×
Ad

ಹೆಂಡತಿಯೊಂದಿಗೆ ಬದುಕಲ್ಲ, ವಿಚ್ಛೇದನ ಕೊಡಿಸಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಪತಿ!

Update: 2018-01-29 21:39 IST

ಬೆಂಗಳೂರು, ಜ.29: ನನ್ನ ಹೆಂಡತಿ ಕಂಡರೆ ನನಗೆ ಭಯ, ನಾನು ಅವಳೊಟ್ಟಿಗೆ ಜೀವನ ನಡೆಸಲ್ಲ, ನನಗೆ ವಿಚ್ಛೇದನ ಕೊಡಿ ಎಂದು ಗಂಡ, ಗಂಡನೊಂದಿಗೆ ಬದುಕಲು ಅವಕಾಶ ನೀಡಿ ಎಂದು ಪತ್ನಿ ಕೋರ್ಟ್ ಮೆಟ್ಟಿಲೇರಿದ ಪ್ರಕರಣವೊಂದು ನಡೆದಿದೆ.

ಆದರೆ ಇವರಿಬ್ಬರು ಸಣ್ಣ ಮನಸ್ತಾಪಕ್ಕೆ ದಾಂಪತ್ಯ ಜೀವನ ಕಡಿದುಕೊಳ್ಳಲು ಮುಂದಾಗಿದ್ದನ್ನು ಗಮನಿಸಿದ ನ್ಯಾಯಪೀಠ, ಭಾವನೆಗಳು ಬೆರೆತಾಗ ಮಾತ್ರ ಗಂಡ ಹೆಂಡತಿ ಸಂಸಾರ ಮಾಡಲು ಸಾಧ್ಯ ಎಂದು ದಂಪತಿಗೆ ಜೀವನದ ನೀತಿ ಪಾಠ ಬೋಧಿಸಿದ ಅಪರೂಪದ ಪ್ರಕರಣ ಹೈಕೋರ್ಟ್‌ನಲ್ಲಿ ಕಂಡುಬಂತು.

ವಿದೇಶದಲ್ಲಿ ಬದುಕು ಕಟ್ಟಿಕೊಂಡಿದ್ದ ಸಿಲಿಕಾನ್ ಸಿಟಿಯ ದಂಪತಿ ಬದುಕಲ್ಲಿ ಮೂಡಿರುವ ಬಿರುಕು ಹೈಕೋರ್ಟ್ ಮೆಟ್ಟಿಲೇರಿದೆ. ಪತಿ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದು, ಈ ಅರ್ಜಿ ವಿಚಾರಣೆ ನ್ಯಾ.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.

ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ನನ್ನ ಹೆಂಡತಿ ಕಂಡರೆ ನನಗೆ ಭಯ, ನಾನು ಅವಳ ಜೊತೆ ಹೋಗಲ್ಲ, ನನಗೆ ವಿಚ್ಛೇದನ ಕೊಡಿ ಎಂದು ಹೈಕೋರ್ಟ್‌ನಲ್ಲಿ ಗಂಡ ಮನವಿ ಮಾಡಿದ. ಅದಕ್ಕೆ ಪ್ರತಿಯಾಗಿ ನನಗೆ ಗಂಡ ಬೇಕು, ಗಂಡನೊಂದಿಗೆ ಜೀವನ ನಡೆಸಲು ಅವಕಾಶ ಕಲ್ಪಿಸಿ ಎಂದು ಪತ್ನಿ ಮೊರೆಯಿಟ್ಟಳು. ಪತಿ ಪತ್ನಿಯ ನಡುವಿನ ಮನಸ್ತಾಪ ಕಂಡ ನ್ಯಾಯಪೀಠ, ಸ್ವಲ್ಪಹೊತ್ತು ಇಬ್ಬರೂ ಕಬ್ಬನ್ ಪಾರ್ಕ್ ಸುತ್ತಾಡಿಕೊಂಡು ಬನ್ನಿ ಎಂದು ಹೇಳಿತು.

ಸಂಜೆ ಮತ್ತೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ ಮಾತುಕತೆ ಏನಾಯಿತು, ನಿಮ್ಮ ನಿರ್ಧಾರಗಳು ಏನು ಎಂದು ಪ್ರಶ್ನಿಸಿತು. ಆದರೆ ಪತಿ ಪತ್ನಿ ಇಬ್ಬರೂ ತಮ್ಮ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ನಿರಾಕರಿಸಿದರು. ಪತಿ, ಪತ್ನಿ ಬೇಡ ವಿಚ್ಛೇದನ ನೀಡಿ ಎಂದು ಮನವಿ ಮಾಡಿದರೆ, ಪತ್ನಿ ವಿಚ್ಛೇದನ ಬೇಡ. ಪತಿಯೊಟ್ಟಿಗೆ ವಿದೇಶಕ್ಕೆ ಹೋಗಿ ಜೀವನ ಸಾಗಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದಳು.

ಗಂಡನಿಗೆ ಇಚ್ಛೆ ಇಲ್ಲ ಎಂದು ಹೇಳಿದ ಬಳಿಕ ನ್ಯಾಯಾಲಯ ಒತ್ತಾಯಪೂರ್ವಕವಾಗಿ ಒಂದೇ ಕಡೆ ಇರಿ ಎಂದು ಹೇಳಲು ಸಾಧ್ಯವಿಲ್ಲ. ಇದು ಒಂದು ದಿನದ ಜೀವನ ಅಲ್ಲ. ಪ್ರೀತಿ ಇಲ್ಲದ ಮೇಲೆ ಭಾವನೆಗಳು ಬೆರೆಯದೇ ಸಂಸಾರ ನಡೆಸಲು ಸಾಧ್ಯವಿಲ್ಲ. ಹಿಂದೆ ನಡೆದುದ್ದೆಲ್ಲವನ್ನು ಮರೆತರೆ ಹೊಸ ಜೀವನ ಹಸನಾಗುತ್ತದೆ. ನೀವು ಹೊಸ ಜೀವನ ಪ್ರಾರಂಭಿಸಬೇಕು ಎಂದು ಸಲಹೆ ನೀಡಿತು.

ನ್ಯಾ.ಫಣೀಂದ್ರ ಅವರು ಸಮಾಧಾನದಿಂದ ಬುದ್ಧಿವಾದ ಹೇಳಿದರೂ ದಂಪತಿ ಒಮ್ಮತಕ್ಕೆ ಬರಲು ನಿರಾಕರಿಸಿದರು. ತಮ್ಮ ತಮ್ಮ ಪಟ್ಟು ಸಡಿಲಿಸಲು ನಿರಾಕರಿಸಿದರು. ಆದರೂ ನ್ಯಾಯಪೀಠ ಮತ್ತೊಮ್ಮೆ ದಂಪತಿಗೆ ಕೌನ್ಸಿಲಿಂಗ್ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು. ಸಾಮಾಜಿಕ ಮನಶಾಸ್ತ್ರಜ್ಞರ ಜತೆ ಮಧ್ಯಸ್ಥಿಕೆಗೆ ಸೂಚನೆ ನೀಡಿತು. ಬೆಂಗಳೂರಿನ ಸುಶೀಲಾ ಎನ್ನುವವರ ಬಳಿ ಮತ್ತೊಮ್ಮ ಮಧ್ಯಸ್ಥಿಕೆಗೆ ಸೂಚಿಸಿದ ನ್ಯಾಯಪೀಠ, ವೈದ್ಯಕೀಯ ಹಾಗೂ ಮಧ್ಯಸ್ಥಿಕೆದಾರರು ಕುಟುಂಬವನ್ನು ಸರಿಪಡಿಸಲು ಪ್ರಯತ್ನ ಮಾಡಬೇಕು ಎಂದು ಸೂಚಿಸಿ ಮಧ್ಯಸ್ಥಿಕೆ ಕೇಂದ್ರಕ್ಕೆ ಪ್ರಕರಣ ವರ್ಗಾವಣೆ ಮಾಡಿ ಆದೇಶಿಸಿತು.

ಪ್ರಕರಣವೇನು: 2011 ರಲ್ಲಿ ಬೆಂಗಳೂರಿನ ಟೆಕ್ಕಿಗಳಿಬ್ಬರ ಮದುವೆಯಾಗಿತ್ತು. ಹಿಂದೂ ವಿವಾಹ ಕಾಯ್ದೆಯಡಿ ಮದುವೆ ನೋಂದಣಿಯಾಗಿತ್ತು. ವಿವಾಹದ ನಂತರ ದಂಪತಿ ಅಮೆರಿಕಾಗೆ ತೆರಳಿದ್ದರು. ಆದರೆ 2013ರಲ್ಲಿ ಪತಿ, ಪತ್ನಿಯಿಂದ ವಿಚ್ಛೇದನ ಕೋರಿ ಅಮೆರಿಕಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪತಿ ಪತ್ನಿ ಉಪಸ್ಥಿತಿಯಲ್ಲಿ ಅಮೆರಿಕಾ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಬೆಂಗಳೂರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿನ ನ್ಯಾಯಾಲಯ ಹಿಂದೂ ವಿವಾಹ ಕಾಯಿದೆ ಅನ್ವಯ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ. ಇದರ ನಡುವೆ ಗಂಡ ಹೆಂಡತಿ ಬೇರೆ ಇದ್ದರು. ಈ ಮಧ್ಯೆ ಪತ್ನಿ ಭಾವ ಮತ್ತು ನಾದಿನಿ ಕಿರುಕುಳ ನೀಡುತ್ತಿದ್ದಾರೆ ಎಂದು ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದ್ದರಿಂದ ಪತಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News