ಜ.30ಕ್ಕೆ ಸೌಹಾರ್ದತೆಗಾಗಿ ಮಾನವ ಸರಪಳಿ
ಬೆಂಗಳೂರು, ಜ.26: ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರಗಳು ನಿಲ್ಲಲಿ ಎಂಬ ಆಶಯ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮ ದಿನವಾಗಿರುವ ಜ.30 ರಂದು ‘ಸೌಹಾರ್ದತೆಗಾಗಿ ಮಾನವ ಸರಪಳಿ’ ಆಯೋಜಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.
ಶನಿವಾರ ಗಾಂಧಿನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ರಾಜ್ಯಾದ್ಯಂತ ಸಂಜೆ 4 ಗಂಟೆಗೆ ‘ಸೌಹಾರ್ದತೆಗಾಗಿ ಮಾನವ ಸರಪಳಿ’ ನಡೆಸಲಾಗುವುದು. ಜೊತೆಗೆ ಬೆಂಗಳೂರಿನ ನೆಲಮಂಗಲ ಕ್ರಾಸ್ ಬಳಿಯಿಂದ ಬಿಡದಿವರೆಗೂ ಮಾನವ ಸರಪಳಿ ರಚನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕ್ಷುಲ್ಲಕ ಜಗಳಗಳಿಗೆ ರಾಜಕೀಯ ಬಣ್ಣ ನೀಡುವುದಲ್ಲದೇ, ಒಂದು ಕೋಮಿನ ವಿರುದ್ಧ ದ್ವೇಷ ಹುಟ್ಟು ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೌಹಾರ್ದತೆ ಕಾರ್ಯಕ್ರಮಗಳು ಬೇಕಾಗಿವೆ ಎಂದ ಅವರು, ಅಂದಿನ ಮಾನವ ಸರಪಳಿಯಲ್ಲಿ ವಿಚಾರವಾದಿಗಳು, ಹಿರಿಯ ಸಾಹಿತಿಗಳು, ಪ್ರಗತಿಪರರು ಪಾಲ್ಗೊಳ್ಳಲಿದ್ದಾರೆ ಎಂದರು.
ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪಮಾತನಾಡಿ, ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆ ಕೋಮುವಾದಿಗಳಿಂದಲೇ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ರಾಜ್ಯ ಸರಕಾರ ಬಹುಬೇಗ ಈ ಸತ್ಯವನ್ನು ಹೊರತರಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೋಮುವಾದಿಗಳು ಬಲಿ ಪಡೆದರು. ಆದರೆ, ಇಂತಹ ಕೃತ್ಯಗಳು ಎಂದಿಗೂ ಮರುಕಳಿಸಬಾರದು ಎಂದ ಅವರು, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ನಾವು ಬಿಡುವುದಿಲ್ಲ ಎಂದು ನುಡಿದರು.
ಸಾಹಿತಿ ಪ್ರೊ.ಸುಕನ್ಯಾ ಮಾರುತಿ ಮಾತನಾಡಿ, ಕ್ಷುಲ್ಲಕ ಜಗಳಗಳಿಗೆ ರಾಜಕೀಯ ಬಣ್ಣ ನೀಡುವ ಜೊತೆಗೆ ಕೋಮು ಗಲಭೆಗೆ ಪ್ರೇರಣೆ ನೀಡುವ ಶಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ವೈವಿಧ್ಯಮಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ, ನಮ್ಮ ತಲೆಮಾರು ಮಾತ್ರವಲ್ಲ, ಎಲ್ಲರ ನೆಮ್ಮದಿಯನ್ನು ಹಾಳು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಹಿಂದ ನಾಯಕ ಪ್ರೊ.ಎಂ.ವಿ.ನರಸಿಂಹಯ್ಯ ಮಾತನಾಡಿ, ಸಂವಿಧಾನ, ದಲಿತರ ಮೇಲೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪದೇ ಪದೇ ವಿವಾದಿತ ಹೇಳಿಕೆ ನೀಡುತ್ತಿದ್ದರೂ, ಬಿಜೆಪಿ ಪಕ್ಷದವರು ಅವರಿಗೆ ಕಡಿವಾಣ ಹಾಕಲು ಮುಂದಾಗಿಲ್ಲ. ಅಲ್ಲದೆ, ನರೇಂದ್ರ ಮೋದಿ ಪ್ರಧಾನಿ ಆಗಿದ್ದರಿಂದ ಕೋಮುವಾದಿಗಳೆಲ್ಲಾ ಹುಚ್ಚರಂತೆ ಆಡುತ್ತಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಮಾವಳ್ಳಿ ಶಂಕರ್, ಟಿಪ್ಪುಸಂಯುಕ್ತ ರಂಗ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ, ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ, ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ಎಸ್.ವೈ.ಗುರುಶಾಂತ್ ಸೇರಿ ಪ್ರಮುಖರಿದ್ದರು.
‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ತಮ್ಮ ಮೂರ್ಖ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶ ಇದೆ. ಆದರೆ, ಅವರು ಸೌಹಾರ್ದತೆ ಕದಡಬಾರದು’
-ಡಾ.ಕೆ.ಮರುಳಸಿದ್ದಪ್ಪ, ಹಿರಿಯ ಸಾಹಿತಿ