ಮಾಧ್ಯಮಗಳು ವಸ್ತುಸ್ಥಿತಿ ಅರಿತು ಬರೆಯಬೇಕು: ಹೆಚ್.ಡಿ.ದೇವೇಗೌಡ

Update: 2018-01-28 15:35 GMT

ಮೈಸೂರು, ಜ.28: ಮಾಧ್ಯಮಗಳಿಗೆ ತಾಳ್ಮೆ ಇರಲಿ. ಅನಾವಶ್ಯಕ ಪ್ರಶ್ನೆ ಕೇಳುವುದರಿಂದ ಪ್ರಯೋಜನವಿಲ್ಲ. ಚುನಾವಣೆಯ ಸಂದರ್ಭದಲ್ಲಿ ಸಮೀಕ್ಷೆಗಳು ಬರುವುದು ಸಹಜ. ಇದರ ಬಗ್ಗೆ ವಸ್ತುಸ್ಥಿತಿ ಅರಿತು ಬರೆದರೆ ಅದಕ್ಕೆ ಒಂದು ಅರ್ಥ ಬರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ. 2018ನೇ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಗೆ ಮೂರನೇ ಸ್ಥಾನ ದೊರೆಯಲಿದೆ ಎಂಬ ಮಾಧ್ಯಮಗಳ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಸಚಿವ ಎ. ಮಂಜು ಹೇಳಿಕೆಗೆ ಗರಂ ಆದ ದೇವೇಗೌಡರು, ಒಂದೇ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುವುದು ಸರಿಯಲ್ಲ. ನಿಷ್ಟಾವಂತ ಅಧಿಕಾರಿಗಳಿಗೆ ಒಳ್ಳೆಯ ಕಾಲವಿಲ್ಲ ಎಂದು ಕಿಡಿಕಾರಿದರು.

ಎನ್.ಜಯರಾಂ ಕೀಲಾರ 60 ಅಭಿನಂದನಾ ಸಮಾರಂಭವನ್ನು ಜಯರಾಂ ಕೀಲಾರ ಬಳಗದ ವತಿಯಿಂದ ರವಿವಾರ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ದೇವೇಗೌಡ, ಅಧಿಕಾರಕ್ಕೋಸ್ಕರ ಎಲ್ಲಾ ರೀತಿಯಲ್ಲಿ ದಾರಿ ತಪ್ಪಿ ಹೋಗುವವರಿದ್ದಾರೆ. 23 ಮಂದಿ ನನ್ನೊಂದಿಗೆ ಬಂದವರು ಹಲವು ಹುದ್ದೆಯಲ್ಲಿದ್ದಾರೆ. ಕೀಲಾರದಂತಹ ವ್ಯಕ್ತಿತ್ವವುಳ್ಳ ಸ್ನೇಹಿತರನ್ನು ನೋಡಿಲ್ಲ. ಭೀಷ್ಮ ಪ್ರತಿಜ್ಞೆಯನ್ನು ಸಡಿಲ ಮಾಡಬೇಕು. ಒಂದು ಘಟನೆ ಮನುಷ್ಯ ಜೀವನದಲ್ಲಿ ಎಷ್ಟು ಕಠಿಣ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದಕ್ಕೆ ಜಯರಾಮ್ ಅವರೇ ಉದಾಹರಣೆಯಾಗಿದ್ದಾರೆ. ಅಧಿಕಾರ ಇಲ್ಲದಿದ್ದರೂ ಹಲವು ಮಕ್ಕಳಿಗೆ ಶೈಕ್ಷಣಿಕ ನೆರವು ನೀಡಿದ್ದಾರೆ. ವ್ಯಕ್ತಿಗತವಾಗಿ ಯಾವ ನಿಲುವಿಗೂ ನಿಲ್ಲದೆ, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಹಲವು ಮಕ್ಕಳಿಗೆ ಬೆಳಕು ನೀಡಿದ್ದೀರಿ ಎಂದರು.

ಮಹರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಎನ್.ಜಯರಾಮ್ ಕೀಲಾರ ಮೂಲತಃ ಮಂಡ್ಯ ಜಿಲ್ಲೆಯ ಕಿಲಾರ ಗ್ರಾಮದವರು. ಸಾಕಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಯರಾಮ್ ಅವರಿಗೆ ಸನ್ಮಾನಿಸಿ ಅಭಿನಂಧಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಎನ್. ಜಯರಾಂ ಕೀಲಾರ, ಪ್ರೊ.ಮಲೆಯೂರು ಗುರುಸ್ವಾಮಿ, ಪ್ರೊ.ಎಂ.ಕೃಷ್ಣೇಗೌಡ, ಪ್ರೊ.ಬಿ.ಕೆ ಚಂದ್ರಶೇಖರೇಗೌಡ, ಕೆ.ವಿ ಮಲ್ಲೇಶ್, ಪ್ರಸನ್ನ ಎನ್.ಗೌಡ, ಡಾ.ಎನ್.ತುಕಾರಾಂ ಸೇರಿದಂತೆ ಮೈಸೂರು ವಿವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News