ಸಮಾಜಮುಖಿ ಕೃಷ್ಣ ಸಂಗೀತ

Update: 2018-01-27 17:16 GMT

‘‘ತನ್ನ ಕಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕಲಾವಿದನೊಬ್ಬ ರಾಜಕಾರಣ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಅವನು ಕಲಾವಿದನೇ ಅಲ್ಲ’’ಎಂದು ಸ್ವವಿಮರ್ಶೆ ಮಾಡಿಕೊಳ್ಳುತ್ತಾ. ಸಾಂಪ್ರದಾಯಿಕ ಕಟ್ಟಳೆಗಳಲ್ಲೇ ಹುದುಗಿ ಹೋಗಿರುವ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸಮಾಜಮುಖಿಯಾಗಿಸುವತ್ತ ಗಂಭೀರ ಚಿಂತನೆಗಳನ್ನು ನಡೆಸುತ್ತಾ, ಕಾರ್ಯ ರೂಪಕ್ಕಿಳಿಸುತ್ತಿರುವವರು ಸಮಕಾಲೀನ ಶ್ರೇಷ್ಠ ಸಂಗೀತಗಾರ ಟಿ.ಎಂ.ಕೃಷ್ಣ.

ತಾನು ಬರೀ ‘ಹಾಡುಗಾರ’ನೆಂದೇ ಬಿಂಬಿಸಿಕೊಳ್ಳುವ ‘ತೊಡುರು ಮದಬುಸಿ ಕೃಷ್ಣ (ಟಿ.ಎಂ.ಕೃಷ್ಣ)’, ಸುಮಾರು 500 ವರ್ಷಗಳ ಇತಿಹಾಸವಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಮಕಾಲೀನ ‘ಶ್ರೇಷ್ಠ ವಿದ್ವಾಂಸ ಹಾಗೂ ಗಾರುಡಿಗ’.

22 ಜನವರಿ 1976 ರಲ್ಲಿ ಮದ್ರಾಸ್ (ಈಗಿನ ಚೆನ್ನೈ)ನಲ್ಲಿ ಜನಿಸಿದ ಕೃಷ್ಣರವರಿಗೆ ಅಮ್ಮನ ಕಡೆಯಿಂದ ಬಂದ ಬಳುವಳಿ ಈ ಸಂಗೀತ. ಅಮ್ಮನ ಅಮ್ಮ ಅಂದರೆ ಅಜ್ಜಿ ಸಂಗೀತದ ರಸಿಕರೂ ಹಾಗೂ ಪೋಷಕರಾದರೆ, ಅಮ್ಮ ಸಂಗೀತ ಪದವೀಧರರು.ತಂದೆ ಟಿ.ಎಂ. ರಂಗಾಚಾರಿ ವ್ಯಾಪಾರಸ್ತರು. ಹಿಂದಿನ ಹೆಸರಾಂತ ಕೈಗಾರಿಕೋದ್ಯಮಿ ಹಾಗೂ ಕೇಂದ್ರ ಸರಕಾರದ ಮಂತ್ರಿಯಾಗಿದ್ದ ಟಿ.ಟಿ. ಕೃಷ್ಣಮಾಚಾರಿ ತಂದೆಯ ಸೋದರ ಸಂಬಂಧಿ. ಟಿ.ಎಂ.ಕೃಷ್ಣ ಅರ್ಥಶಾಸ್ತ್ರದ ಪದವೀಧರರಾದರೂ ಒಲಿದದ್ದು ಕರ್ನಾಟಕ ಶಾಸ್ತ್ರೀಯ ಸಂಗೀತ. ಪತ್ನಿ ಸಂಗೀತ ಶಿವಕುಮಾರ್ ಸಹ ಶ್ರೇಷ್ಠ ಸಂಗೀತಗಾರರು. ಇಬ್ಬರು ಹೆಣ್ಣು ಮಕ್ಕಳು ಆರ್ಯ ಮತ್ತು ಅನಂತ ರೊಂದಿಗೆ ಸುಖಸಂಸಾರದಲ್ಲಿ ಮೈಲಾಪುರದಲ್ಲಿ ವಾಸ.

12ನೇ ವಯಸ್ಸಿಗೆ ಮದ್ರಾಸ್ ಮ್ಯೂಸಿಕ್ ಅಕಾಡಮಿ ವತಿಯಿಂದ ನಡೆದ ಯುವ ಸಂಗೀತೋತ್ಸವದಲ್ಲಿ ಸಂಗೀತ ಕಛೇರಿಯನ್ನು ನೀಡಿದ ಹೆಗ್ಗಳಿಕೆ ಕೃಷ್ಣರವರದು. ಅಂದಿನಿಂದ ಇಂದಿನತನಕ ದೇಶ ವಿದೇಶಗಳಲ್ಲಿ ಸುಮಾರು 2,000ಕ್ಕೂ ಮಿಗಿಲಾದ ಕಛೇರಿಗಳನ್ನು ನೀಡಿರುವುದು ಹೆಮ್ಮೆಯ ಗರಿ. ಅದೂ ಅಲ್ಲದೆ ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ಹಾಗೂ ಏಶ್ಯಾ ಖಂಡದ ವಿವಿಧ ದೇಶಗಳ ಹೆಸರಾಂತ ಸಂಗೀತೋತ್ಸವಗಳಲ್ಲಿ ಭಾಗವಹಿಸಿ, ಪ್ರಖ್ಯಾತ ಸಂಗೀತ ಗಾರರೊಡನೆ ಕಛೇರಿಗಳನ್ನು ನೀಡಿರುವುದು ಅವರ ಸಂಗೀತ ಪ್ರತಿಭೆಗೆ ಸಾಕ್ಷಿ. ಇಷ್ಟೆಲ್ಲಾ ಪ್ರತಿಭೆಯಿದ್ದರೂ, ಟಿ.ಎಂ. ಕೃಷ್ಣ ಅವರು ಒಂದು ಜನಪರ ಚಳವಳಿಯ ಭಾಗವಾಗಿ ಸಂಗೀತ ಕಛೇರಿ ನಡೆಸಿಕೊಡುವುದು ತುಂಬಾ ಮಹತ್ವ ಎನಿಸುತ್ತದೆ. ಸೌಂದರ್ಯ ಪ್ರಜ್ಞೆಯೆಂಬುದು ಸಾಂಸ್ಕೃತಿಕವಾಗಿ ಎಷ್ಟು ಮುಖ್ಯವೋ, ನಾಗರಿಕವಾಗಿ ಯೂ ಸಹ ಅಷ್ಟೇ ಮುಖ್ಯವೆಂದರಿತ ಕೃಷ್ಣ, ಸಂಗೀತ, ನಾಟ್ಯ ಹಾಗೂ ನಾಟಕಗಳಲ್ಲಿ ಯುವಜನತೆಯು ಪಾಲ್ಗೊಳ್ಳಲು ಉತ್ಸಾಹ ತುಂಬುವ ಸಲುವಾಗಿ ‘ಸ್ವಾನುಭವ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಇದು ವರ್ಗ, ಜಾತಿ, ಮತ, ಪಂಗಡಗಳ ಭೇದವಿಲ್ಲದೆ ಎಲ್ಲರೂ ಒಳಗೊಂಡ ಸಂಸ್ಕೃತಿ ವಿನಿಮಯ ಮತ್ತು ಕ್ರಿಯಾಶೀಲತೆಯ ವೇದಿಕೆಯಾಯಿತು. ಸಂಪ್ರದಾಯಬದ್ಧ, ಮಡಿವಂತರ ಮಡಿಲಿನಲ್ಲಿಯೇ ಹುದುಗಿದ್ದ ಹಾಗೂ ಹುದುಗಿ ಹೋಗಬಹುದಾದ ಕಲೆಯನ್ನು ಹೊರ ಜಗತ್ತೂ ಆಸ್ವಾದಿಸುವಂತೆ ವೇದಿಕೆಯನ್ನು ಕಲ್ಪಿಸಿದ ಕೀರ್ತಿ ಕೃಷ್ಣರವರಿಗೆ ಸಲ್ಲುತ್ತದೆ.

 ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪುನರುಜ್ಜೀವಗೊಳಿಸುವ ಸಲವಾಗಿ ಕೃಷ್ಣ ಕೆಲವು ಸಂಸ್ಥೆಗಳನ್ನು ಸ್ಥಾಪಿಸಿದರು. ಸಂಗೀತದ ಪರ ಒಲವಿದ್ದು ಕ್ರಿಯಾಶೀಲತೆಯ ಕೊರತೆಯಿದ್ದವರಿಗೆ ಮಾರ್ಗದರ್ಶಕವಾಗಿ ಸಹಾಯ ಮಾಡುವುದು ಈ ಸಂಸ್ಥೆಗಳ ಧ್ಯೇಯವಾಯಿತು. ಕೃಷ್ಣರವರು 2004ರಲ್ಲಿ ಹರಿಹರನ್ ಮತ್ತು ಮಾಯ ಹರಿಹರನ್ ರವರ ಜೊತೆಗೂಡಿ ‘ಸುಮನಸ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆ ಕೃಷ್ಣರವರ ಧ್ಯೇಯೋದ್ದೇಶಗಳಿಗೆ ಒತ್ತಾಸೆಯಾಯಿತು.

ಇದರಿಂದ ಕೆಲವೇ ಕೆಲವು ಜಾತಿ, ಮನೆತನ, ಪರಂಪರೆ, ಸಂಘ ಸಂಸ್ಥೆಗಳ ಬಿಗಿ ಮುಷ್ಠಿಯಲ್ಲಿರುವ ಸಂಗೀತ ಕಲೆಯನ್ನು ಬಿಡುಗಡೆಗೊಳಿಸಿ, ನಿಜವಾದ ಸಂಗೀತದ ಒಲವಿದ್ದು, ಸಾಮರ್ಥ್ಯವಿದ್ದೂ ಅವಕಾಶ ವಂಚಿತರಾದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿದರು. ಅದೂ ಅಲ್ಲದೆ ಪುರುಷ ಪ್ರಧಾನವಾಗಿದ್ದ ಕ್ಷೇತ್ರದಲ್ಲಿ ಮಹಿಳೆಯರಿಗೂ ಸಮಾನವಾದ ವೇದಿಕೆಯನ್ನು ಒದಗಿಸುವಲ್ಲಿ ಯಶಸ್ವಿಯಾದರು. ಹಾಗೂ ಗಾಯಕರಿಗಿದ್ದ ಪ್ರಾಧಾನ್ಯತೆ, ವಾದ್ಯವೃಂದದವರಿಗೂ ಸಹ ಲಭಿಸುವಂತೆ ಅವಕಾಶ ಕಲ್ಪಿಸಲಾಯಿತು.

ಕೃಷ್ಣ ಸಂಗೀತದ ಜೊತೆ ಜೊತೆಯಲ್ಲಿಯೇ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿ ಸುತ್ತಾ, ಕರ್ನಾಟಕ ಸಂಗೀತ ಪರಂಪರೆಯಲ್ಲಿ ಮಹಿಳೆಯರ ಹಾಗೂ ಅಂಚಿನಲ್ಲಿ ರುವ ಕೆಲವು ಪ್ರತಿಭೆಗಳನ್ನು ಮುಖ್ಯವಾಹಿನಿಯತ್ತ ತರಲು ಶ್ರಮಿಸಿದರು. ಇದಕ್ಕಾಗಿ ಮಹಿಳೆಯರ ಹಕ್ಕು, ಮಕ್ಕಳ ಬೇಡಿಕೆ, ಶಿಕ್ಷಕರ ಜವಾಬ್ದಾರಿ, ಸಮಾಜ ದಲ್ಲಿನ ನಾಗರಿಕ ಮತ್ತು ಅನಾಗರಿಕ ನಡಾವಳಿಗಳ ಬಗ್ಗೆ ಬರೆದರು. ಅದಲ್ಲದೆ ಯುದ್ಧಗಳ ಭಯಂಕರತೆ ಹಾಗೂ ಅಂಧ ರಾಷ್ಟ್ರೀಯ ತೆಯ ಅಪಾಯಗಳನ್ನು ಬಹು ಕಟುವಾಗಿ ಟೀಕಿಸಿ, ಹಿಂದೂ ಮುಸ್ಲಿಂ ಬಾಂಧವ್ಯದ ಕೊಂಡಿಗಳನ್ನು ಬೆಸೆಯುವ ಸಂಗತಿಗಳನ್ನು ಬರೆದರು. ಇದರಿಂದ, ಸಂಪ್ರದಾಯ ವಾದಿಗಳ ಕೆಂಗಣ್ಣಿಗೆ ಗುರಿಯಾದರು. ಆದರೂ ಸಮಾಜದ ಇತರ ವರ್ಗಗಳಿಂದ ಪ್ರಶಂಸೆಗೆ ಒಳಪಟ್ಟರು.

ಟಿ.ಎಂ. ಕೃಷ್ಣರವರು ಕೈಗೊಂಡ ಮುಖ್ಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ಪಟ್ಟಿಗೊಳಿಸಿತ್ತಾ ಹೋದರೆ ತಕ್ಷಣಕ್ಕೆ ನೆನಪಿಗೆ ಬರುವುದು ಪೊರಂಬೋಕ್ಕು ಹಾಡು. ಪೊರಂಬೋಕ್ಕು ಹಳೇ ತಮಿಳು ಪದ. ಇದು ಕನ್ನಡದ ಆಡು ಭಾಷೆಯಲ್ಲಿರುವ ಪದವೂ ಹೌದು. ಸಾರ್ವಜನಿಕ ಸ್ವತ್ತಾಗಿರುವ ಭೂಮಿ, ನೀರು, ಗಾಳಿ, ಆಕಾಶ, ನದಿದಡ, ಸಮುದ್ರ ತೀರ, ಕೆರೆಕಟ್ಟೆ, ಬಾವಿ, ಗೋಮಾಳ, ಕಾಡುಮೇಡುಗಳಿಗೆ ‘ಪೊರಂಬೋಕ್ಕು’ ಅನ್ನುತ್ತಾರೆ. ಚೆನ್ನೈನ ಎನ್ನೂರು ಕಡಲತೀರ ಆ ನಗರದ ಪರಿಸರವನ್ನು ಸಮತೋಲನದಲ್ಲಿಡಲು ತುಂಬಾ ಮಹತ್ವಪೂರ್ಣ ಪಾತ್ರವಹಿಸುತ್ತಿದೆ. ಆದರೆ ಇತ್ತೀಚಿನ ನಗರಾಭಿವೃದ್ಧಿ ಹಾಗೂ ಕೈಗಾರಿಕಾಭಿವೃದ್ಧಿ ಹಾಗೂ ಒತ್ತುವರಿಯಿಂದ ಅಲ್ಲಿನ ಮೂಲ ನಿವಾಸಿಗಳ ಬದುಕು ನರಕ ಸದೃಶವಾಗುತ್ತಿದೆ. ಅಲ್ಲಿ ತಂದು ಹಾಕುತ್ತಿರುವ ಹಾರು ಬೂದಿಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ಹಾಗೂ ಇತ್ತೀಚಿನ ಮಳೆಗಾಲದ ಪ್ರವಾಹ ಅಲ್ಲಿನ ನಿವಾಸಿಗಳಲ್ಲಿ ಬದುಕಲಾರದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಇದನ್ನು ಮನಗಂಡ ಕೃಷ್ಣ, ಭಕ್ತಿಗೀತೆಗಳಿಗಷ್ಟೇ ಸೀಮಿತವಾದ ಶಾಸ್ತ್ರೀಯ ಸಂಗೀತವನ್ನು ಸಮಾಜಮುಖಿ ಯಾಗಿಸಿ, ಸಂಪ್ರದಾಯವಾದಿಗಳ ಕೊರಳಿನಿಂದ ಹೊರತಂದು, ದೀನ ದಲಿತರ, ಜನಸಾಮಾನ್ಯರ ದನಿಯಾಗಿ ಮಾರ್ಪಡಿಸಿ ‘ಚೆನ್ನೈ ಪೊರಂಬೋಕ್ಕು ಹಾಡು’ನ್ನು ಸೃಷ್ಟಿಸಿದರು. ಇದು ಕಲೆಯ ಎಲ್ಲೆಯನ್ನು ಮೀರಿದ್ದಲ್ಲದೆ, ಕಲೆಗಾರನ ಎಲ್ಲೆಯನ್ನೂ ಮೀರಿ, ಉತ್ತಮ ಜಾತಿ ಹಾಗೂ ಸಂಪ್ರದಾಯವಾದಿಗಳ ಸ್ವತ್ತಾಗಿದ್ದ ಶಾಸ್ತ್ರೀಯ ಸಂಗೀತ ಕಲೆ, ಶಿಷ್ಟಭಾಷೆಯಿಂದ ಹೊರಬಂದು ಜನರ ಆಡುಭಾಷೆಯಲ್ಲಿ ಸಮಕಾಲೀನ ಸಮಸ್ಯೆಗಳನ್ನು ವ್ಯಕ್ತಪಡಿಸಲು ಶಕ್ತವಾಯಿತು. ‘‘ಯಾರು, ಯಾವುದು ಪೊರಂಬೊಕ್ಕು?’’ ಎಂದು ಕೊನೆಯಾಗುವ ಹಾಡು ಜನಸಾಮಾನ್ಯರ ಮನದಲ್ಲಿ ಮಾರ್ದನಿಸಿತು. ಸಮಕಾಲೀನ ಸಮಸ್ಯೆಗಳಲ್ಲಿ ಬೇಸತ್ತವರ ಮನಗಳಿಗೆ ಹೋರಾಟದ ಸ್ಪೂರ್ತಿಯಾಯಿತು. ಇದರಿಂದ ‘‘ಕಲೆಗಳಿಗೆ ಗಡಿಯಿಲ್ಲ. ಗಡಿ ಮೀರದ ಕಲೆ,ಕಲೆಗಾರ, ಪ್ರೇಕ್ಷಕ ಕುಬ್ಜನಾಗೇ ಇರುತ್ತಾನೆ. ಗಡಿಮೀರಿದ ಕಲೆ ಪ್ರಜ್ವಲಿಸುತ್ತದೆ’’ ಎಂಬುದನ್ನು ಸ್ಪಷ್ಟಪಡಿಸುತ್ತದೆ.

                          ಜೋಗತಿಯರೊಂದಿಗೆ ಕೃಷ್ಣ

ಜೋಗಪ್ಪ ಎಂಬುದು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಪ್ರ ದೇಶ ದಲ್ಲಿರುವ ತೃತೀಯ ಲಿಂಗಿಗಳ ಸಮುದಾಯ. ಅವರದು ಭಕ್ತಿ ಸಂಗೀತದ ಪರಂಪರೆ. ಎಲ್ಲಮ್ಮ ದೇವಿಯನ್ನು ಸ್ತುತಿಸುವ ಈ ಸಮುದಾಯವನ್ನು ಕಳಂಕಿತರಾಗಿಸಿ ಮೂಲೆ ಗುಂಪಾಗಿಸಿರುವುದು ಗಮನೀಯ. ಇವರ ಹಾಡುಗಳೆಲ್ಲವೂ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿರುತ್ತವೆ. ಎಲ್ಲಮ್ಮನಿಗೆ ಅರ್ಪಿಸುವ ಸಂಪ್ರದಾಯಭರಿತ ಕ್ರಮಬದ್ಧ ಕರ್ಮಗಳ ಉತ್ಸಾಹ, ಗಟ್ಟಿ ದನಿ ಹಾಗೂ ವಶೀಕರಣ ತಾಳ ಮದ್ದಲೆಗಳ ಜೋಗಪ್ಪಂದಿರ ಸಂಗೀತದಿಂದ ಆಕರ್ಷಿತರಾದ ಕೃಷ್ಣ ಅವರ ಜೊತೆಗೂಡಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ಇದು ಬೆಂಗಳೂರಿನಲ್ಲಿಯೇ ನಡೆದದ್ದು ನಮ್ಮ ಹೆಮ್ಮೆ. ಇದರಿಂದ ಕಡೆಗಣಿಸಿ, ಮೂಲೆಗುಂಪಾಗಿಸಿರುವ ಸಮುದಾಯವೊಂದು ಸಮಾಜದ ಮುಖ್ಯವಾಹಿನಿ ಯೊಂದಿಗೆ ಸಂವಹಿಸಲು ಕೃಷ್ಣರವರು ಸಂಗೀತ ಕಲೆಯ ಮೂಲಕ, ಸಹಕರಿಸಿದರು. ಈ ಸಂಗೀತ ಕಾರ್ಯಕ್ರಮದೊಂದಿಗೆ ಸಮಾಜವು ತೃತೀಯ ಲಿಂಗಿಗಳಿಗೆ ತೋರುತ್ತಿರುವ ತಾರತಮ್ಯ, ಅಸಮಾನತೆ, ಅಸ್ಪಶ್ಯತೆಯನ್ನು ಪ್ರಶ್ನಿಸಿದರು. ಅದೂ ಅಲ್ಲದೇ ತೃತೀಯ ಲಿಂಗಿಗಳ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದಲ್ಲಿರುವ ಸೌಂದರ್ಯ ಪ್ರಜ್ಞೆಯ ಭಾವೈಕ್ಯತೆಯನ್ನು ಸಮೀಕರಿಸಿ ಅವರೆಡರಲ್ಲಿ ತೋರುತ್ತಿರುವ ಅಸಮಾನತೆಯನ್ನು ಪ್ರಶ್ನಿಸಿದರು.

ನಂತರದಲ್ಲಿ, ತಮಿಳಿನ ಹೆಸರಾಂತ ಲೇಖಕ, ‘‘ಮದೋರು ಬಾಗನ್’’ (ಇಂಗ್ಲಿಷ್‌ನಲ್ಲಿ “One Part Woman”, ಕನ್ನಡದಲ್ಲಿ, ‘‘ಅರ್ಧನಾರೀಶ್ವರ’’) ಕಾದಂಬರಿ ಖ್ಯಾತಿಯ ಪೆರುಮಾಳ್ ಮುರುಗನ್, ಈ ಕಾದಂಬರಿ ವಸ್ತುವಿಷಯದಿಂದ ಸ್ಥಳೀಯ ಜಾತಿಮುಖಂಡರಿಂದ ಹಾಗೂ ಹಿಂದೂ ಮೂಲಭೂತವಾದಿಗಳಿಂದ ಉಂಟಾದ ಅವಮಾನದಿಂದ ಬೇಸತ್ತು ಸಾಹಿತ್ಯಿಕ ವನವಾಸವನ್ನು ಘೋಷಿಸಿ ಹಿನ್ನೆಲೆಗೆ ಸರಿದಾಗ ಕೃಷ್ಣ ಅವರು ಮುರುಗನ್ ರವರ ಕವಿತೆಗಳಿಗೆ ತಮ್ಮ ಪತ್ನಿ ಮತ್ತು ಸಹೋದ್ಯೋಗಿಗಳ ಸಹಾಯದಿಂದ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ ವಿವಿಧ ವೇದಿಕೆಗಳಲ್ಲಿ ಮತ್ತು ಕಛೇರಿಗಳಲ್ಲಿ ಪ್ರಸ್ತುತ ಪಡಿಸಿ ಮುರುಗನ್ ದನಿಗೆ ಬೆಂಬಲವಿತ್ತರು.

2014ರಲ್ಲಿ ಕೃಷ್ಣ ಪ್ರಾರಂಭಿಸಿದ ಇನ್ನೊಂದು ವೇದಿಕೆ ‘‘ಊರೂರು ಆಲ್ಕಾಟ್ ಕುಪ್ಪಂ’’ ಎಂಬ ಸಾಂಸ್ಕೃತಿಕ ಹಬ್ಬ. ಇದು ಚೆನ್ನೈನ ಮೀನುಗಾರರ ಪ್ರದೇಶದಲ್ಲಿ ಆರಂಭವಾಗಿ ಚಳವಳಿ ರೂಪದಲ್ಲಿ ಇಡೀ ತಮಿಳುನಾಡನ್ನು ಆವರಿಸಿದೆ ಹಾಗೂ ದೇಶವನ್ನು ಆವರಿಸುತ್ತಿದೆ. ಈ ಹಬ್ಬ ಸಾಂಪ್ರದಾಯಿಕವಲ್ಲದ ಹಾಗೂ ಸ್ಥಳೀಯವಾದ ಕಲೆಗಳು ಬೆಳಕಿಗೆ ಬರಲು ವೇದಿಕೆಯಾಯಿತು. ಇದರಿಂದ ಬೇರೆ ಬೇರೆ ಕಲಾಪ್ರಕಾರಗಳು ಮತ್ತು ಕಲಾವಿದರು ಒಟ್ಟೊಟ್ಟಿಗೆ ಸಂವಹನವನ್ನು ಸಾಧಿಸಿ ಅರ್ಥೈಸಿಕೊಳ್ಳಲು ಸಹಕಾರಿಯಾಯಿತು. ಇದು ಗಡಿ ದಾಟದೆ ಕುಬ್ಜವಾಗಿದ್ದ ವಿವಿಧ ಕಲಾ ಪ್ರಕಾರಗಳು ಹೊರಜಗತ್ತಿಗೆ ತೆರೆದುಕೊಂಡು ಸಂಸ್ಕೃತಿಯ ಕೊಡು ಕೊಳ್ಳುವಿಕೆಯಲ್ಲಿ ಹೊಸ ದನಿಯಾಯಿತು. ವಿವಿಧ ಸಮಾಜ ಸ್ತರದ ಕಲಾ ಪ್ರಕಾರಗಳನ್ನು ಒಗ್ಗೂಡಿಸಿ ಮಾನವ ನಿರ್ಮಿತ ತಡೆಗೋಡೆಗಳನ್ನು ಕೆಡವಿ ಹೊಸ ಸಂವೇದನೆಯನ್ನು ಸೃಜಿಸಿ ಸಾಮಾಜಿಕ ಸಮತೋಲನವನ್ನು ಕಾಪಿಡಲು ಅಡಿಯಿಟ್ಟಿತು. ಈ ‘‘ಊರೂರು ಆಲ್ಕಾಟ್ ಕುಪ್ಪಂ’’ ವೇದಿಕೆ ಇಂದು ಚೆನ್ನೈನ ಶಾಲಾ ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳು ಹೊರಹೊಮ್ಮಿ ವಿವಿಧ ಕಲಾಪ್ರಕಾರಗಳನ್ನು ಪ್ರಸ್ತುತ ಪಡಿಸಿ ಸಮಾಜದ ವಿವಿಧ ಸ್ತರದ ಜನರನ್ನು ಒಂದು ಗೂಡಿಸುವಲ್ಲಿ ದಾಪುಗಾಲಿಟ್ಟಿದೆ. ಅದಲ್ಲದೇ ಈ ಸಾಂಸ್ಕೃತಿಕ ಉತ್ಸವ ಪರಿಸರ ಪ್ರಜ್ಞೆಯ, ರಾಜಕೀಯ ಹಾಗೂ ಸಾಮಾಜಿಕ ಸುಧಾರಣೆಯತ್ತ ಸಾಗುವ ವೇದಿಕೆಯಾಗಿಯೂ ಹೊರಹೊಮ್ಮಿದೆ.

ಇಷ್ಟಲ್ಲದೆ ಕೃಷ್ಣರವರು ಭಾರತ ಸರಕಾರದ ವತಿಯಿಂದ ನೇಮಕ ಗೊಂಡ ಆಯೋಗದೊಂದಿಗೆ ತೆರಳಿ ನಿರಂತರ ಯುದ್ಧದಿಂದ ಬೇಸತ್ತಿದ್ದ ಶ್ರೀಲಂಕಾದ ಉತ್ತರ ಭಾಗದಲ್ಲಿ ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕಾರ್ಯಕ್ರಮಕ್ಕೆ ಮಾರ್ಗದರ್ಶ ಕರಾದರು.

ಈ ಕಾರ್ಯಕ್ರಮಗಳ ಜೊತೆಯಲ್ಲಿ, ಈ ಮೊದಲು ತಿಳಿಸಿದಂತೆ ಅವರ ಬರಹ, ಭಾಷಣಗಳೂ ಸಹ ಸಮಾಜಮುಖಿ. ಅವರ ಅತೀ ಹೆಚ್ಚು ಪ್ರಶಂಸೆಗೊಳಪಟ್ಟ ಪುಸ್ತಕಗಳೆಂದರೆ ಬಾಂಬೆ ಜಯಶ್ರೀ ಜೊತೆಗೂಡಿ ಕರ್ನಾಟಕ ಸಂಗೀತ ಕ್ಷೇತ್ರದ ಮಹನೀಯರ ಬಗ್ಗೆ “Voices Within” ಎಂಬ ಪುಸ್ತಕ ಒಂದಾದರೆ, 2013 ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತತ್ವ, ಪರಂಪರೆ, ಸಂಪ್ರ ದಾಯ, ಸೌಂದರ್ಯಗಳನ್ನೊಳಗೊಂಡ “A Southern Music” ಎಂಬ ಪುಸ್ತಕ ಮತ್ತೊಂದು. ಈ ಪುಸ್ತಕವು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ರವರಿಂದ ಬಿಡುಗಡೆ ಹೊಂದಿ ಅವರು ಓದಿದ ಅತ್ಯುತ್ತಮ ಪುಸ್ತಕವೆಂದು ಪ್ರಶಂಸೆಗೊಳಪಟ್ಟಿತು.

ಇಷ್ಟೆಲ್ಲಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಸಾಮಾಜಿಕ ಸುಧಾರಣೆಯತ್ತ ಹೊರಟ ಕೃಷ್ಣರವರನ್ನು ಪ್ರಶಸ್ತಿಗಳು ಅರಸಿ ಬಂದದ್ದು ಅತಿಶಯೋಕ್ತಿಯೇನಲ್ಲ. ಸಂಗೀತ ಕ್ಷೇತ್ರದಲ್ಲಿಯ ಪ್ರತಿಭೆಗೆ ದೊರೆತ ದೇಶ ವಿದೇಶದ ಪ್ರಶಸ್ತಿಗಳ ಜೊತೆಗೆ ಅವರ ಸಮಾಜ ಸುಧಾರಣಾ ಕಾರ್ಯಕ್ರಮಗಳಿಗೆ 2016ರಲ್ಲಿ ದೊರೆತ ‘‘ರಾಮನ್ ಮ್ಯಾಗ್ನೆಸ್ಸೆ’’ ಪ್ರಶಸ್ತಿ ಅವರ ಶ್ರಮಕ್ಕೆ ಸಿಕ್ಕ ಪುರಸ್ಕಾರ. ಇದರೊಂದಿಗೆ 2017ರ ‘‘ಇಂದಿರಾ ಗಾಂಧಿ ರಾಷ್ಟೀಯ ಭಾವೈಕ್ಯತಾ ಹಾಗೂ ಸದ್ಭಾವನಾ’’ ಪ್ರಶಸ್ತಿಯೂ ಸಹ ಇವರಿಗೆ ದಕ್ಕಿದ್ದು ದೇಶದ ಸಮಾಜ ಸುಧಾರಣಾ ಕಾರ್ಯಕರ್ತರ ಹೆಮ್ಮೆ. ಕೊನೆಯದಾಗಿ ಟಿ.ಎಂ. ಕೃಷ್ಣರವರ ಮಾತುಗಳಲ್ಲೇ ಹೇಳುವು ದಾದರೆ, ‘‘ಶಾಸ್ತ್ರೀಯ ಸಂಗೀತ ಮಾತ್ರವಲ್ಲ ಎಲ್ಲ ಬಗೆಯ ಕಲೆಗಳಿಗೂ ಸಾಮಾಜಿಕ, ರಾಜಕೀಯ ಆಯಾಮಗಳಿದ್ದೇ ಇರುತ್ತವೆ. ಕಲೆಯೊಳಗೆ ಸೌಂದರ್ಯದ ಜೊತೆಗೆ ಕುರೂಪವೂ ಇದೆ. ಕಲಾವಿದ ಆ ಕಲೆಯೊಳಗೆ ಆಳವಾಗಿ ಪ್ರವೇಶಿಸಿ ಸೌಂದ ರ್ಯವನ್ನಷ್ಟೇ ಹೆಕ್ಕಿ ತೆಗೆಯುತ್ತಾನೆ. ಶಾಸ್ತ್ರೀಯ ಅನ್ನೋದು ನನಗೆ ಇಷ್ಟವಾಗಲ್ಲ. ಸಂಗೀತ ಅಷ್ಟೆ. ನಾನು ಬೇರೆ, ನನ್ನೊಳಗಿನ ಸಂಗೀತಗಾರ ಬೇರೆ ಅಂತ ಅನಿಸಲ್ಲ, ಎಲ್ಲವನ್ನು ಗಮನಿಸುತ್ತಾ ಹೋಗುತ್ತೇನೆ. ಸಂಗೀತ ಕಲೆಯಲ್ಲಿ ನಾನು ಆಳವಾಗಿ ಮುಳುಗಿದಷ್ಟೂ ನನ್ನ ಗಮನಿಸುವಿಕೆಯ ಅಗಲವೂ ಹೆಚ್ಚುತ್ತ ಹೋಗುತ್ತೆ. I am constantly aware of my myself, my problem... ಆಗ ನಾನು ನನ್ನ ಸುತ್ತಲಿನ ರಾಜಕೀಯ, ಪರಿಸರ ಇತ್ಯಾದಿ ಸಮಸ್ಯೆಗಳ ಕುರಿತು ತೆರೆದು ಕೊಳ್ತಾ ಹೋಗ್ತಿನಿ. ಜೊತೆಗೆ ನನ್ನ ಮಿತಿಗಳಿಗೆ ನಾನೇ ಸವಾಲು ಹಾಕಿಕೊಳ್ಳುತ್ತೇನೆ, ಹೀಗಾಗಿ ಜೋಗಪ್ಪ, ಪರಂಬೋಕ್ಕು ಎಲ್ಲವೂ ನನಗೆ ದಕ್ಕುತ್ತಾ ಹೋಯಿತು’’. ಈ ರೀತಿಯ ಜೀವಪರ ಸಮಾಜಮುಖಿ ಮನೋಭೂಮಿಕೆ ಸರ್ವಕಾಲಕ್ಕೂ ಅಗತ್ಯವಲ್ಲವೇ?

Writer - ರೂಪದರ್ಶಿ ವೆಂಕಟೇಶ್

contributor

Editor - ರೂಪದರ್ಶಿ ವೆಂಕಟೇಶ್

contributor

Similar News