ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಕರಣಗಳ ಹಿಂತೆಗೆತ: ಶೋಭಾ ಕರಂದ್ಲಾಜೆ ಆರೋಪ
ಬೆಂಗಳೂರು, ಜ.28: ಮುಂದಿನ ಚುನಾವಣೆಯಲ್ಲಿ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದ್ದು, ಹೀಗಾಗಿ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಆದೇಶಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರ ಶನಿವಾರ ಹೊರಡಿಸಿರುವ ಆದೇಶದಲ್ಲಿ ‘ಎಲ್ಲ ಅಮಾಯಕರ ಮೇಲಿನ ಪ್ರಕರಣಗಳನ್ನು ಕೈಬಿಡಲಾಗುವುದು’ ಎಂದು ತಿಳಿಸಲಾಗಿದೆ. ಹಿಂದಿನ ಆದೇಶದಲ್ಲಿ ‘ಅಮಾಯಕ ಮುಸ್ಲಿಮರ ವಿರುದ್ಧದ ಪ್ರಕರಣಗಳನ್ನು’ ಎಂದು ನಮೂದಿಸಲಾಗಿತ್ತು. ರಾಜ್ಯ ಸರಕಾರದ ಈ ನಡೆಯ ಬಗ್ಗೆ ಹಲವಾರು ಸಂದೇಹ ಮೂಡುತ್ತದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ಅಪರಾಧಿ, ನಿರಪರಾಧಿಗಳನ್ನು ತೀರ್ಮಾನಿಸಬೇಕಿರುವುದು ನ್ಯಾಯಾಲಯ. ಆದರೆ, ರಾಜ್ಯ ಸರಕಾರ ನ್ಯಾಯಾಲಯದ ಕೆಲಸ ಮಾಡ ಹೊರಟಿರುವುದು ಖಂಡನೀಯ ಎಂದು ಶೋಭ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅಲ್ಪಸಂಖ್ಯಾತರ ಮತಗಳ ವಿಭಜನೆ ತಪ್ಪಿಸಲು ಎಸ್‌ಡಿಪಿಐ, ಕಾಂಗ್ರೆಸ್ ಹೊಂದಾಣಿಕೆ ಆಗಬೇಕೆಂದು ಹೇಳಿಕೆ ನೀಡಿದ್ದರು ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.