂಗ್ರಹ ಕೃತಿಗಳ ಕುರಿತು ಲೇಖಕಿ ಕೆ.ನೀಲಾ ಮಾತನಾಡಲಿದ್ದು, ಕವಿ ಡಾ.ವಡ್ಡಗೆರೆ ನಾಗರಾಜಯ್ಯ, ಡಾ.ಎಂ.ಬಿ. ರಾಮಮೂರ್ತಿ, ಡಾ.ಎ.ಎಸ್.ಪ್ರಭಾಕರ, ಅಕ್ಷತಾ ಹುಂಚದಕಟ್ಟೆ ಭಾಗವಹಿಸಲಿದ್ದಾರೆಂದು ಗೌರಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.