ರೈತರ ಮುಖದಲ್ಲಿ ನಗು ಮೂಡಿದೆ: ಸಚಿವ ಎಂ.ಬಿ.ಪಾಟೀಲ್
ಬಾಗಲಕೋಟೆ, ಜ. 28: ಇಸ್ರೇಲ್ ಹಾಗೂ ಭಾರತದ ಅನೇಕ ರಾಜ್ಯಗಳು ಕರ್ನಾಟಕ ರಾಜ್ಯ ಅನುಷ್ಟಾನಗೊಳಿಸಿರುವ ಕೇಂದ್ರಿಕೃತ ಸ್ವಯಂಚಾಲಿತ ಸಮೂಹ ಹನಿ ನೀರಾವರಿ ಯೋಜನೆ ಜಾರಿಗೆ ತಂದಿರುವ ಕುರಿತು ಅಧ್ಯಯನ ನಡೆಸುತ್ತಿವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರವಿವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಹಮ್ಮಿಕೊಂಡಿದ್ದ ವಿಶ್ವದ ಅತಿ ದೊಡ್ಡ ರಾಮಥಾಳ (ಮರೋಳ) ಸಂಪೂರ್ಣ ಕೇಂದ್ರಿಕೃತ ಸ್ವಯಂಚಾಲಿತ ಸಮೂಹ ಹನಿ ನೀರಾವರಿ ಯೋಜನೆ ಲೋಕಾರ್ಪಣೆ ಪೂರ್ವ ಕಾರ್ಯಾಗಾರ ಹಾಗೂ ರೈತರೊಂದಿಗೆ ನೇರವಾಗಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ನನಗೆ ಅತ್ಯಂತ ಹೆಮ್ಮೆ ತಂದು ಕೊಟ್ಟ ಸಮಯ. ನನ್ನ ಸಮಯದಲ್ಲಿ ಟೆಂಡರ್ ಕರೆದು ಯೋಜನೆ ಉದ್ಘಾಟನೆಗೆ ಸಿದ್ದಗೊಂಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು.
ಹನಿ ನೀರಾವರಿಗೆ ಮಾರ್ಪಾಡು ಮಾಡಿದ್ದರಿಂದ 60 ಸಾವಿರ ಎಕರೆಗೆ ನೀರು ನೀಡಲು ಸಾಧ್ಯ. ಇದು ಹನಿ ನೀರಾವರಿ ಕುರಿತು ರಾಜ್ಯದಲ್ಲಿ ಹಮ್ಮಿಕೊಂಡ ಪ್ರಾಯೋಗಿಕ ಆರಂಭವಾಗಿದೆ. ಹನಿ ನೀರಾವರಿಯಿಂದ ಬೆಳೆಗಳ ಗುಣಮಟ್ಟವೂ ಹೆಚ್ಚುತ್ತದೆ. ಗೊಬ್ಬರ ಮತ್ತು ಕಾರ್ಮಿಕರ ಖರ್ಚು ಕಡಿಮೆಯಾಗುತ್ತದೆ. ಮಾರುಕಟ್ಟೆಯನ್ನು ಉತ್ತಮಗೊಳಿಸಲಾಗಿದೆ ಎಂದು ತಿಳಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ರೈತರು ಈ ಯೋಜನೆಯ ಲಾಭವನ್ನು ಹೇಗೆ ಪಡೆಯಬಹುದು ಎಂದು ತಿಳಿಸಿಕೊಡುವುದು ಮುಖ್ಯ ಉದ್ದೇಶ. 102 ಟಿಎಂಸಿ ನೀರನ್ನು ಈ ಎರಡನೇ ಹಂತದ ಯೋಜನೆ ಒಳಗೊಂಡಿದೆ, 64 ಸಾವಿರ ಎಕರೆ ನೀರಾವರಿಯಾಗುತ್ತದೆ. ನಮ್ಮದು ಬರಗಾಲದ ಪ್ರದೇಶ ಇಂತಹ ನಾಡಿನಲ್ಲಿ ಹನಿ ನೀರಾವರಿ ಯೋಜನೆ ರೈತರ ಬಾಳಲ್ಲಿ ಬೆಳಕು ತಂದಿದೆ. ಮೊದಲ 5 ವರ್ಷಗಳ ಕಾಲ ರೈತರಿಗೆ ಉಂಟಾಗುವ ತೊಂದರೆಗಳನ್ನು ಸರಕಾರವೆ ಪರಿಹರಿಸಲಿದೆ. ಹೀಗಾಗಿ, ರೈತರು ಆರ್ಥಿಕವಾಗಿ ಭಯಪಡುವ ಅವಶ್ಯಕತೆ ಇಲ್ಲ. ಮೊದಲ ಮತ್ತು ಎರಡನೆ ಹಂತದ ಈ ಯೋಜನೆಗೆ 1,400 ಕೋಟಿ ರೂ. ಸರಕಾರ ವೆಚ್ಚ ಮಾಡಲಿದೆ ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಸವಣ್ಣನ ಕಾಲದಲ್ಲಿ ಸಾಮಾಜಿಕ ಕ್ರಾಂತಿ ನೆಡೆಯಿತು ಇಂದು ಈ ಪ್ರದೇಶದಲ್ಲಿ ನೀರಾವರಿ ಕ್ರಾಂತಿಯಾಗಿದೆ. ಇದು ವಿಶ್ವದ ದೊಡ್ಡ ದಾಖಲೆಯಾಗಿದೆ. ಬದುಕನ್ನು ಬದಲಾಯಿಸುವುದು, ಪ್ರತಿಯೊಬ್ಬರಿಗೂ ಸಬಲತೆಯನ್ನು ತುಂಬುವುದು ನಮ್ಮ ಸರಕಾರದ ಮುಖ್ಯ ಉದ್ದೇಶ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಇಡೀ ದೇಶದಲ್ಲಿ ಕಳೆದ 5 ವರ್ಷಗಳಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಜ್ಯ ನಮ್ಮದಾಗಿದೆ. ದೇಶಕ್ಕೆ ಹರಿದು ಬರುತ್ತಿರುವ ಒಟ್ಟು ಬಂಡವಾಳದಲ್ಲಿ ಶೇ.44ರಷ್ಟು ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿದೆ ಎಂದು ಹೇಳಿದರು.
ವಾಟರ್ ಮ್ಯಾನ್ ಆಫ್ ಇಂಡಿಯಾ ಎಂದೇ ಖ್ಯಾತಿ ಪಡೆದಿರುವ ರಾಜೇಂದ್ರ ಸಿಂಗ್ ಮಾತನಾಡಿ, ರಾಜ್ಯ ಸರಕಾರ ಆಶ್ವಾಸನೆ ನೀಡಿದಂತೆ ಕೆಲಸ ಮಾಡಿ ತೋರಿಸಿದೆ. ಈ ಯೋಜನೆಯ ಪ್ರಾರಂಭದ ದಿನಗಳಿಂದಲೂ ನಾನು ಗಮನಿಸುತ್ತಿದ್ದು, ಅತ್ಯುತ್ತಮವಾಗಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹನಿ ನೀರಾವರಿ ಯೋಜನೆ ಜೊತೆ ಹಳೆಯ ಕಾಲದಲ್ಲಿ ನೀರಿನ ಮೂಲಗಳಾಗಿದ್ದ ಹಲವು ರೀತಿಯ ಯೋಜನೆಗಳಿಗೆ ಮರುಜೀವ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಕೃಷ್ಣಾ ಭಾಗ್ಯಜಲನಿಗಮ ಮಂಡಳಿ ನಿರ್ದೇಶಕ ಪ್ರೊ.ಅರವಿಂದ ಗಲಗಲಿ, ಜಿ.ಪಂ.ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಮಖಂಡಿ ಶಾಸಕ ಸಿದ್ದು.ಬಿ.ನ್ಯಾಮಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್, ಆಲಮಟ್ಟಿ ಆಣೆಕಟ್ಟು ವಲಯ ಮುಖ್ಯ ಎಂಜಿನಿಯರ್ ಮಂಜಪ್ಪ ಉಪಸ್ಥಿತರಿದ್ದರು.