ಕಂಪ್ಯೂಟರ್ ಕನ್ನಡ ಬಳಕೆ ಸಮಸ್ಯೆಗಳ ಮೂಲ ಹಲವು ಸ್ತರಗಳ ತಂತ್ರಾಂಶಗಳು

Update: 2018-01-27 18:09 GMT

ಕಂಪ್ಯೂಟರ್‌ನಲ್ಲಿ ಹಲವು ಸ್ತರಗಳ ತಂತ್ರಾಂಶಗಳು ಕಾರ್ಯ ನಿರ್ವಹಿಸುತ್ತವೆ. ಕನ್ನಡ ಬಳಕೆ ಸಮಸ್ಯೆಗಳ ಮೂಲವನ್ನು ತಿಳಿದುಕೊಳ್ಳಲು ಎಲ್ಲ ಸ್ತರಗಳ ತಂತ್ರಾಂಶಗಳನ್ನು ಗಮನಿಸಬೇಕು. ಕಂಪ್ಯೂಟರ್‌ನ ಮೊದಲ ಸ್ತರದ ತಂತ್ರಾಂಶವಾಗಿ ‘ಕಾರ್ಯಾಚರಣೆ ವ್ಯವಸ್ಥೆ’ (ಒ.ಎಸ್.) ಇದೆ. ಎರಡನೆಯ ಸ್ತರವಾಗಿ ‘ಆನ್ವಯಿಕ ತಂತ್ರಾಂಶ’ (ಆಪ್ಲಿಕೇಷನ್ಸ್) ಇದೆ. ಮೂರನೆಯ ಸ್ತರವಾಗಿ ‘ಕನ್ನಡ ಲಿಪಿ ತಂತ್ರಾಂಶ’ಗಳನ್ನು (ಫಾಂಟ್ ಅಥವಾ ಸ್ಕ್ರಿಪ್ಟ್ ಸಾಫ್ಟ್‌ವೇರ್) ಅಳವಡಿಸಿಕೊಂಡು ಬಳಸಲಾಗುತ್ತಿದೆ. ಕನ್ನಡ ಲಿಪಿವ್ಯವಸ್ಥೆಯನ್ನು ಕುರಿತಂತೆ ಇರುವ ಲಿಪಿತಂತ್ರಜ್ಞಾನವನ್ನು ಆಯಾ ಕಾಲಘಟ್ಟದ ಕಂಪ್ಯೂಟರ್ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ಪ್ರಮುಖವಾಗಿ ನಾಲ್ಕು ತಲೆಮಾರುಗಳನ್ನಾಗಿ ವಿಂಗಡಿಸಬಹುದು. ಕಾಲಾನುಕ್ರಮದಲ್ಲಿ ಆವಿಷ್ಕಾರಗೊಂಡು ಬಳಕೆಗೆ ಬಂದ ವಿವಿಧ ಕಾರ್ಯಾಚರಣೆ ವ್ಯವಸ್ಥೆಗಳು ಮತ್ತು ಅವುಗಳ ಮೇಲೆ ಕಾರ್ಯನಿರ್ವಹಿಸುವ ಆನ್ವಯಿಕ ತಂತ್ರಾಂಶಗಳಲ್ಲಿನ ಕನ್ನಡ ಲಿಪಿವ್ಯವಸ್ಥೆಗಳ ಉಗಮ ಮತ್ತು ವಿಕಾಸಗಳ ಕುರಿತಾದ ಇತಿಹಾಸವನ್ನು ಗಮನಿಸಿದರೆ ಕನ್ನಡ ಭಾಷಾ ಬಳಕೆಯ ಸಮಸ್ಯೆಗಳು ಮತ್ತು ಪರಿಹಾರಗಳ ಇತಿಹಾಸವೂ ನಮಗೆ ತಿಳಿದುಬರುತ್ತದೆ.

ಕನ್ನಡದ ಪ್ರತ್ಯೇಕ ಎಡಿಟರ್‌ಗಳಲ್ಲಿ; ಒ.ಎಸ್. ಮೇಲೆ ಕಾರ್ಯನಿರ್ವಹಿಸುವ ಆನ್ವಯಿಕ ತಂತ್ರಾಂಶಗಳಲ್ಲಿ ಕನ್ನಡದ ಲಿಪಿವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆಯಾಯ ಕಾಲಘಟ್ಟದಲ್ಲಿ ಆವಿಷ್ಕಾರಗೊಂಡ ಕಂಪ್ಯೂಟರ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ. ಒ.ಎಸ್. ಮೇಲೆ ಕನ್ನಡ ಲಿಪಿವ್ಯವಸ್ಥೆ ಆವಿಷ್ಕಾರ ಮತ್ತು ಅದು ವಿವಿಧ ನೆಲೆಗಳಲ್ಲಿ ಬಳಕೆಗೆ ಬಂದ ಬಗೆ ಕುತೂಹಲಕಾರಿಯಾಗಿದೆ. ಇದನ್ನು ತಿಳಿಯಲು ಲಿಪಿತಂತ್ರಜ್ಞಾನಗಳನ್ನು ಕಾಲಾನುಕ್ರಮಣಿಕೆಯ ತಲೆಮಾರುಗಳಾಗಿ (ಪೀಳಿಗೆಗಳು) ವಿಂಗಡಿಸಬಹುದು. ಬಳಕೆದಾರರ ಸಂಖ್ಯೆ ಮತ್ತು ಜನಪ್ರಿಯತೆಗಳ ಆಧಾರದಲ್ಲಿ, ಹಿಂದಿದ್ದ ‘ಮೈಕ್ರೋಸಾಫ್ಟ್ ಡಿಸ್ಕ್ ಆಪರೇಟಿಂಗ್ ಸಿಸ್ಟಂ’ (.ಖ.ಈಖ) ಮತ್ತು ಈಗಿರುವ ‘ಮೈಕ್ರೋಸಾಫ್ಟ್ ವಿಂಡೋಸ್’ ಕಾರ್ಯಾಚರಣೆ ವ್ಯವಸ್ಥೆಗಳು ಮುಂಚೂಣಿ ಒ.ಎಸ್.ಗಳು. ಈ ಒಎಸ್‌ಗಳ ಮೇಲೆ ಕಾರ್ಯನಿರ್ವಹಿಸುವ ಹಲವಾರು ಪ್ರಮುಖ ಕನ್ನಡ ತಂತ್ರಾಂಶಗಳು ಬಳಕೆಗೆ ಬಂದಿವೆ. ಉಚಿತ ಮತ್ತು ಮುಕ್ತ ತಂತ್ರಾಂಶಗಳಾದ ಲಿನಕ್ಸ್, ಉಬುಂಟು ಇತ್ಯಾದಿ ಒ.ಎಸ್.ಗಳಲ್ಲಿಯೂ ಕನ್ನಡ ಲಿಪಿತಂತ್ರಾಂಶಗಳಿದ್ದರೂ ವಿಂಡೋಸ್ ಒ.ಎಸ್.ಗೆ ಹೋಲಿಸಿದರೆ ಅವುಗಳ ಬಳಕೆ ಕಡಿಮೆ ಇದೆ.

ಈಖ ಒ.ಎಸ್.ನ ಆವಿಷ್ಕಾರವನ್ನು ಮೊದಲನೆ ತಲೆಮಾರಿನ ತಂತ್ರಜ್ಞಾನ ಎಂದು ಗುರುತಿಸಿದರೆ, ಆ ಕಾಲಘಟ್ಟದ ಸಂದರ್ಭದಲ್ಲಿ ಕಂಪ್ಯೂಟರ್‌ನಲ್ಲಿ ಕೇವಲ ಇಂಗ್ಲಿಷ್ ಲಿಪಿಯ ಪ್ರಾಧಾನ್ಯತೆ ಇತ್ತು. ಒ.ಎಸ್.ನಲ್ಲಿನ ಅಂತರ್ಗತ ವ್ಯವಸ್ಥೆಯಾಗಿ ಇಂಗ್ಲಿಷ್ ಪಠ್ಯಸಂಪಾದನಾ ಎಡಿಟರ್‌ಗಳು ಮಾತ್ರ ಇದ್ದವು. ಕನ್ನಡದ ಪಠ್ಯಸಂಪಾದನೆಗೆ ಅವಕಾಶವೇ ಇರಲಿಲ್ಲ. ಹೀಗಾಗಿ, ಮೊದಲನೆಯ ತಂತ್ರಾಂಶ ಸ್ತರವಾದ ಒ.ಎಸ್. ಮಟ್ಟದಲ್ಲಿ ಕನ್ನಡ ಲಿಪಿಗೆ ಯಾವುದೇ ಸ್ಥಾನವಿರಲಿಲ್ಲ. ಕನ್ನಡ ಲಿಪಿವ್ಯವಸ್ಥೆಗಳೂ ಅಸ್ತಿತ್ವದಲ್ಲಿ ಇರಲಿಲ್ಲ.

ಈಖ ಒ.ಎಸ್.ನ ಮೇಲೆ ಕಾರ್ಯನಿರ್ವಹಿಸುವ ಎಡಿಟರ್‌ಗಳ ಕಾಲವನ್ನು ಎರಡನೆಯ ತಲೆಮಾರಿನ ಲಿಪಿತಂತ್ರಜ್ಞಾನ ಎಂದು ಗುರುತಿಸಬಹುದು. ಆಗಲೂ ಸಹ ಕಾರ್ಯಾಚರಣೆ ವ್ಯವಸ್ಥೆಯ ಮಟ್ಟದಲ್ಲಿ ಕನ್ನಡಕ್ಕೆ ಸ್ಥಾನ ಇರಲಿಲ್ಲ, ಆದರೆ, ಒ.ಎಸ್.ಗಳ ಮೇಲೆ ಕಾರ್ಯನಿರ್ವಹಿಸುವ ಎರಡನೆಯ ತಂತ್ರಾಂಶ ಸ್ತರವಾದ ಆನ್ವಯಿಕ ತಂತ್ರಾಂಶಗಳಲ್ಲಿ ಕನ್ನಡ ಲಿಪಿವ್ಯವಸ್ಥೆಯನ್ನು ಆಂತರಿಕವಾಗಿ ರೂಪಿಸಿಕೊಳ್ಳಬಹುದಿತ್ತು. ಇತರರು (ಥರ್ಡ್‌ಪಾರ್ಟಿ) ಸಿದ್ಧಪಡಿಸಿದ ತಂತ್ರಾಂಶಗಳನ್ನು ಅಳವಡಿಸಿಕೊಂಡು ಬಳಸಬಹುದಿತ್ತು. ಈ ‘ಆಂತರಿಕ ಲಿಪಿವ್ಯವಸ್ಥೆ’ಗಳ ಎಡಿಟರ್‌ಗಳಲ್ಲಿ, ಕನ್ನಡ ಭಾಷೆಯ ಪಠ್ಯದ - ಇನ್‌ಪುಟ್, ಸ್ಟೋರೇಜ್ ಮತ್ತು ಡಿಸ್‌ಪ್ಲೇ - ಈ ಮೂರೂ ಪ್ರಮುಖ ಅಂಶಗಳು ತಂತ್ರಾಂಶಗಳಲ್ಲಿ ಅಂತರ್ಗತವಾಗಿ ಇದ್ದವು. ಮಾಹಿತಿ ಹೂಡಿಕೆಗೆ ಸಾಮಾನ್ಯವಾಗಿ ಒಂದೇ ವಿನ್ಯಾಸದ ಕೀಲಿಮಣೆ, ಪ್ರದರ್ಶನಕ್ಕಾಗಿ ಒಂದು ಅಕ್ಷರ ವಿನ್ಯಾಸ ಮಾತ್ರ ಮತ್ತು ಮುದ್ರಣಕ್ಕೆ ಅಲ್ಪ ಪ್ರಮಾಣದ ವೈವಿಧ್ಯಮಯ ಅಕ್ಷರರೂಪಗಳು (ಪೋಸ್ಟ್‌ಸ್ಕ್ರಿಪ್ಟ್ ಾಂಟ್‌ಗಳು) ಈ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದವು.

ಇಂಗ್ಲಿಷ್ ಭಾಷೆಯ ಜೊತೆಗೆ ಯಾವುದೇ ಇತರ ಭಾಷೆಯನ್ನು ಬಳಸಬಹುದಾದ ಫಾಂಟ್ ತಂತ್ರಜ್ಞಾನ ಆವಿಷ್ಕಾರಗೊಂಡ ಕಾಲವನ್ನು ಲಿಪಿತಂತ್ರಜ್ಞಾನದ ಮೂರನೆಯ ತಲೆಮಾರು ಎಂದು ಗುರುತಿಸಬಹುದು. ಈ ಕಾಲಘಟ್ಟದಲ್ಲಿ ಬಂದ ‘ಕನ್ನಡದ ಫಾಂಟ್’ ಲಿಪಿವ್ಯವಸ್ಥೆಗಳು ಆನ್ವಯಿಕ ತಂತ್ರಾಂಶದ ಒಂದು ಭಾಗವಾಗಿ ಇರದೆ ಪ್ರತ್ಯೇಕವಾದ ಒಂದು ಸ್ತರವಾಗಿ ಬಳಕೆಗೆ ಬಂದವು. ಕಾರ್ಯಾಚರಣೆ ವ್ಯವಸ್ಥೆ ಮತ್ತು ಆನ್ವಯಿಕ ತಂತ್ರಾಂಶದ ನಂತರದ ಸ್ತರ, ಅಂದರೆ, ಮೂರನೆಯ ಸ್ತರವಾಗಿ ಈ ಕನ್ನಡ ಲಿಪಿವ್ಯವಸ್ಥೆಗಳು ಇಂದಿಗೂ ಬಳಕೆಯಲ್ಲಿ ಇವೆ. ಪ್ರತ್ಯೇಕ ಕನ್ನಡ ಲಿಪಿವ್ಯವಸ್ಥೆಗಳಲ್ಲಿ ಲಭ್ಯವಿರುವ ಹಲವು ಕೀಲಿಮಣೆ ವಿನ್ಯಾಸಗಳಲ್ಲಿ ಒಂದನ್ನು ಆಯ್ಕೆಮಾಡಿಕೊಂಡು ಬಳಸುವ ಸೌಲಭ್ಯ ಇದೆ. ಕನ್ನಡದ ಲಿಪಿ ಸೌಂದರ್ಯವನ್ನು ಮುದ್ರಣದಲ್ಲಿಯೂ ಸಹ ಕಾಪಾಡಿಕೊಂಡು ಬರಲು ವಿವಿಧ ಅಕ್ಷರರೂಪಗಳು ಮತ್ತು ಶೈಲಿಗಳಲ್ಲಿ ಆಲಂಕಾರಿಕ ಫಾಂಟ್‌ಗಳು ಬಳಕೆದಾರರ ಆಯ್ಕೆಗೆ ಲಭ್ಯ ಇವೆ. ಪರದೆಯಲ್ಲಿರುವಂತೆ ಯಥಾವತ್ ರೂಪ-ವಿನ್ಯಾಸಗಳಲ್ಲಿಯೇ ಪಠ್ಯವನ್ನು ಮುದ್ರಿಸಿಕೊಳ್ಳಲೂ ಸಹ ಈ ಕಾಲಘಟ್ಟದಲ್ಲಿ ಸಾಧ್ಯವಾಯಿತು.

ಒ.ಎಸ್. ಮಟ್ಟದಲ್ಲಿಯೇ ಕನ್ನಡ ಲಿಪಿವ್ಯವಸ್ಥೆಯು ಲಭ್ಯವಿರದಿದ್ದ ಕಾರಣದಿಂದಾಗಿ - ‘ಕಾರ್ಯಾಚರಣೆ ವ್ಯವಸ್ಥೆ’ (ಉದಾ. ವಿಂಡೋಸ್), ಆನ್ವಯಿಕ ತಂತ್ರಾಂಶ (ಉದಾ. ಎಂ.ಎಸ್.ವರ್ಡ್) ಮತ್ತು ‘ಕನ್ನಡದ ಲಿಪಿ ತಂತ್ರಾಂಶ’ (ಉದಾ. ನುಡಿ) - ಇವುಗಳ ನಡುವೆ ಪರಸ್ಪರ ಸಂಘರ್ಷಕ್ಕೆ ಕಾರಣವಾಗಿ, ಅನೇಕ ಬಳಕೆಯ ಸಮಸ್ಯೆಗಳು ಉದ್ಭವಿಸಿದವು. ಪಠ್ಯವನ್ನು ‘ಕನ್ನಡದ ಪಠ್ಯ’ ಎಂದು ಕಾರ್ಯಾಚರಣೆ ವ್ಯವಸ್ಥೆಯು ಗುರುತಿಸದ ಕಾರಣ ಕಂಪ್ಯೂಟರ್ ಕನ್ನಡ ಬಳಕೆಯಲ್ಲಿ ಅನೇಕ ಸಮಸ್ಯೆಗಳು ಮುಂದುವರಿದವು. ವಿಂಡೋಸ್ ಒಂದು ‘ಜಿಯುಐ’ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್) ಇರುವ ಒ.ಎಸ್. ಇದರ ಮೇಲೆ ಕೆಲಸಮಾಡುವ ಆನ್ವಯಿಕ ತಂತ್ರಾಂಶಗಳಲ್ಲಿ ಎಲ್ಲೆಲ್ಲಿ ಫಾಂಟ್ ಬದಲಿಸಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಕನ್ನಡದ ಪಠ್ಯಗಳು ‘ವಿಚಿತ್ರಲಿಪಿ’ಗಳಾಗಿ ಕಂಡುಬರುತ್ತವೆ. ವಿಂಡೋಸ್ ಅಂತಾರಾಷ್ಟ್ರೀಯ ಕಂಪೆನಿ ಮೈಕ್ರೋಸಾಫ್ಟ್ ನ ಉತ್ಪನ್ನ. ‘ನುಡಿ’ ಎಂಬುದು ಸ್ಥಳೀಯ ಉತ್ಪನ್ನ. ರಾಷ್ಟ್ರೀಯ ಮತ್ತು ಸ್ಥಳೀಯ ತಂತ್ರಾಂಶ ತಯಾರಕರು ಮಾಲಕತ್ವದ ಒ.ಎಸ್.ಗಳ ಒಳಗೆ ಹಸ್ತಕ್ಷೇಪ ಮಾಡುವುದು ಎಂದಿಗೂ ಸಾಧ್ಯವಿಲ್ಲ. ಆದರೂ, ಸಾಧ್ಯವಿರುವ ಎಲ್ಲ ಕಸರತ್ತುಗಳನ್ನು ಮಾಡಿ, ಕನ್ನಡದ ಪಠ್ಯಮೂಡಿಕೆಗಾಗಿ ಕನ್ನಡ ಲಿಪಿವ್ಯವಸ್ಥೆಗಳನ್ನು ರೂಪಿಸಲಾಗಿದೆ. ಒಂದು ‘ಪದರ ತಂತ್ರಜ್ಞಾನ’ ವಾದ ಈ ಕನ್ನಡದ ಲಿಪಿವ್ಯವಸ್ಥೆಗಳು ಒ.ಎಸ್.ನೊಳಗೆ ಒಂದಾಗಿ ಸೇರಿಕೊಳ್ಳದೆ, ಅನಿವಾರ್ಯವಾಗಿ, ಅವು ಒಂದು ಸ್ತರವಾಗಿಯೇ ಉಳಿದ ಕಾರಣ, ಬಳಕೆದಾರರಿಗೆ ಹಲವಾರು ಸಮಸ್ಯೆಗಳನ್ನು ತಂದೊಡ್ಡಿದವು. ತಂತ್ರಾಂಶಗಳ ಹೊಸ ಹೊಸ ಆವೃತ್ತಿಗಳು ಬಂದಂತೆಲ್ಲಾ ಕೆಲವು ಹಳೆಯ ಸಮಸ್ಯೆಗಳು ಬಗೆಹರಿದು ಹೊಸ ಹೊಸ ಸಮಸ್ಯೆಗಳು ತಲೆದೋರಿದವು.

ಇಂಗ್ಲಿಷ್ ಲಿಪಿವ್ಯವಸ್ಥೆಗೆ ಒ.ಎಸ್. ಮಟ್ಟದಿಂದಲೇ ಬೆಂಬಲವಿರುವ ಕಾರಣ ಅದರ ಬಳಕೆಯಲ್ಲಿ ಯಾವುದೇ ಗೊಂದಲ, ಸಮಸ್ಯೆ ಇಲ್ಲ. ಇಂಗ್ಲಿಷ್‌ಗಾದರೋ ‘ಸ್ಟ್ಯಾಂಡರ್ಡ್’ ಎಂಬ ಚೌಕಟ್ಟಿನಲ್ಲಿ ನಿರ್ದಿಷ್ಟ ನಿಯಮಗಳನ್ನು ಪಾಲಿಸಿಯೇ ತಂತ್ರಾಂಶಗಳನ್ನು ತಯಾರಿಸಲಾಗುತ್ತಿದೆ. ಕನ್ನಡಕ್ಕೆ ಇಂತಹ ಸ್ಟ್ಯಾಂಡರ್ಡ್‌ಗಳು ಮೊದಲು ಇರಲಿಲ್ಲ. ನಿಯಮಗಳು ಇಲ್ಲದ ಕಾಲದಲ್ಲಿ ರಾಷ್ಟ್ರೀಯ ಮತ್ತು ಸ್ಥಳೀಯ ತಂತ್ರಾಂಶ ತಯಾರಕರು ತಮಗೆ ತೋಚಿದಂತೆ ತಂತ್ರಾಂಶಗಳನ್ನು ಸಿದ್ಧಪಡಿಸಿ ನೀಡಿದ ಕಾರಣ ಮುಂದೆ, ಹಲವು ರೀತಿಯ ಹೊಂದಿಕೆಯ (ಕಂಪ್ಯಾಟಬಿಲಿಟಿ) ಮತ್ತು ಪಠ್ಯ ವಿನಿಮಯದ ಸಮಸ್ಯೆಗಳು ಉಂಟಾದವು. ಕನ್ನಡದ ಲಿಪಿವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸಲು ತಂತ್ರಾಂಶ ತಯಾರಕರು ಮಾಡಿರುವ ವಿವಿಧ ರೀತಿಯ ಕಾರ್ಯತಂತ್ರಗಳು, ಕಸರತ್ತುಗಳು ಒಂದು ಹಂತದವರೆಗೂ ಯಶಸ್ವಿಯಾಗಿದ್ದು, ನಂತರದ ಕೆಲವು ಹಂತಗಳಲ್ಲಿ ವಿವಿಧ ರೀತಿಯಲ್ಲಿ ವಿಫಲವಾಗಿವೆ. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರೇ ಕನ್ನಡವೂ ಸೇರಿದಂತೆ ಇಂಗ್ಲಿಷೇತರ ಭಾಷೆಗಳನ್ನು ತಮ್ಮ ಒ.ಎಸ್.ಗಳಲ್ಲಿ ಅಳವಡಿಸಿ ನೀಡಿರುವ ತಂತ್ರಜ್ಞಾನವನ್ನು ನಾಲ್ಕನೆಯ ತಲೆಮಾರಿನ ಲಿಪಿತಂತ್ರಜ್ಞಾನ ಎಂದು ಗುರುತಿಸಬಹುದು. ಈ ಕಾಲಘಟ್ಟದಲ್ಲಿ ಕನ್ನಡದ ಲಿಪಿವ್ಯವಸ್ಥೆಯು ಒಂದು ಪ್ರತ್ಯೇಕ ಸ್ತರವಾಗಿ ಉಳಿಯದೆ, ಕಾರ್ಯಾಚರಣೆ ವ್ಯವಸ್ಥೆಯೊಂದಿಗೆ ಬೆರೆತುಹೋಯಿತು. ಈಗ ಕನ್ನಡ ಲಿಪಿವ್ಯವಸ್ಥೆಯನ್ನು ಮೂರನೆಯ ಸ್ತರವನ್ನಾಗಿ ಕಂಪ್ಯೂಟರ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಆವಶ್ಯಕತೆ ಇಲ್ಲ. ಆದಾಗ್ಯೂ, ಮೂರನೆಯ ಸ್ತರದಲ್ಲಿ ಬಳಕೆಗೆ ಬಂದ ಕನ್ನಡ ಲಿಪಿವ್ಯವಸ್ಥೆಗಳ ಬಳಕೆಯನ್ನು ಮುಂದುವರಿಸಲು ತೊಂದರೆಗಳು ಇಲ್ಲ. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ಒ.ಎಸ್.ಗಳು ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳಲ್ಲಿ ಈಗ ಕನ್ನಡವನ್ನೂ ಸಹ ಅಳವಡಿಸಿ ನೀಡುತ್ತಿದ್ದಾರೆ. ಯೂನಿಕೋಡ್ ಎಂಬ ವಿಶ್ವಾಸಾತ್ಮಕ ಶಿಷ್ಟತೆಯು ಕನ್ನಡಕ್ಕೂ ಅನ್ವಯಿಸಲಾಗಿದೆ. ನಿಯಮಗಳನ್ವಯ ಸಿದ್ಧಗೊಂಡ ಕನ್ನಡ ಲಿಪಿವ್ಯವಸ್ಥೆಯಿಂದಾಗಿ ಈಗ ‘ಕಂಪ್ಯಾಟಬಿಲಿಟಿ’ ಸಮಸ್ಯೆಗಳು ಇಲ್ಲವಾಗಿವೆ. ಹಳೆಯ ಎನ್‌ಕೋಡಿಂಗ್ ವ್ಯವಸ್ಥೆಯಾದ ಆಸ್ಕಿ ಹಿನ್ನೆಲೆಗೆ ಸರಿದಿದೆ. ಈಗ ಕನ್ನಡಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ದೊರೆತಿದೆ. ಕನ್ನಡಕ್ಕೆ ಈಗ ಪದರ ರೂಪದ ಲಿಪಿತಂತ್ರಾಂಶಗಳ ಅಗತ್ಯವಿಲ್ಲ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News