×
Ad

ಬಿಎಂಟಿಸಿ ಬಸ್‌ನಲ್ಲಿ ಗುಂಪು ಟಿಕೆಟ್‌ಗೆ ಶೇ.15ರಷ್ಟು ರಿಯಾಯಿತಿ: ಎಚ್.ಎಂ.ರೇವಣ್ಣ

Update: 2018-01-27 21:28 IST

ಬೆಂಗಳೂರು, ಜ.27: ಬಿಎಂಟಿಸಿ ಬಸ್‌ನಲ್ಲಿ ನಾಲ್ಕು ಮಂದಿಗಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಟಿಕೆಟ್ ಪಡೆದರೆ ಶೇ.15ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ಶನಿವಾರ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯನ್ನು ಲಾಭದಾಯಕ ಮಾಡುವುದಷ್ಟೆ ನಮ್ಮ ಉದ್ದೇಶವಲ್ಲ. ಜನರೆಲ್ಲರು ಸರಕಾರಿ ಬಸ್‌ಗಳಲ್ಲೆ ಪ್ರಯಾಣಿಸಬೇಕೆಂಬುದೆ ನಮ್ಮ ದ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶೇ.10ರಷ್ಟು ಪ್ರಯಾಣ ದರವನ್ನು ಇಳಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ 1ಲಕ್ಷ ಮನೆ ನಿರ್ಮಿಸುವ ಯೋಜನೆಯಲ್ಲಿ ಸಾರಿಗೆ ಇಲಾಖೆಯ ಕಾರ್ಮಿಕರಿಗೂ ಮನೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ.ಕೃಷ್ಣಪ್ಪರಿಗೂ ಮನವಿ ಮಾಡಲಾಗುವುದು. ಒಟ್ಟಾರೆ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ಸಾರಿಗೆ ನೌಕರರಿಗೆ ಮೂಲಭೂತ ಸೌಕರ್ಯವನ್ನು ಉನ್ನತಿಕರಿಸಲಾಗುವುದು ಇಲಾಖೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್: ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲು ಚಿಂತನೆಯಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅಲ್ಲಿಂದ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾದ ಕೂಡಲೆ ವಿತರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಭಾರಿ ವಾಹನಗಳಿಗೆ ಉಚಿತ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರ್ಧರಿಸಲಾಗಿದೆ. ಹಾಗೆಯೆ ಮಹಿಳೆಯರ ಸಬಲೀಕರಣದ ಸಲುವಾಗಿ ಸಾರಿಗೆ ಇಖಾಖೆ ವತಿಯಿಂದ ಮಹಿಳಾ ಡ್ರೈವರ್‌ಗಳಿಗೆ ಉಚಿತ ತರಬೇತಿ ಮತ್ತು ಉದ್ಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ 5ಲಕ್ಷ ಟ್ರಾಕ್ಟರ್ ಇದ್ದು, ಅದನ್ನು ಚಲಾಯಿಸುವ ಬಹುತೇಕರು ಲೈಸನ್ಸ್ ಪಡೆದಿರುವುದಿಲ್ಲ. ಹೀಗಾಗಿ ಅವರೆಲ್ಲರಿಗೂ ಉಚಿತ ತರಬೇತಿ ಹಾಗೂ ಲೈಸೆನ್ಸ್ ಮಾಡಿಸಿಕೊಡಲಾಗುವುದು ಎಂದು ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ಮುಂದಿನ ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಒಂದು ಸಾವಿರ ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗಿದೆ. ಅದರಲ್ಲಿ 341 ಕೋಟಿ ರೂ. ಸಾರಿಗೆ ಇಲಾಖೆಗೆ ಬರಬೇಕಾದ ಬಾಕಿ ಹಣವಾಗಿದೆ. ಉಳಿದ ಸುಮಾರು 600ಕೋಟಿ ರೂ. ಇಲಾಖೆಯ ಮೂಲ ಸೌಕರ್ಯಕ್ಕೆ ಅಗತ್ಯವಾಗಿದೆ.
-ಎಚ್.ಎಂ.ರೇವಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News