ಕರ್ನಾಟಕ ಇತಿಹಾಸ ಮತ್ತು ಸರ್ ವಾಲ್ಟರ್ ಎಲಿಯಟ್

Update: 2018-01-27 17:52 GMT

ಉದ್ದೇಶ ಏನೇ ಇದ್ದರೂ, ಹೇಗೆ ಅರ್ಥೈಸಿದರೂ ಬ್ರಿಟಿಷ್ ಇತಿಹಾಸಕಾರರು ಮೂಲ ದಾಖಲೆಗಳ ಸಂಗ್ರಹಣೆಯಲ್ಲಿ ಅನನ್ಯವಾದ ಕೆಲಸ ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಐತಿಹಾಸಿಕ ಪ್ರಜ್ಞೆ ನಮ್ಮ ಜನರಿಗೆ ಇರಲೇ ಇಲ್ಲ ಎಂಬ ಪಾಶ್ಚಾತ್ಯ ಅಥವಾ ಮತ್ತಾವುದೇ ವರ್ಗದ ವಿದ್ವಾಂಸರ ಹೇಳಿಕೆಯು ತೀರಾ ಬಾಲಿಶ ಎನಿಸಬಹುದು. ಹಾಗೇನಾದರೂ ನಮ್ಮ ಪ್ರಾಚೀನರಿಗೆ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆ, ಶಾಸನಗಳ ಮೂಲಕ ಅನೇಕ ಮುಖ್ಯ ವಿಷಯಗಳು ದಾಖಲಾಗುತ್ತಿರಲಿಲ್ಲ. ಓಲೆಗರಿಗಳ ಮೇಲೆ ಸಮಕಾಲೀನ ಸಾಹಿತ್ಯ ಕೃತಿಗಳು ಉಳಿಯುತ್ತಿರಲಿಲ್ಲ.

ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಮೊದಲ ವಿದ್ವಾಂಸರಲ್ಲಿ 19ನೇ ಶತಮಾನದಲ್ಲಿದ್ದ ಬ್ರಿಟಿಷ್ ಅಧಿಕಾರಿ ಸರ್ ವಾಲ್ಟರ್ ಎಲಿಯೆಟ್ ಒಬ್ಬರು. ಇವರ ಬದುಕು ಹಾಗೂ ಕೊಡುಗೆಗಳ ಬಗ್ಗೆ ಇತಿಹಾಸ ತಜ್ಞರಾದ ಗೋಪಾಲರಾವ್‌ರವರು ಬರೆದಿರುವ ಲೇಖನವಿದು.

ಕರ್ನಾಟಕದ ಇತಿಹಾಸದ ಅಧ್ಯಯನಕ್ಕೆ ಪಾಶ್ಚಾತ್ಯ ವಿದ್ವಾಂಸರ ಕೊಡುಗೆಯನ್ನು ಮರೆಯುವಂತಿಲ್ಲ. ‘ಅವರ ಅಧ್ಯಯನ ಕ್ರಮದಲ್ಲಿ ಲೋಪಗಳಿವೆ, ಅವರು ತಮಗೆ ಬೇಕಾದಂತೆ ಇತಿಹಾಸವನ್ನು ರಚಿಸಿದ್ದಾರೆ, ಅದರಲ್ಲಿ ಭಾರತೀಯ ಮನೋಧರ್ಮಕ್ಕಿಂತ, ತಮ್ಮ ಆಳ್ವಿಕೆ ಇರುವ ಪ್ರದೇಶದಲ್ಲಿ ತಮ್ಮ ಆಡಳಿತವನ್ನು ಹೇಗೆ ನಿರಾತಂಕವಾಗಿ ಮತ್ತು ನಿರಂತರವಾಗಿ ಉಳಿಸಿಕೊಳ್ಳಬೇಕು ಎಂಬ ನಿಲುವು ಪ್ರಧಾನವಾಗಿತ್ತು’ ಎಂಬ ಅಭಿಪ್ರಾಯವನ್ನು ಮ್ಯಾಕ್ಸ್ ಮುಲ್ಲರ್‌ನನ್ನು ಉದಾಹರಿಸಿ ಇಂತಹ ಅಭಿಪ್ರಾಯವನ್ನು ಸಮರ್ಥಿಸಲಾಗುತ್ತದೆ. ಈ ಅಭಿಪ್ರಾಯವನ್ನು ಸಾರಾಸಗಟಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಎಲ್ಲ ಇತಿಹಾಸಕಾರರನ್ನೂ ಈ ಅಳತೆಗೋಲಿನಿಂದಲೇ ಅಳೆಯಲಾಗುವುದಿಲ್ಲ. ಉದ್ದೇಶ ಏನೇ ಇದ್ದರೂ, ಹೇಗೆ ಅರ್ಥೈಸಿದರೂ ಬ್ರಿಟಿಷ್ ಇತಿಹಾಸಕಾರರು ಮೂಲ ದಾಖಲೆಗಳ ಸಂಗ್ರಹಣೆಯಲ್ಲಿ ಅನನ್ಯವಾದ ಕೆಲಸ ಮಾಡಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಐತಿಹಾಸಿಕ ಪ್ರಜ್ಞೆ ನಮ್ಮ ಜನರಿಗೆ ಇರಲೇ ಇಲ್ಲ ಎಂಬ ಪಾಶ್ಚಾತ್ಯ ಅಥವಾ ಮತ್ತಾವುದೇ ವರ್ಗದ ವಿದ್ವಾಂಸರ ಹೇಳಿಕೆಯು ತೀರಾ ಬಾಲಿಶಃ ಎನಿಸಬಹುದು. ಹಾಗೇನಾದರೂ ನಮ್ಮ ಪ್ರಾಚೀನರಿಗೆ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆ, ಶಾಸನಗಳ ಮೂಲಕ ಅನೇಕ ಮುಖ್ಯ ವಿಷಯಗಳು ದಾಖಲಾಗುತ್ತಿರಲಿಲ್ಲ. ಓಲೆಗರಿಗಳ ಮೇಲೆ ಸಮಕಾಲೀನ ಸಾಹಿತ್ಯ ಕೃತಿಗಳು ಉಳಿಯುತ್ತಿರಲಿಲ್ಲ.

ಬಾದಾಮಿಯ ಬಂಡೆಗಲ್ಲು ಶಾಸನ ದೊರೆತ ಸಂದರ್ಭಕ್ಕೆ, ಭಾರತದಲ್ಲಿ ಶಕ ವರ್ಷದ ಉಲ್ಲೇಖವಿರುವ ಮೊದಲ ಶಾಸನ ಅದಾಗಿತ್ತು. ಆದರೆ ಈಗ ಅದು ಮೂರನೆಯ ಸ್ಥಾನಕ್ಕಿಳಿದಿದೆ. ಮುಂದೆ ಅದರ ಸ್ಥಾನ ಮತ್ತಷ್ಟು ಇಳಿಯಬಹುದು. ಅದಕ್ಕಾಗಿ ವ್ಯಥೆಪಡುವ ಆವಶ್ಯಕತೆ ಇಲ್ಲ. ತಲಕಾಡಿನ ಉತ್ಖನನ ಆಗುವವರೆಗೆ ಗಂಗರ ಕಾಲದ ಯಾವ ಸುಳಿವೂ ಅಲ್ಲಿ ದೊರೆತಿರಲಿಲ್ಲ. ಈಗ ನಮಗೆ ಆಶ್ಚರ್ಯ ಹುಟ್ಟಿಸುವಂತಹ ಗಂಗರ ಕಾಲದ ತಡೆಗೋಡೆಗಳ ಅಸ್ತಿತ್ವವನ್ನೂ ಅಲ್ಲಿ ಕಾಣಬಹುದು. ಗಂಗರ ಕಾಲದ ಒಂದು ಬಸದಿಯ ಸುಳಿವು ಸಿಕ್ಕಿದೆ. ಬಹುತೇಕ ಅದೇ ಕಾಲಕ್ಕೆ ಸೇರುವ ಸುಂದರವಾದ ಒಂದು ಚಾಮುಂಡಿಯ ವಿಗ್ರಹ ದೊರೆತಿದೆ. ಗಂಗರ ಕಾಲದ ಮಾತ್ರವಲ್ಲದೆ ಅದಕ್ಕೂ ಮೊದಲಿನ ಕಾಲದ ಪ್ರಾಚ್ಯಾವಶೇಷಗಳೆಲ್ಲ ಅಲ್ಲಿ ದೊರೆತು ಈವರೆಗೆ ತಲಕಾಡಿನ ಬಗ್ಗೆ ಇದ್ದ ಅನುಮಾನಗಳನ್ನು ಬಗೆಹರಿಸಿದೆ; ಜೊತೆಗೆ ಇನ್ನೂ ಹೆಚ್ಚಿನ ವಿಚಾರಗಳು ಬಹಿರಂಗಗೊಳ್ಳಲು ಕಾರಣವಾಗಿದೆ. ಆದ್ದರಿಂದ ಇತಿಹಾಸದ ವಿಷಯದಲ್ಲಿ, ಈಗಾಗಲೇ ಹೇಳಿರುವಂತೆ ‘ಇದಮಿತ್ಥಂ’ ಎಂದು ಏನನ್ನೂ ತೀರ್ಮಾನಿಸಲು ಸಾಧ್ಯವಿಲ್ಲ. ಈವರೆಗೆ ದೊರೆತಿರುವ ಮತ್ತು ತಿಳಿದಿರುವ ವಿಷಯಗಳನ್ನು ಆಧರಿಸಿ ಸತ್ಯ ಎಂದು ನಂಬಿರುವ ವಿಚಾರಗಳು, ಮುಂದೆ ಹೊಸ ದಾಖಲೆಗಳು ಮತ್ತು ವಸ್ತು-ವಿಶೇಷಗಳು ದೊರೆತಾಗ ಮತ್ತಷ್ಟು ಪುಷ್ಟಿ ಪಡೆಯಬಹುದು ಅಥವಾ ತಿರುವು ಮುರುವಾಗಬಹುದು. ನಾವು ತಿಳಿದ ಅಥವಾ ನಂಬಿರುವ ವಿಚಾರಗಳು ಬದಲಾಗುತ್ತಿವೆಯೆಂಬ ಕಾರಣದಿಂದ, ಸಂಶೋಧನೆಯಿಂದ ದೂರ ನಿಲ್ಲುವುದು ಸರಿಯಲ್ಲ. ಕರ್ನಾಟಕದ ಇತಿಹಾಸವನ್ನು ವಿದ್ವಾಂಸರಿಗೆ ಮಾತ್ರವಲ್ಲದೆ ಎಲ್ಲ ಜನತೆಯ ಮುಂದೆ ತೆರೆದಿಟ್ಟ ಪಾಶ್ಚಾತ್ಯ ವಿದ್ವಾಂಸರಲ್ಲಿ ಸರ್ ವಾಲ್ಟರ್ ಎಲಿಯಟ್ ಕೂಡಾ ಮುಖ್ಯನಾಗಿದ್ದಾನೆ. 1821 ರಲ್ಲಿ (ಆಗ ಎಲಿಯಟ್‌ನ ವಯಸ್ಸು 18 ವರ್ಷ) ಈಸ್ಟ್ ಇಂಡಿಯಾ ಕಂಪೆನಿಯ ಸೇವೆಗಾಗಿ ಭಾರತಕ್ಕೆ ಬಂದ ವಾಲ್ಟರ್ ಎಲಿಯಟ್ ಮದ್ರಾಸ್‌ನ ಪೋರ್ಟ್ ಸೈಂಟ್ ಜಾರ್ಜ್ ಕಾಲೇಜಿನಲ್ಲಿ ಆಡಳಿತಾತ್ಮಕ ತರಬೇತಿ ಪಡೆದು, ಆಗ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಧಾರವಾಡದಲ್ಲಿ ನೇಮಕಗೊಂಡ. ಧಾರವಾಡವು ಮುಂಬೈ ಆಧಿಪತ್ಯಕ್ಕೆ ಸೇರಿದಾಗ ಎಲಿಯಟ್ ಕೂಡಾ ಅದೇ ಆಡಳಿತದಲ್ಲಿ ಉಳಿದ. 1833ರ ನವೆಂಬರ್‌ವರೆಗೆ ಧಾರವಾಡದಲ್ಲೇ ಸೇವೆ ಸಲ್ಲಿಸಿದ ಎಲಿಯಟ್ ಮೂರು ವರ್ಷಗಳ ರಜೆಯ ನಂತರ 1836 ರಲ್ಲಿ ಮದ್ರಾಸ್‌ಗೆ ಹಿಂದಿರುಗಿದ. ಎಲಿಯಟ್ ಹಲವಾರು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ. ಕೆಲವು ಕಾಲ ಸರಕಾರಕ್ಕೆ ಕನ್ನಡ ಭಾಷಾಂತರಕಾರನಾಗಿಯೂ ಕೆಲಸ ಮಾಡಿದ ಎಲಿಯಟ್, 1860ರಲ್ಲಿ ವೃತ್ತಿಯಿಂದ ನಿವೃತ್ತನಾಗಿ, 1887ರ ಮಾರ್ಚ್ 1 ರಂದು ಮೃತನಾದ.

1822 ರಿಂದ 1833 ರವರೆಗೆ ಉತ್ತರ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಿದ ಎಲಿಯಟ್ ಕಂದಾಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ ಹೆಚ್ಚು ಸೇವೆ ಸಲ್ಲಿಸಿದ. ಜೊತೆಗೆ ಕೆಲವು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಎಲಿಯಟ್ ಶಾಸನ ಸಂಗ್ರಹಣೆಯ ಕೆಲಸದಲ್ಲೂ ತೊಡಗಿದ್ದ. ಇವೆಲ್ಲದರ ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಲೇ, ಉತ್ತರ ಕರ್ನಾಟಕದಲ್ಲಿ ಆಗ ಪ್ರಬಲವಾಗಿದ್ದ ಮರಾಠಿ ಭಾಷೆಯಿಂದ ಕನ್ನಡ ಮಾತೃಭಾಷಿಕರನ್ನು ಪಾರು ಮಾಡುವ ಸಲುವಾಗಿ ಆತ 1830 ರಲ್ಲಿ ಹುಬ್ಬಳ್ಳಿಯಲ್ಲಿ ಕನ್ನಡ ಶಾಲೆಯೊಂದನ್ನು ಪ್ರಾರಂಭಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಮೂರು ವರ್ಷಗಳ ಕಾಲ ತನ್ನ ಸ್ವಂತ ಖರ್ಚಿನಿಂದ ಆ ಶಾಲೆಯನ್ನು ನಡೆಸಿದ ಎಲಿಯಟ್, 1833 ರಲ್ಲಿ ಧಾರವಾಡವನ್ನು ಬಿಟ್ಟಾಗ ಶಾಲೆಯನ್ನು ಕಲೆಕ್ಟರನ ವಶಕ್ಕೆ ಒಪ್ಪಿಸಿ ಹೋದ. ಎಲಿಯಟ್ ಕನ್ನಡ ಶಾಲೆಯನ್ನು ಆರಂಭಿಸುವವರೆಗೆ ಆ ಭಾಗದಲ್ಲಿ ಒಂದೂ ಕನ್ನಡ ಶಾಲೆ ಇರಲಿಲ್ಲ ಎಂಬ ಸತ್ಯ ತಿಳಿದಾಗ ಮಾತ್ರ ಎಲಿಯಟ್‌ನ ಸಾಹಸ ಮತ್ತು ಸ್ಥಳೀಯ ಜನ ಮತ್ತು ಅವರ ಭಾಷೆಯ ಬಗ್ಗೆ ಅವನಿಗಿದ್ದ ಕಳವಳಿ ಅರ್ಥವಾಗುತ್ತದೆ.

    ಧಾರವಾಡದಲ್ಲಿರುವ ಸೈಂಟ್ ಜಾನ್ ಥ್ಯಾಕರೆ ಅವರ ಗೋರಿ

ಕಿತ್ತೂರು ಸಂಗ್ರಾಮದ ಸಂದರ್ಭದಲ್ಲಿ ಥ್ಯಾಕರೆಯ ಜೊತೆಗೇ ಇದ್ದ ಎಲಿಯಟ್ ಕೆಲವು ದಿನಗಳ ಕಾಲ ಕಿತ್ತೂರಿನಲ್ಲಿ ಬಂಧಿಯಾಗಿಯೂ ಇದ್ದ. ಅವನಿಗೆ ಆ ಸಂದರ್ಭದ ಅನೇಕ ವಿಷಯಗಳು ತಿಳಿದಿದ್ದವು. ಹಲವು ಸೂಕ್ಷ್ಮ ವಿಚಾರಗಳನ್ನು ತಿಳಿಸುವ ಎಲಿಯಟ್‌ನ ಬರಹಗಳು ಐತಿಹಾಸಿಕವಾಗಿ ಮುಖ್ಯವಾಗುತ್ತವೆ. ತಳ್ಳಿಕೋರರ ಬಗ್ಗೆ ಮತ್ತು ಆಗ ಧಾರವಾಡದಲ್ಲಿದ್ದ ವ್ಯಾಪಾರಿ ಸೇಟ್ ಚತುರ ದಾಸನ ಪ್ರಾಮಾಣಿಕತೆಗಳ ಬಗ್ಗೆ ಎಲಿಯಟ್‌ನ ಬರಹಗಳಿಂದ ತಿಳಿಯಬಹುದು.

 ಸರ್ ವಾಲ್ಟರ್ ಎಲಿಯಟ್‌ನನ್ನು ಇತಿಹಾಸಕಾರರು, ಅದರಲ್ಲೂ ಶಾಸನಾಭ್ಯಾಸಿಗಳು ನೆನಪು ಮಾಡಿಕೊಳ್ಳುವುದು ಅವನೊಬ್ಬ ಶಾಸನ ಸಂಗ್ರಹಕಾರನೆಂಬ ಅಭಿಮಾನದಿಂದ. ಉತ್ತರ ಕರ್ನಾಟಕದಲ್ಲಿ ಶಾಸನಗಳ ಪಡಿಯಚ್ಚುಗಳ ಸಂಗ್ರಹಣ ಕಾರ್ಯವನ್ನು ಆರಂಭಿಸಿದ ಮೊದಲಿಗ ಸರ್ ವಾಲ್ಟರ್ ಎಲಿಯಟ್ ಎಂದೇ ತಿಳಿಯಲಾಗಿದೆ. ಎಲಿಯಟ್‌ಗೆ ಶಾಸನ ಸಂಗ್ರಹ ಮತ್ತು ಅವುಗಳ ಓದಿನಲ್ಲಿ ಸಹಾಯ ಮಾಡುತ್ತಿದ್ದವನು ಮುಂಡರಗಿ ರಂಗರಾವ್. ಈತ ಮುಂಡರಗಿ ಭೀಮರಾಯನ ಮಗ. ಭೀಮರಾವ್‌ಗೆ ಕರ್ನಲ್ ವೆಲ್ಲೆಸ್ಲಿಯು ಶಿರಚ್ಛೇದನದ ಶಿಕ್ಷೆ ವಿಧಿಸಿದ್ದ. ಎಲಿಯಟ್ ತಾನು ಸಂಗ್ರಹಿಸಿದ ವಿಷಯಗಳನ್ನು ನಾಲ್ಕು ಸಂಪುಟಗಳಲ್ಲಿ ಅಣಿ ಮಾಡಿ, ಅವುಗಳ ತಲಾ ಮೂರು ಪ್ರತಿಗಳನ್ನು ಸಿದ್ಧಪಡಿಸಿ ಕೆಲವು ಗ್ರಂಥಾಲಯಗಳಿಗೆ ಹಂಚಿದ. ಇವುಗಳಲ್ಲಿ ಕೆಲವು ಪ್ರತಿಗಳು ಇಂಡಿಯಾ ಆಫೀಸಿನ ಗ್ರಂಥಾಲಯ, ಬ್ರಿಟಿಷ್ ಲೈಬ್ರರಿಯಲ್ಲಿ ಲಭ್ಯವಿದೆ ಎಂದು ತಿಳಿದಿದೆ.

ಸರ್ ವಾಲ್ಟರ್ ಎಲಿಯಟ್‌ನ ಪ್ರಮುಖ ಕೃತಿ ಎಂದರೆ ‘ಹಿಂದೂ ಶಾಸನಗಳು’. ಇದೊಂದು ಸಂಶೋಧನಾ ಲೇಖನ. ಇದಕ್ಕಾಗಿ ಅವನು ತಾನೇ ಸಂಗ್ರಹಿಸಿದ್ದ 595 ಶಾಸನಗಳನ್ನು ಬಳಸಿಕೊಂಡಿದ್ದಾನೆ. ಆಗಿನ್ನೂ ಶಕ ವರ್ಷವನ್ನು ಕ್ರಿಸ್ತ ಶಕ ವರ್ಷಕ್ಕೆ ಪರಿವರ್ತಿಸುವ ಕೋಷ್ಟಕ ಸಿದ್ಧವಾಗಿರಲಿಲ್ಲವಾದ್ದರಿಂದ ಹಿಂದೂ ಪಂಚಾಂಗದ ಕಾಲಾನುಕ್ರಮದಲ್ಲೇ ಶಾಸನಗಳನ್ನು ಕ್ರಮವಾಗಿ ಜೋಡಿಸಿಕೊಂಡು, ಅವುಗಳಲ್ಲಿ ದೊರೆತ ರಾಜವಂಶಗಳ ಬಗ್ಗೆ ಅಧ್ಯಯನ ಮಾಡಿ, ರಾಜವಂಶಾವಳಿಗಳನ್ನು ಪತ್ತೆ ಮಾಡಿದ. ಅವನ ಅಂದಿನ ಅಧ್ಯಯನದ ಪ್ರಕಾರವೇ ಕಲ್ಯಾಣ ಚಾಲುಕ್ಯರ ರಾಜ್ಯವು ಉತ್ತರದ ಗೋದಾವರಿಯಿಂದ ದಕ್ಷಿಣದ ಕೆಳದಿಯವರೆಗೆ ವಿಸ್ತರಿಸಿತ್ತು. ಗೋವೆಯ ಕದಂಬರು, ಕಲಚುರಿಗಳು, ಶಿಲಾಹಾರರು ಮತ್ತು ಸೌಂದತ್ತಿಯ ರಟ್ಟರು, ಹೊಯ್ಸಳರು ಮತ್ತು ಸೇವುಣರ ಬಗೆಗೂ ಅಧ್ಯಯನ ಮಾಡಿದ ಎಲಿಯಟ್ ಬಸವೇಶ್ವರರು ಮತ್ತು ಬಿಜ್ಜಳನ ನಡುವಿನ ಘರ್ಷಣೆಯನ್ನೂ ಗುರುತಿಸಿದ್ದಾನೆ. ಇದಕ್ಕೆ ಅವರೆಗೆ ಲಭ್ಯವಿದ್ದ ಕನ್ನಡ, ತೆಲುಗು ಮತ್ತು ಸಂಸ್ಕೃತ ಕಾವ್ಯಗಳ ನೆರವನ್ನೂ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆ ಕಾಲಕ್ಕೆ ತನಗೆ ಲಭ್ಯವಿದ್ದ ಆಕರಗಳ ನೆರವಿನಿಂದ ತನ್ನ ತಿಳುವಳಿಕೆಯ ಮಿತಿಯಲ್ಲಿ ವಿಷಯಗಳನ್ನು ಪ್ರಸ್ತಾಪಿಸಿರುವ ಎಲಿಯಟ್‌ನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಆವಶ್ಯಕತೆಯಿಲ್ಲವಾದರೂ ಅವನ ಎಲ್ಲಾ ತೀರ್ಮಾನಗಳನ್ನೂ ಒಪ್ಪಿಕೊಳ್ಳಬೇಕಾಗಿಲ್ಲ.

ಹಾನಗಲ್‌ನ ಪ್ರಾಚೀನತೆಯನ್ನು ಕುರಿತಂತೆ ಮತ್ತು ನೌಬತ್ ಮತ್ತು ಪಂಚಮಹಾಶಬ್ದಗಳ ನಡುವಿನ ಸಾಮ್ಯತೆಯನ್ನು ಕುರಿತು ಬರೆದಿರುವ ಆತನ ಲೇಖನಗಳೂ ಸಹ ಗಮನ ಸೆಳೆಯುತ್ತವೆ.

ಕರ್ನಾಟಕದ ಉತ್ತರ ಭಾಗದಲ್ಲಿ ಅಧಿಕಾರಿಯಾಗಿದ್ದುಕೊಂಡೇ, ಅಲ್ಲಿನ ಸ್ಥಳೀಯ ಭಾಷೆಯಾದ ಕನ್ನಡಕ್ಕೆ ಮಾನ್ಯತೆ ತಂದುಕೊಟ್ಟು, ಆ ಭಾಗದಲ್ಲಿ ಮೊದಲ ಕನ್ನಡ ಶಾಲೆಯನ್ನು ಆರಂಭಿಸಿ, ಶಾಸನಗಳ ಸಂಗ್ರಹಣೆ ಮಾಡಿ, ಅವುಗಳನ್ನು ವಿಶ್ಲೇಷಿಸಿ ಲೇಖನಗಳ ಮೂಲಕ ದಾಖಲಿಸಿ, ತನ್ನ ಶಾಸನ ಸಂಗ್ರಹವನ್ನು ಕೆಲವು ಬಹು ಮುಖ್ಯ ಗ್ರಂಥಾಲಯಗಳಲ್ಲಿ ರಕ್ಷಿಸಿದ ಜಾಣತನ ಮತ್ತು ತನ್ನ ಆಳ್ವಿಕೆಯ ದೇಶ ಮತ್ತು ಭಾಷೆಯ ಬಗ್ಗೆ ಪ್ರೀತಿ ಮತ್ತು ಗೌರವಗಳನ್ನು ಇರಿಸಿಕೊಂಡಿದ್ದ ಸರ್ ವಾಲ್ಟರ್ ಎಲಿಯಟ್‌ನನ್ನು ಕನ್ನಡಿಗರು ಮರೆಯುವಂತಿಲ್ಲ. ಅವನು ತೀರಾ ಪ್ರಸಿದ್ಧನೂ ಆಗಲಿಲ್ಲ. ಅವನ ವಿಚಾರಗಳನ್ನು ನಾವು ಈಗ ಪೂರ್ಣವಾಗಿ ಒಪ್ಪಲು ಆಗುವುದಿಲ್ಲವಾದರೂ ಆ ಕಾಲಕ್ಕೆ ಅವನು ವಹಿಸಿದ ಆಸಕ್ತಿ ಮತ್ತು ಶ್ರಮವನ್ನು ಮರೆಯುವಂತಿಲ್ಲ.

ಸರ್ ವಾಲ್ಟರ್ ಎಲಿಯಟ್‌ನ ಪ್ರಮುಖ ಕೃತಿ ಎಂದರೆ ‘ಹಿಂದೂ ಶಾಸನಗಳು’. ಇದೊಂದು ಸಂಶೋಧನಾ ಲೇಖನ. ಇದಕ್ಕಾಗಿ ಅವನು ತಾನೇ ಸಂಗ್ರಹಿಸಿದ್ದ 595 ಶಾಸನಗಳನ್ನು ಬಳಸಿಕೊಂಡಿದ್ದಾನೆ. ಆಗಿನ್ನೂ ಶಕ ವರ್ಷವನ್ನು ಕ್ರಿಸ್ತ ಶಕ ವರ್ಷಕ್ಕೆ ಪರಿವರ್ತಿಸುವ ಕೋಷ್ಟಕ ಸಿದ್ಧವಾಗಿರಲಿಲ್ಲವಾದ್ದರಿಂದ ಹಿಂದೂ ಪಂಚಾಂಗದ ಕಾಲಾನುಕ್ರಮದಲ್ಲೇ ಶಾಸನಗಳನ್ನು ಕ್ರಮವಾಗಿ ಜೋಡಿಸಿಕೊಂಡು, ಅವುಗಳಲ್ಲಿ ದೊರೆತ ರಾಜವಂಶಗಳ ಬಗ್ಗೆ ಅಧ್ಯಯನ ಮಾಡಿ, ರಾಜವಂಶಾವಳಿಗಳನ್ನು ಪತ್ತೆ ಮಾಡಿದ.

(ಕೃಷೆ : ನವಕರ್ನಾಟಕ ಪ್ರಕಾಶನದ ಇತಿಹಾಸದ ಪರಾಮರ್ಶೆ ಕೃತಿ)

Writer - ಡಾ. ಎಚ್.ಎಸ್. ಗೋಪಾಲ ರಾವ್

contributor

Editor - ಡಾ. ಎಚ್.ಎಸ್. ಗೋಪಾಲ ರಾವ್

contributor

Similar News