ಗೌರಿ ಹತ್ಯೆಯ ರೂವಾರಿಗಳು ದಕ್ಷಿಣ ಕನ್ನಡದಲ್ಲಿದ್ದಾರೆಂಬ ಅನುಮಾನವಿದೆ: ಎಚ್.ಎಸ್. ದೊರೆಸ್ವಾಮಿ
ಬೆಂಗಳೂರು, ಜ.29: ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎನ್ನುವ ವದಂತಿ ಎಲ್ಲೆಡೆ ಹಬ್ಬಿತ್ತು. ಗೌರಿಯನ್ನು ಗುಂಡಿಕ್ಕಿ ಕೊಂದವರು, ಹತ್ಯೆಯ ರೂವಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ, ಈ ಭಾಗದಲ್ಲಿ ತನಿಖಾ ತಂಡ ಸೂಕ್ಷ್ಮವಾಗಿ ತನಿಖೆ ನಡೆಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಪುರಭವನದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಜನ್ಮ ದಿನಾಚರಣೆ ಅಂಗವಾಗಿ ಗೌರಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ 'ಗೌರಿ ದಿನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್‌ಐಟಿ ತಂಡದಿಂದ ಇತ್ತೀಚಿಗೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ, ಇದು ನಿಜವಾದರೆ ಕೂಡಲೇ ಅವರನ್ನು ಬಹಿರಂಗಪಡಿಸಬೇಕು ಎಂದು ಹೇಳಿದರು.
ದೇಶದಲ್ಲಿ ಬಿಜೆಪಿ ಹಾಗೂ ಅದರ ವೆುತ್ರಿಕೂಟ 20 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ಕೆಲಸ ಮಾಡಬೇಕು ಎಂದ ಅವರು, ನಾನು ಯಾವುದೇ ಪಕ್ಷವನ್ನು ಓಲೈಕೆ ಮಾಡಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಚಾರಧಾರೆಗಳನ್ನು ಗಟ್ಟಿಗೊಳಿಸಬೇಕು: ಗೌರಿಯ ವಿಚಾರಗಳಿಂದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಿದೆ. ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಗೌರಿ ಲೇಖನಿಯನ್ನು ಖಡ್ಗದಂತೆ ಬಳಸಿದ್ದರು. ಎಲ್ಲವನ್ನು ನೇರವಾಗಿ ಬರೆಯುತ್ತಿದ್ದರು. ತಪ್ಪು ದಾರಿ ಹಿಡಿದವರಿಗೆ ಸಿಂಹಸ್ವಪ್ನರಾಗಿದ್ದರು. ಕೊನೆಗೆ ದುಷ್ಕರ್ಮಿಗಳ ಗುಂಡಿಗೆ ಹತ್ಯೆ ಆಗಿದ್ದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಲೇಖಕಿ ಕೆ.ನೀಲಾ, ಡಾ.ವಡ್ಡಗೆರೆ ನಾಗರಾಜಯ್ಯ ಉಪಸ್ಥಿತರಿದ್ದರು.