ಗೋವಾ ತಂಡದ ಭೇಟಿಗೆ ರಾಜ್ಯ ಬಿಜೆಪಿ ಕುಮ್ಮಕ್ಕು: ಎನ್.ಎಚ್.ಕೋನರೆಡ್ಡಿ

Update: 2018-01-29 14:27 GMT

ಧಾರವಾಡ, ಜ.29: ಮಹಾದಾಯಿ, ಕಳಸಾ-ಬಂಡೂರಿ ಉಗಮ ಸ್ಥಾನಕ್ಕೆ ಗೋವಾ ತಂಡ ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ಭೇಟಿ ನೀಡಲು ರಾಜ್ಯ ಬಿಜೆಪಿಯ ಕುಮ್ಮಕ್ಕು ಕಾರಣವಾಗಿದೆ. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯ ವೇಳೆ ಬರೆದ ಪತ್ರ ನಮಗೆ ಇಂದು ಮಾರಕವಾಗಿ ಪರಿಣಮಿಸಿದೆ ಎಂದು ನವಲಗುಂದ ಶಾಸಕ ಎನ್.ಹೆಚ್.ಕೋನರಡ್ಡಿ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾನತಾಡಿದ ಅವರು, ಮೊದಲು ಗೋವಾ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಅವರ ನಂತರ ಅಲ್ಲಿಯ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್ ಕದ್ದು ಮುಚ್ಚಿ ಭೇಟಿ ನೀಡಿದ್ದರು. ಅದಾದ ನಂತರ ಇದೀಗ ಗೋವಾ ಸ್ಪೀಕರ್ ಪ್ರಮೋದ್ ಸಾವಂತ್ ತಂಡ ಭೇಟಿ ನೀಡಿದೆ ಎಂದರು.

ಹೀಗೆ ಸಾಲು ಸಾಲು ಭೇಟಿ ನೀಡಿ ರಾಜ್ಯದ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದರೂ ರಾಜ್ಯ ಬಿಜೆಪಿ ಮುಖಂಡರು ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ನೋಡಿದರೆ ಅವರಿಗೆ ನಮ್ಮ ರಾಜ್ಯದ ಜನರ ಹಿತಕ್ಕಿಂತ ಗೋವಾ ಬಿಜೆಪಿಯ ಹಿತವೇ ಮುಖ್ಯವಂತಾಗಿದೆ ಎಂದು ಕೋನರೆಡ್ಡಿ ಟೀಕಿಸಿದರು.

ಜ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿದ ರಾಜ್ಯ ಬಿಜೆಪಿ ನಾಯಕರು, ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ನಮಗೆ ಗೋವಾ ಹಿತವೇ ಮುಖ್ಯ ಎಂಬಂತೆ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ, ಫೆ. 4ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮನವೊಲಿಸುವ ಬದಲಿಗೆ ಅಡ್ಡಗಾಲು ಹಾಕಿದ್ದಾರೆ. ಇವರಿಗೆ ರಾಜ್ಯದ ನೆಲ, ಜಲದ ಬಗ್ಗೆ ಇಚ್ಛಾಶಕ್ತಿಯಿದ್ದರೆ ಅವರಿಗೆ ಒತ್ತಡ ಹೇರಿ ನ್ಯಾಯಾಧೀಕರಣದ ಹೊರಗಡೆಯೇ ರಾಜಿಸಂಧಾನಕ್ಕೆ ಒಪ್ಪಿಸಬೇಕಿತ್ತು. ಆದರೆ ರಾಜ್ಯ ಬಿಜೆಪಿಯವರ ಮೌನ ನೋಡಿದರೆ ನಮಗೆ ಇದು ರಾಜ್ಯ ಬಿಜೆಪಿಯ ಕುಮ್ಮಕ್ಕು ಎನ್ನದೆ ವಿಧಿಯಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಣಕುಂಬಿಯಲ್ಲಿ ಜನವರಿ 31ರಂದು ಗ್ರಾಮ ವಾಸ್ತವ್ಯ: ಗೋವಾ ತಂಡ ಭೇಟಿ ನೀಡಿರುವುದನ್ನು ವಿರೋಧಿಸಿ ಜ.31ರಂದು ಜೆಡಿಎಸ್ ವತಿಯಿಂದ ಕಣಕುಂಬಿಯ ಮಾವಲಿ ದೇವಸ್ಥಾನದ ಎದುರು ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಕೋನರಡ್ಡಿ ತಿಳಿಸಿದರು.

ಗೋವಾ ಭೇಟಿ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಕೂಡಲೇ ಕೇಂದ್ರಕ್ಕೆ ದೂರು ನೀಡಿ ಅವರನ್ನು ಪದೇ ಪದೇ ಬರದಂತೆ ತಡೆಹಿಡಿಯಬೇಕು. ಮಹಾದಾಯಿ, ಕಳಸಾ-ಬಂಡೂರಿ ಜಾರಿಗೆ ಪ್ರಧಾನಿ ಮೇಲೆ ಮತ್ತೊಮ್ಮೆ ಒತ್ತಡ ಹೇರಬೇಕು. ಅಲ್ಲದೆ, ಫೆ.6ರೊಳಗೆ ನ್ಯಾಯಾಧೀಕರಣದ ಹೊರಗಡೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಬರುವ ದಿನಗಳಲ್ಲಿ ಬಿಜೆಪಿಯ ವಿರುದ್ಧ ರಾಜ್ಯದ ಜನತೆಯೊಂದಿಗೆ ಬೀದಿಗಿಳಿದು ಮಾಡು ಇಲ್ಲವೆ ಮಡಿ ಹೋರಾಟ ಮಾಡುವುದು ಅನಿವಾರ್ಯ ವಾಗಲಿದೆ ಎಂದು ಕೋನರಡ್ಡಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News