ಹೊಸ ತಲೆಮಾರಿನ ಕೃತಿಗಳು ವಿಮರ್ಶೆಗೆ ಒಳಪಡುತ್ತಿಲ್ಲ: ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು, ಜ. 28: ಕನ್ನಡದ ಬಹಳಷ್ಟು ಕೃತಿಗಳು ವಿಮರ್ಶೆಗೆ ಒಳಪಡದೇ ಹೊಸ ತಲೆಮಾರಿನ ಲೇಖಕರು ಹಾಗೂ ಅವರ ಕೃತಿಗಳು ಕಾಲಗರ್ಭದಲ್ಲಿ ಮಸುಕಾಗುತ್ತಿವೆ ಎಂದು ಹಿರಿಯ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.
ರವಿವಾರ ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ಆಯೋಜಿಸಿದ್ದ ಗಾಬ್ರಿಯೇಲ್ ಗಾರ್ಸಿಯ ಮಾರ್ಕ್ವೇಜ್ ಇಂಗ್ಲಿಷ್ ಕೃತಿಯನ್ನು ಎಂ.ಎಸ್. ರಘುನಾಥ್ ಅನುವಾದಿಸಿರುವ ಕರ್ನಲ್‌ಗೆ ಯಾರೂ ಬರೆಯುವುದಿಲ್ಲ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕುವೆಂಪು, ಪುತಿನ, ಬೇಂದ್ರೆ, ಕಾರಂತರು ಸೇರಿ ಮತ್ತೊಂದಿಷ್ಟು ಲೇಖಕರು ರಚಿಸಿದ ಕೃತಿಗಳಿಗೆ ವಿಮರ್ಶೆ ಹಾಗೂ ಪ್ರಚಾರಗಳು ಸಿಕ್ಕವು. ಆದರೆ, ಉಳಿದ ಲೇಖಕರು ಉತ್ತಮ ಕೃತಿಗಳನ್ನು ರಚಿಸಿದರೂ ಯಾವುದೆ ವಿಮರ್ಶೆಗೆ ಒಳಪಡಲಿಲ್ಲ. ಹೀಗಾಗಿಯೇ ಅಂತಹ ಲೇಖಕರು ಹಾಗೂ ಕೃತಿಗಳು ಕಾಲಗರ್ಭದಲ್ಲಿ ಮಸುಕಾದವು ಎಂದು ಹೇಳಿದರು.
ಕನ್ನಡದಲ್ಲಿ ಯಥೇಚ್ಛ ಕೃತಿಗಳು ಬರಲು, ಕನ್ನಡ ಭಾಷೆ ಸಮೃದ್ಧವಾಗಬೇಕಾದರೆ, ಸಾಹಿತ್ಯ ಕ್ಷೇತ್ರದ ಜನರು ಅಷ್ಟೇ ಅಲ್ಲದೆ ಇತರೆ ಕ್ಷೇತ್ರದ ಜನರೂ ಸಾಹಿತ್ಯ ಕ್ಷೇತ್ರದ ಕಡೆಗೆ ಒಲವು ತೋರಿಸಬೇಕು. ಆಗ ಮಾತ್ರ ಕನ್ನಡ ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಹೇಳಿದರು.
ಕನ್ನಡದ ಲೇಖಕರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದೇ ಅಪಾಯಕಾರಿಯಾಗಿದೆ. ಅಂತಹ ಲೇಖಕರು ಸ್ಥಳೀಯ ಜನರಿಗೆ ಹಾಗೂ ಓದುಗ ವರ್ಗಕ್ಕೆ ಗೊತ್ತಿಲ್ಲ ಎಂದರೆ ಕನ್ನಡದ ಬೇರುಗಳಿಗೆ ಪೆಟ್ಟು ಬೀಳುತ್ತವೆ. ಹೀಗಾಗಿ, ಅಂತಹ ಲೇಖಕರ ಕೃತಿಗಳು ಸ್ಥಳೀಯ ಓದುಗರಿಗೂ ಗೊತ್ತಾಗಲು ಹೆಚ್ಚಿನ ಪ್ರಚಾರ ನೀಡಬೇಕೆಂದು ಸಲಹೆ ನೀಡಿದರು.
ಇಂಗ್ಲೀಷ್ ಭಾಷೆಯಿಂದ ಕನ್ನಡಕ್ಕೆ ಸಾಕಷ್ಟು ಕೃತಿಗಳು ಅನುವಾದವಾಗಿವೆ. ಆದರೆ, ಕನ್ನಡದಿಂದ ಇಂಗ್ಲೀಷ್‌ಗೆ ಕೃತಿಗಳು ಅನುವಾದವಾಗಿಲ್ಲ. ಹೀಗಾಗಿ, ನಾವೆಲ್ಲರೂ ಒಗ್ಗಟ್ಟಿನಿಂದ ಕನ್ನಡದ ಕೃತಿಗಳನ್ನು ಇಂಗ್ಲೀಷ್‌ಗೆ ಅನುವಾದಿಸುವ ಕೆಲಸ ಮಾಡಬೇಕು. ಅಲ್ಲದೆ, ಈಗಾಗಲೇ ಕುವೆಂಪು ಭಾಷಾ ಭಾರತಿ ಸೇರಿ ಇನ್ನಿತರ ಸಂಘ, ಸಂಸ್ಥೆಗಳು ಕನ್ನಡದ ಸಾಕಷ್ಟು ಕೃತಿಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡುತ್ತಿವೆ ಎಂದು ಹೇಳಿದರು.
ಈ ಮೊದಲು ಕನ್ನಡದ ಪತ್ರಿಕೆಗಳಲ್ಲಿ ಕನ್ನಡದ ಕೃತಿಗಳ ಬಗ್ಗೆ ವಿಮರ್ಶೆಗಳು ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡದ ಪತ್ರಿಕೆಗಳಲ್ಲಿ ಕನ್ನಡದ ಕೃತಿಗಳ ಬಗ್ಗೆ ವಿಮರ್ಶೆಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಎಂ.ಎಸ್.ರಘುನಾಥ್ ಮಾತನಾಡಿ, ಆಕೃತಿ ಪುಸ್ತಕ ಮಳಿಗೆಯವರು ಉತ್ತಮ ಕೃತಿಗಳು ಇದ್ದರೆ ಅಂತಹ ಕೃತಿಗಳ ಪ್ರಕಾಶಕರಾಗಲು ಇಷ್ಟ ಪಡುತ್ತಾರೆ. ತಮ್ಮ ಕೃತಿಗೂ ಪ್ರಕಾಶಕರಾಗಿರುವುು ಖುಷಿ ತಂದಿದೆ ಎಂದು ಹೇಳಿದರು.