ಅವಿಭಜಿತ ದ.ಕ. ಜಿಲ್ಲೆಯ ಜೈಲಿನಲ್ಲಿರುವ ಶೇ.75ರಷ್ಟು ಯುವಕರು ಬಿಲ್ಲವರು: ಕವಿತಾ ಸನಿಲ್

Update: 2018-01-29 11:09 GMT

ಬೆಂಗಳೂರು, ಜ. 28: ಅವಿಭಜಿತ ದ.ಕ. ಜಿಲ್ಲೆಯ ಜೈಲಿನಲ್ಲಿರುವ ಶೇ.75ರಷ್ಟು ಯುವಕರು ಬಿಲ್ಲವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದು ಕೊಲೆ ನಡೆಯಿತು. ಆ ಪ್ರಕರಣದಲ್ಲಿ ಮೂವರು ಬಿಲ್ಲವ ಯುವಕರು ಆರೋಪಿಗಳಾಗಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿ ಬಿಲ್ಲವ ಅಸೋಸಿಯೇಷನ್ ‘ಬಿಲ್ಲವ ಭವನ’ದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಅತ್ಯಂತ ದೊಡ್ಡ ಸಮಾಜವಾಗಿರುವ ಬಿಲ್ಲವ ಸಮಾಜ ಇಂದು ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ವಂಚಿತವಾಗಿದೆ ಎಂದು ಹೇಳಿದರು.

ಬಿಲ್ಲವ ಸಮಾಜದ ಯುವಕರು ಸರಿದಾರಿಗೆ ಬಂದು ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ನ್ಯಾಯ, ಯಾವುದೇ ಅನ್ಯಾಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ಮಾಡಿದ ಅವರು, ಬಿಲ್ಲವ ಸಮಾಜ ಒಗ್ಗಟ್ಟಾದರೆ ನಮ್ಮನ್ನು ಎದುರಿಸುವ ಶಕ್ತಿ ಯಾರಿಗೂ ಇಲ್ಲ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಬಿಲ್ಲವ ಸಮಾಜ ಸಂಘಟಿತವಾಗಿರುವುದನ್ನು ನೋಡಿದರೆ ಸಂತೋಷ ಆಗುತ್ತದೆ. ಆದರೆ, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಸಮಾಜ, ವಿವಿಧ ಕ್ಷೇತ್ರಗಳಲ್ಲಿನ ಅವಕಾಶದಿಂದ ವಂಚಿತವಾಗಿದೆ ಎಂದು ಅವರು ಹೇಳಿದರು.

ಕೊಲೆಯಾಗಬೇಡಿ-ಕೊಲೆ ಮಾಡಬೇಡಿ: ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮಾಜದ ಯುವಕರು ದಾರಿ ತಪ್ಪುತ್ತಿರುವ ಬಗ್ಗೆ ಇತ್ತೀಚಿಗೆ ಸಭೆ ಸೇರಿ ಚರ್ಚಿಸಲಾಯಿತು. ಆ ಸಭೆಯಲ್ಲಿ ‘ಕೊಲೆಯಾಗಬೇಡಿ, ಕೊಲೆ ಮಾಡಬೇಡಿ’ ಎಂದು ಬಿಲ್ಲವ ಸಮಾಜದ ಯುವಕರಿಗೆ ಕರೆ ನೀಡಲಾಯಿತು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಐಟಿ-ಬಿಟಿ, ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇನ್ನಿತರರ ಕ್ಷೇತ್ರದಲ್ಲಿರುವ ಸಮುದಾಯದ ಯುವಕರು ದಕ್ಷಿಣ ಕನ್ನಡಕ್ಕೆ ತೆರಳಿದ ತೆರಳಿದ ಸಂದರ್ಭದಲ್ಲಿ, ಅಲ್ಲಿನ ಯುವಕರಿಗೆ ಬುದ್ದಿವಾದ ಹೇಳಬೇಕೆಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಬಿಲ್ಲವ ಅಸೋಸಿಯೇಶನ್‌ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ರಾಜ್ಯ ಸರಕಾರದಿಂದ 5 ಎಕರೆ ಜಾಗ ಕೊಡಿಸಲು ಸಿಎಂ ಜೊತೆಗೆ ಚರ್ಚಿಸುತ್ತೇನೆ. ಬನ್ನೇರುಘಟ್ಟ ರಸ್ತೆಯ ಜಿ.ಡಿ.ಮರ ಜಂಕ್ಷನ್‌ಗೆ ನಾರಾಯಣಗುರು ಜಂಕ್ಷನ್ ಎಂದು ಹೆಸರಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಅಧ್ಯಕ್ಷ ವೇದಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಸಿಎಂ ಮೇಲೆ ಒತ್ತಡ ತಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬಿಬಿಎಂಪಿ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ, ಆರ್ಯ ಈಡಿಗ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಅಸೋಷಿಯೇಷನ್ ಮಹಿಳಾ ವಿಭಾಗದ ಅಧ್ಯಕ್ಷೆ ರತ್ನಾ ಜಯರಾಮ್, ಸಹಾಧ್ಯಕ್ಷೆ ಜಲಜ ಶೇಖರ್ ಹಿರಿಯ ಉಪಾಧ್ಯಕ್ಷ ಎಂ. ರಮೇಶ್ ಬಂಗೇರ, ಉಪಾಧ್ಯಕ್ಷ ಕೇಶವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜಂಟಿ ಕಾರ್ಯದರ್ಶಿ ರಾಜೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಬಿ.ಎಂ. ಉದಯಕುಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News