ಕೊಲೆ ಪ್ರಕರಣ: ಇಬ್ಬರ ಬಂಧನ
ಬೆಂಗಳೂರು, ಜ.28: ವ್ಯಕ್ತಿಯೊಬ್ಬನನ್ನು ಮಹಡಿ ಮೇಲಿನಿಂದ ತಳ್ಳಿ ಕೊಲೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಇಲ್ಲಿನ ಗಿರಿನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್‌ಆರ್ ನಗರ ನಿವಾಸಿ ಸುರೇಶ್ ಜಿ.(44) ಹಾಗೂ ಟಿಂಬರ್ ಯಾರ್ಡ್ ಲೇಔಟ್ ನಿವಾಸಿ ಎಂ.ಬಿ.ಗೋಪಾಲ್ (48) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ನಗರದ ನಾಗೇಂದ್ರ ಬ್ಲಾಕ್‌ನಲ್ಲಿರುವ ಮಧು ಕಾಂಪ್ಲೆಕ್ಸ್ ಬಿಲ್ಡಿಂಗ್‌ನ 1ನೆ ಮಹಡಿಯಿಂದ ಕಸ ಬಿಸಾಡಿದ ವಿಚಾರದಲ್ಲಿ ಸಂತೋಷ್, ದೇವರಾಜ್ ಹಾಗೂ ಬಂಧಿತರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿ ಆರೋಪಿಗಳು ದೇವರಾಜ್ ಎಂಬುವರನ್ನು ಮೊದಲನೆ ಮಹಡಿಯಿಂದ ಕೆಳಗೆ ತಳ್ಳಿದ್ದರು. ಪಾದಚಾರಿ ರಸ್ತೆಯಲ್ಲಿ ಬಿದ್ದ ದೇವರಾಜ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು.ಈ ಸಂಬಂಧ ಸಂತೋಷ್ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಗಿರಿನಗರ ಪೊಲೀಸರು ಕೃತ್ಯ ಸಂಭವಿಸಿದ ಸ್ಥಳದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಸಕಾರಿಯೊಬ್ಬರು ತಿಳಿಸಿದ್ದಾರೆ.