ಗೌರಿ ನೆನಪಿನ ಕಾರ್ಯಕ್ರಮ ಸರಕಾರಿ ಪ್ರಾಯೋಜಿತ: ಇಂದ್ರಜಿತ್ ಲಂಕೇಶ್ ಆರೋಪ

Update: 2018-01-29 14:01 GMT

ಬೆಂಗಳೂರು, ಜ.29: "ಗೌರಿ ಲಂಕೇಶ್ ನೆನಪಿನಲ್ಲಿ ಸೋಮವಾರ ನಗರದ ಪುರಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಆಹ್ವಾನ ಇದ್ದಿದ್ದರೂ ನಾನು ಹೋಗುತ್ತಿರಲಿಲ್ಲ. ಇದೊಂದು ರಾಜ್ಯ ಸರಕಾರದ ಪ್ರಾಯೋಜಿತ ಕಾರ್ಯಕ್ರಮವಾಗಿದೆ" ಎಂದು ಗೌರಿ ಲಂಕೇಶ್ ಸಹೋದರ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ನಗರದ ಚಾಮರಾಜಪೇಟೆಯ ವೀರಶೈವ-ಲಿಂಗಾಯತ ರುದ್ರಭೂಮಿಯಲ್ಲಿ ‘ಗೌರಿ ನೆನಪಿನ ಕಾರ್ಯಕ್ರಮ’ದಲ್ಲಿ ಅವರ ಸಮಾಧಿ ಸ್ಥಳದಲ್ಲಿ ದೀಪ ಬೆಳಗಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆಯಾಗಿ ಐದು ತಿಂಗಳು ಕಳೆಯಿತು. ಆದರೆ ಈವರೆಗೆ ಕೊಲೆಗಾರರನ್ನು ಪತ್ತೆ ಹಚ್ಚದಿರುವುದು ನೋವಿನ ಸಂಗತಿಯಾಗಿದೆ ಎಂದು ನುಡಿದರು.

"ಈ ಹಿಂದೆ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ‘ನಾನು ಗೌರಿ ನಾವೆಲ್ಲ ಗೌರಿ’ ಸೇರಿದಂತೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆದರೆ, ಇಲ್ಲಿ ಭಾಗವಹಿಸಿದ ನಾಯಕರೆಲ್ಲಾ ಕೇಂದ್ರ ಸರಕಾರವನ್ನು ಪ್ರಶ್ನಿಸಿದರೇ ಹೊರತು, ರಾಜ್ಯ ಸರಕಾರವನ್ನು ಯಾರೂ ಪ್ರಶ್ನಿಸಲಿಲ್ಲ. ಇದರಿಂದಾಗಿ ನಾನು ಸಾಕಷ್ಟು ನೋವುಂಡಿದ್ದೇನೆ. ಮತ್ತೆ ಅಂತಹ ತಪ್ಪು ಮಾಡುವುದಿಲ್ಲ" ಎಂದು ಪತ್ರಕರ್ತರ ಪ್ರಶ್ನೆಗೆ ಇಂದ್ರಜಿತ್ ಉತ್ತರಿಸಿದರು.

"ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಸರಕಾರದ ಏಳಿಗೆಗಾಗಿ ನನ್ನ ಅಕ್ಕ ಏನನ್ನೂ ಆಸೆ ಪಡದೆ ಒಬ್ಬ ಕೂಲಿಯವಳಂತೆ ದುಡಿದಳು. ಆದರೆ ಆ ಸರಕಾರ ಮಾಡಿದ್ದೇನು?, ಆಕೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ, ವೇದಿಕೆ ಹಂಚಿಕೊಳ್ಳುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ" ಎಂದರು.

"ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ ಮಟ್ಟು ನೇತೃತ್ವದಲ್ಲಿ ಸರಕಾರ ಕಾರ್ಯಕ್ರಮಗಳನ್ನು ಮಾಡುತ್ತಾ, ಆ ಮೂಲಕ ಕೇಂದ್ರ ಸರಕಾರವನ್ನು ಟೀಕಿಸುತ್ತಿದೆ. ದಿನೇಶ್ ಅಮೀನ್ ಮಟ್ಟು ಅವರ ನೇತೃತ್ವದ ಈ ಕಾರ್ಯಕ್ರಮಗಳು ಯಾಕೆ ಬೇಕು?, ಇದು ಕೂಡ ನನಗೆ ಅತ್ಯಂತ ನೋವಿನ ಸಂಗತಿಯಾಗಿದೆ. ಗೌರಿ ಹತ್ಯೆಯಾಗಿರುವುದು ಬೆಂಗಳೂರಿನಲ್ಲಿ. ಅಲ್ಲದೆ ತನಿಖೆಗಾಗಿ ಎಸ್‌ಐಟಿ ತಂಡವನ್ನು ನೇಮಿಸಿರುವುದು ರಾಜ್ಯ ಸರಕಾರ. ಹೀಗಿರುವಾಗ ಕೊಲೆಗಡುಕರನ್ನು ಹುಡುಕುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರಕಾರ ಇದರ ಜವಾಬ್ದಾರಿಯನ್ನು ಹೊರುವುದು ಬಿಟ್ಟು, ಕೇಂದ್ರ ಸರಕಾರವನ್ನು ನಿಂದಿಸುತ್ತಾ ಕೂತರೆ ನಮಗೆ ನ್ಯಾಯ ಸಿಗುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರ ನೇಮಿಸಿರುವ ಎಸ್‌ಐಟಿ ತನಿಖೆ ಏಕದೃಷ್ಟಿಕೋನದಿಂದ ಕೂಡಿದೆ. ಅಲ್ಲದೆ ಗೌರಿ ಹತ್ಯೆಯಾದ ಕೆಲ ದಿನಗಳ ಬಳಿಕ ಹಂತಕರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ ಎಂದು ಹೆಲ್ಮೆಟ್ ಧರಿಸಿದ ವ್ಯಕ್ತಿಗೆ ಕುಂಕುಮ ಹಚ್ಚಿದ ರೇಖಾಚಿತ್ರ ಬಿಡುಗಡೆ ಮಾಡಿ  ತನಿಖೆಯ ದಿಕ್ಕನ್ನೂ ತಪ್ಪಿಸಿ, ನಮ್ಮ ಕುಟುಂಬಕ್ಕೆ ವಂಚಿಸಲಾಗಿದೆ ಎಂದು ಇಂದ್ರಜಿತ್ ಲಂಕೇಶ್ ಕಿಡಿಕಾರಿದರು.

ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಗೌರಿ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ನನ್ನ ತಾಯಿ ಮಾತಿಗೆ ಬೆಲೆ ಕೊಟ್ಟು ಐದು ತಿಂಗಳಿಂದ ಸುಮ್ಮನಿದ್ದೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ನಾನು ವೈಯಕ್ತಿಕವಾಗಿ ನನ್ನ ಅಕ್ಕ ಗೌರಿ ಹತ್ಯೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

-ಇಂದ್ರಜಿತ್ ಲಂಕೇಶ್, ಗೌರಿ ಲಂಕೇಶ್ ಸಹೋದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News