ಯುವಕರಿಗೆ ಕೌಶಲ್ಯಕ್ಕೆ ಅವಕಾಶ ದೊರೆಯುತ್ತಿಲ್ಲ: ಪ್ರೊ.ಎಂ.ವಿ.ರಾಜೀವ್ ಗೌಡ
ಬೆಂಗಳೂರು, ಜ.28: ದೇಶದ ಯುವಕರಿಗೆ ಸೂಕ್ತ ರೀತಿಯಲ್ಲಿ ಕೌಶಲ್ಯ ಚಟುವಟಿಕೆಗಳಿಗೆ ಅವಕಾಶ ದೊರೆಯುತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವ್ ಗೌಡ ಬೇಸರ ವ್ಯಕ್ತಪಡಿಸಿದರು.
ರವಿವಾರ ನಗರದ ಪುರಭವನದಲ್ಲಿ ಭಾರತೀಯ ಅಕಾಡೆಮಿ ಆಫ್ ಲಿಂಗ್ವೆಸ್ಟಿಕ್ ಆ್ಯಂಡ್ ಕಮ್ಯುನಿಕೇಷನ್ ಹಮ್ಮಿಕೊಂಡಿದ್ದ, ಕುವೆಂಪು, ಸ್ವಾಮಿ ವಿವೇಕಾನಂದ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.
ಯುವ ಪಿಳಿಗೆ ಕಾಲೇಜು ಮಾತ್ರವಲ್ಲದೆ, ಹೊರಗಡೆ ಕಲಿಯುವುದೂ ಬೇಕಾದಷ್ಟಿದೆ. ಜೊತೆಗೆ, ಕಾರ್ಯಾಗಾರಗಳು, ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳು ಅಧಿಕಗೊಳ್ಳಬೇಕು ಹಾಗೂ ತಂತ್ರಜ್ಞಾನ ಉಪಯೋಗಿಸುವುದರಲ್ಲಿ ನಾವು ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ ಮಾತನಾಡಿ, ಯುವಕರಿಗೆ ಮತ್ತು ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿಗಾಗಿ ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ, ಪ್ರತಿ ಜಿಲ್ಲೆಯಲ್ಲಿ ಆರಂಭವಾಗುವ ಕೌಶಲ್ಯಾಭಿವೃದ್ಧಿ ಕೇಂದ್ರಗಳಲ್ಲಿ ಇಂಗ್ಲಿಷ್ ಸಂವಹನ, ಕಂಪ್ಯೂಟರ್ ಬಗ್ಗೆ ಮಾಹಿತಿ, ಪಾಸ್‌ಪೋರ್ಟ್ ಸೇರಿ ಇನ್ನಿತರೆ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಲಾಗುವುದು ಹೇಳಿದರು.
ವಿದೇಶಕ್ಕೆ ಹೋಗುವ ಯುವಕರಿಗೆ ಮಾಹಿತಿ ನೀಡುವ ಅಭಿಯಾನವೊಂದನ್ನು ಆಯೋಜಿಸಲಾಗಿದೆ. ಇದರ ಉಪಯೋಗವನ್ನು ಗ್ರಾಮೀಣ ಮತ್ತು ಕೆಳವರ್ಗದ ಜನರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೌಶಲ್ಯಾಭಿವೃದ್ಧಿ ಅಭಿಯಾನದಲ್ಲಿ ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಯುವಕರು ನೋಂದಣಿ ಮಾಡಿಕೊಂಡಿದ್ದು, ಉದ್ಯಮಶೀಲತೆಗೆ ಹೆಚ್ಚು ಆಸಕ್ತಿ ಹೊಂದಿರುವುದು ತಿಳಿದುಬಂದಿದೆ. 25 ಲಕ್ಷಕ್ಕೂ ಹೆಚ್ಚು ಯುವಕರಿಗೆ ಮಾಹಿತಿ ನೀಡಲು ನಿಗಮ ಗುರಿ ಇಟ್ಟುಕೊಂಡಿದೆ ಎಂದು ಮುರಳೀಧರ್ ಹಾಲಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಚಲನಚಿತ್ರ ನಿರ್ದೇಶಕ ಮದನ್‌ಪಟೇಲ್, ಬಿಎಂಎಲ್ಸಿ ನಿರ್ದೇಶಕ ಎ.ಎಸ್.ನಟರಾಜ್ ಗೌಡ ಸೇರಿ ಪ್ರಮುಖರಿದ್ದರು.