ಕೃಷ್ಣ ಶೆಟ್ಟಿ ಗೌರವಿಸದಿರುವುದು ಬೇಸರದ ಸಂಗತಿ: ಸಭಾಪತಿ ಶಂಕರಮೂರ್ತಿ

Update: 2018-01-28 12:59 GMT

ಬೆಂಗಳೂರು, ಜ. 28: ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಸಂಸ್ಥೆ ಸದಸ್ಯರಾಗಿ ಆಯ್ಕೆಯಾಗಿರುವ ಕೃಷ್ಣಶೆಟ್ಟಿ ಅವರನ್ನು ಮುಖ್ಯಮಂತ್ರಿ, ಇಲಾಖೆ ಸಚಿವರಾಗಲಿ ಕರೆದು ಗೌರವಿಸದಿರುವುದು ಬೇಸರದ ಸಂಗತಿ ಎಂದು ವಿಧಾನ ಪರಿಷತ್ ಸಭಾಪತಿ ಡಿ. ಎಚ್.ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಸ್ನೇಹಮಿಲನ ಒಕ್ಕೂಟ ವತಿಯಿಂದ ನಗರದ ಮಿಥಿಕ್ ಸೊಸೈಟಿಯಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಆಡಳಿತಾಧಿಕಾರಿ ಚಿ.ಸು.ಕೃಷ್ಣಶೆಟ್ಟಿ ‘ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಸಂಸ್ಥೆಯ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗುವುದು. ವಿಧಾನಸೌಧಲ್ಲಿ ಒಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರತಿಯೊಬ್ಬ ಯುವ ಕಲಾವಿದರೂ ಕೃಷ್ಣಶೆಟ್ಟಿಯಂತೆ ಆಗಬೇಕು. ಈ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಬೇಕು. ಈ ಹಿಂದೆ ದೇಶದ ಇಬ್ಬರು ಕಲಾವಿದರು ರಷ್ಯನ್ ಅಕಾಡೆಮಿಯ ಸದಸ್ಯತ್ವ ಪಡೆದಿದ್ದರು. ಈಗ ಕೃಷ್ಣಶೆಟ್ಟಿ ಸದಸ್ಯತ್ವ ಪಡೆದಿದ್ದು, ಅವರು ದೇಶದ ಮೂರನೇ ವ್ಯಕ್ತಿ. ಇಂತಹ ಹೆಚ್ಚೆಚ್ಚು ಕಲಾವಿದರು ಹುಟ್ಟಿಕೊಳ್ಳಲಿ ಎಂದು ಆಶಿಸಿದರು.

ಕಲೆ ಇಂದು ದುರುಪಯೋಗವಾಗುತ್ತಿದೆ. ಹೀಗಾಗಿ ಕಲಾವಿದರು ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡಬಾರದು. ಇರುವ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ, ಮುಂದಿನ ಪೀಳಿಗೆಗೆ ಅದನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರು ಮಾಡಿದ ಸಾಧನೆಗಳನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು. ಕಲಾವಿದರು ಅವರು ಮಾಡಿದ ಸಾಧನೆಗಳನ್ನು ಗುರುತಿಸಿ, ಗೌರವಿಸಬೇಕು. ಆಗ ಕಲಾವಿದರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ರಾಜ್ಯದ ಕೀರ್ತಿಯೂ ಹೆಚ್ಚುತ್ತದೆ. ಈ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ಕಲಾವಿದರು ಸಾಮಾಜಿಕ ತಲ್ಲಣ, ಜನರ ನೋವು ನಲಿವುಗಳನ್ನು ಬಿಂಬಿಸಬೇಕು. ಈ ಮೂಲಕ ಪ್ರಸ್ತುತ ಕಾಲಘಟ್ಟದ ಜನರ ನೋವು-ನಲಿವು ಹಾಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಜನರ ಭಾಷೆಯಲ್ಲಿಯೇ ಅರಿವು ಮೂಡಿಸಬೇಕು. ರಾಜ್ಯದಲ್ಲಿನ ಕಲಾವಿದರು ಹಾಗೂ ಕಲಾ ಸಂಸ್ಥೆಗಳು ಯಾವುದೇ ಕಾರಣಕ್ಕೂ ಕಲೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ತಮ್ಮ ಕಲೆಯ ಮೂಲಕ ಹಾದಿ ತಪ್ಪಿರುವ ಹಾಗೂ ತಪ್ಪುತ್ತಿರುವ ಸಮಾಜವನ್ನು ಸರಿಪಡಿಸುವ ಮತ್ತು ತಪ್ಪುಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕಲಾವಿದರು ಯಾವುದೇ ಧರ್ಮ, ಜಾತಿ, ಪಕ್ಷ, ಸಂಘಟನೆಗೆ ಸೀಮಿತಗೊಳ್ಳಬಾರದು. ಸಮಾಜದ ಎಲ್ಲದರಲ್ಲಿಯೂ ಭಾಗಿಗಳಾಗಬೇಕು. ಈ ಮೂಲಕ ಸಮಾಜದ ಬದಲಾವಣೆಗೆ ದಾರಿ ದೀಪಗಳಾಗಬೇಕು ಎಂದು ನುಡಿದರು. ಕಲಾವಿದರಾದ ಡಾ.ಸಿ.ಚಂದ್ರಶೇಖರ್, ಶ್ರೀನಿವಾಸ ಕಪ್ಪಣ್ಣ, ಎಚ್.ಎಂ.ಕೃಷ್ಣಯ್ಯ, ಮಂಜುನಾಥ್, ಡಿ.ಮಹೇಂದ್ರ ಉಪಸ್ಥಿತರಿದ್ದರು.

‘ಚಿತ್ರಕಲಾವಿದರಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಆದರೆ, ಅವರು ತಮಗೆ ಸಿಗುವ ಸೂಕ್ತ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ತನಗೆ ಈ ಸದಸ್ಯತ್ವ ಲಭಿಸಿ ಐದಾರು ತಿಂಗಳು ಕಳೆದಿದೆ. ಆದರೆ, ಸರಕಾರ, ಸಂಬಂಧಪಟ್ಟ ಸಚಿವರು, ಅಧಿಕಾರಿಗಳಾಗಲಿ ಒಂದು ಕರೆ ಮಾಡಿ ಶುಭ ಕೋರಿಲ್ಲ. ಹಾಗೆಂದ ಮಾತ್ರಕ್ಕೆ ತನಗೆ ಯಾವುದೇ ನೋವಿಲ್ಲವಾದರೂ, ಸರಕಾರ ಕಲಾವಿದರನ್ನು ಪೋಷಿಸಬೇಕಿದೆ. ಆ ಕೆಲಸವನ್ನು ಸರಿಯಾಗಿ ಮಾಡಿದರೆ, ಅದೇ ಅವರು ಕಲಾವಿದರಿಗೆ ನೀಡುವ ಗೌರವ.

-ಚಿ.ಸು.ಕೃಷ್ಣಶೆಟ್ಟಿ ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಸಂಸ್ಥೆ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News