×
Ad

ಉದ್ಯೋಗ ನೀಡದ ಮೋದಿ ನಿವೃತ್ತಿಯಾಗಲಿ: ಜಿಗ್ನೇಶ್ ಮೇವಾನಿ

Update: 2018-01-29 21:44 IST

ಬೆಂಗಳೂರು, ಜ.29: ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಹುಸಿಯಾಗಿದೆ. ಹೀಗಾಗಿ, ಅವರು ಈ ಕೂಡಲೇ ನಿವೃತ್ತರಾಗಲಿ ಎಂದು ಗುಜರಾತ್‌ನ ವಡ್ಗಾಂವ್ ಕ್ಷೇತ್ರದ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ಸೋಮವಾರ ನಗರದ ಪುರಭವನದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಗೌರಿ ದಿನ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಪೀಳಿಗೆಗೆ ಮೋದಿ ಸರಕಾರ ಏನೂ ನೀಡಿಲ್ಲ. ಅಲ್ಲದೆ ಉದ್ಯೋಗ ಸೃಷ್ಟಿಸುವ ಭರವಸೆಯೂ ಹುಸಿಯಾಗಿದೆ. ಈ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

‘ಉದ್ಯೋಗ ನೀಡಿದರೆ, ಮಾತ್ರ ಮತ’ ಎನ್ನುವ ಅಭಿಯಾನ ಕರ್ನಾಟಕದಲ್ಲಿ ಆರಂಭಗೊಂಡಿದೆ. ಇದೇ ಮಾದರಿ ದೇಶದಲ್ಲೆಡೆ ನಡೆಯಬೇಕು ಎಂದ ಅವರು, ಜಾತಿ-ಧರ್ಮಗಳ ವಿಷಯಗಳ ಮೇಲೆ ಯುವಕರು ಜಗಳವಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ದಲಿತರು ಮತ ಹಾಕಲ್ಲ: 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಬಿಜೆಪಿ ಪಕ್ಷಕ್ಕೆ ಹಾಕದಂತೆ ನಾವು ಜಾಗೃತಿ ಮೂಡಿಸುತ್ತೇವೆ. ಇದೇ ಬಿಜೆಪಿ ಗುಜರಾತ್‌ನಲ್ಲಿ ದಲಿತರಿಗೆ ಭೂಮಿ ನೀಡದೆ ವಂಚಿಸಿ ಶ್ರೀಮಂತರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ನೀಡಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿ ಇಲ್ಲಿನ ನಾಗರಿಕರ ಮೇಲಿದೆ. ನಾನು ಮೂರು ವಾರಗಳ ಕಾಲ ಕರ್ನಾಟಕದಲ್ಲಿದ್ದು, ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವೆ ಎಂದ ಅವರು, ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಕೆಲ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲು ಮಾಡಲಾಗುತ್ತಿದೆ ಎಂದು ಹೇಳಿದರು.

ಗುಜರಾತಿನ ಮುಖ್ಯಕಾರ್ಯದರ್ಶಿ ಜೆಎನ್‌ಯುನಲ್ಲಿ ವ್ಯಾಸಂಗ ಮಾಡಿದ್ದಾರೆ. ಆದರೆ, ಅದನ್ನು ಬಿಟ್ಟು ನಾನು ಮಾತ್ರ ಜೆಎನ್‌ಯು ವಿದ್ಯಾರ್ಥಿ ಎಂದು ಬಿಜೆಪಿ ಹೇಳುತ್ತಿದೆ. ಅಷ್ಟೇ ಅಲ್ಲದೆ, ಬಡತನ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಎಂದಿಗೂ ಈ ಪಕ್ಷ ಧ್ವನಿಗೂಡಿಸಿಲ್ಲ ಎಂದು ದೂರಿದರು.

ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಇರೋಮ್ ಶರ್ಮಿಳಾ, ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್, ಶೆಹ್ಲಾ ರಶೀದ್, ಅಲಹಾಬಾದ್ ರೀಚಾ ಸಿಂಗ್, ಕರ್ನಾಟಕ ಜನಶಕ್ತಿಯ ಡಾ.ವಾಸು, ಲೇಖಕ ವಿಕಾಸ್ ವೌರ್ಯ, ಪತ್ರಕರ್ತ ಕುಮಾರ್ ಬುರಡಿಕಟ್ಟಿ, ದಸಂಸ ಸಂಚಾಲಕ ಎನ್.ಮುನಿಸ್ವಾಮಿ ಮತ್ತಿತರ ಪ್ರಮುಖರಿದ್ದರು

ಯಾರೂ ಹಣ ಕೊಟ್ಟಿಲ್ಲ

'ಗೌರಿದಿನ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ರಾಜ್ಯ ಸರಕಾರ ಹಣ ನೀಡಿದೆ ಎನ್ನುವ ಆರೋಪ ಸತ್ಯಕ್ಕೆ ದೂರ. ಸರಕಾರದಿಂದ ನಾವು ಹಣ ಪಡೆದುಕೊಂಡಿಲ್ಲ. ನನಗೂ 50 ರಿಂದ 60 ಸಾವಿರ ರೂ. ವೇತನ ಬರುತ್ತದೆ. ನಾನೇಕೆ ಹಣ ಕೇಳಲಿ. ಗೌರಿ ಲಂಕೇಶ್ ಸಹೋದರಿ, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ನನ್ನ ವಿಮಾನದ ಟಿಕೆಟ್ ಬುಕ್ ಮಾಡಿದರು.

-ಜಿಗ್ನೇಶ್ ಮೇವಾನಿ, ಶಾಸಕ, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News