ರಾಜಕಾರಣಿಗಳ ಸ್ವಾರ್ಥಕ್ಕಾಗಿ ಜನತೆಯ ನಡುವೆ ದ್ವೇಷ: ಎಂ.ವಿ.ರಾಜಶೇಖರನ್
ಬೆಂಗಳೂರು, ಜ. 28: ಜನಪ್ರತಿನಿಧಿಗಳ ಸ್ವಾರ್ಥಹಿತಾಸಕ್ತಿಗಾಗಿ ಜಾತಿ, ಧರ್ಮಗಳ ಮಧ್ಯೆ ದ್ವೇಷ ಹರಡಲಾಗುತ್ತಿದೆ. ಈ ಬಗ್ಗೆ ಜನತೆ ಸದಾ ಎಚ್ಚರಿಕೆಯಿಂದಿರಬೇಕು ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಸಲಹೆ ನೀಡಿದ್ದಾರೆ.
ರವಿವಾರ ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ, ಭಾರತೀಯ ಸಾಂಸ್ಕೃತಿಕ ವೇದಿಕೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಯಕ ಯೋಗಿ ಬಸವಣ್ಣ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಹಿರಿಯರಿಗೆ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿನ ವ್ಯಾಪಾರಿ ಸಂಸ್ಕೃತಿಯಲ್ಲಿ ಯುವಜನತೆ ಮೌಲ್ಯಾಧಾರಿತ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ನೈತಿಕತೆಯನ್ನು ಮಾರಿಕೊಂಡು ಕೇವಲ ಹಣಕ್ಕಾಗಿ ಯಾವುದೇ ಕೃತ್ಯವನ್ನು ಎಸಗುವ ಹಂತಕ್ಕೆ ಮುಟ್ಟಿದ್ದಾರೆ. ಇಂತಹ ಯುವಜನತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕಾಗಿ ಜನತೆಯ ನಡುವೆ ಧ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತ ಶೇ.80ರಷ್ಟು ಯುವ ಜನತೆಯನ್ನು ಹೊಂದಿದ್ದು, ಇಂತಹ ಯುವ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಕಾರ್ಯಕ್ರಮಗಳು ಸರಕಾರದ ಮುಂದಿಲ್ಲ. ಹೀಗಾಗಿ ಸಂಘ, ಸಂಸ್ಥೆಗಳು ಯುವ ಜನತೆಗೆ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಲು ಅಗತ್ಯವಾದ ಕೌಶಲ್ಯಾಭಿವೃದ್ಧಿ ತರಬೇತಿ, ವೌಲ್ಯಾಧಾರಿತ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಅವರು ಆಶಿಸಿದರು.
ಜೆಡಿಯು ಅಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ, ದೇಶದಲ್ಲಿ ಏನಾದರು ಬದಲಾವಣೆ ಆಗಬೇಕಾದರೆ ಅದು ರಾಜಕಾರಣದಿಂದ ಮಾತ್ರ ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ರಾಜಕೀಯವಾಗಿ ಚಿಂತಿಸಬೇಕು. ದೇಶದಲ್ಲಾಗುವ ಪ್ರತಿಯೊಂದು ಬೆಳವಣಿಗೆಯನ್ನು ಕೂಲಂಕುಶವಾಗಿ ವಿಶ್ಲೇಷಿಸುವುದು, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹೀಗೆ ಪ್ರತಿಯೊಬ್ಬರು ಮಾಡಿದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಗೃತಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿನಿಮಾ ನಟಿ ಸಂಗೀತಾಗೆ ಕಾಯಕ ಯೋಗಿ ಬಸವಶ್ರೀ, ಟಿವಿ ನಿರೂಪಕಿ ಪ್ರತಿಮಾಗೆ ಉತ್ತಮ ನಿರೂಪಣಾ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ, ಭಾರತೀಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರಾಜು ಸೇರಿ ಹಲವರು ಉಪಸ್ಥಿತರಿದ್ದರು.