2013ರ ಮಾರ್ಗಸೂಚಿಗಳ ಅನುಸಾರವೇ ವರ್ಗಾವಣೆ: ರಾಜ್ಯ ಸರಕಾರದಿಂದ ಹೈಕೋರ್ಟ್‌ಗೆ ಹೇಳಿಕೆ
ಬೆಂಗಳೂರು, ಜ.29: ಸರಕಾರಿ ಅಧಿಕಾರಿಗಳ ವರ್ಗಾವಣೆ ಸಂಬಂಧ 2013ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರವೇ ವರ್ಗಾವಣೆ ಮಾಡಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.
ರಾಮನಗರ ತಾಲೂಕಿನ ಮಾಯಗಾನಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮುರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಈ ಮಾಹಿತಿ ನೀಡಿದರು.
2013ರ ಜು.7ರಂದು ಹೊರಡಿಸಲಾಗಿರುವ ಮಾರ್ಗಸೂಚಿಗೆ ವಿರುದ್ಧವಾಗಿ ಯಾವುದೇ ಅಧಿಕಾರಿಗಳ ವರ್ಗಾವಣೆ ಮಾಡುವುದಿಲ್ಲ. ಮಾರ್ಗಸೂಚಿಯ ಅನುಸಾರವೇ ವರ್ಗಾವಣೆ ಮಾಡಲಾಗುವುದು. ಈ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ನೀಡಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಇದಕ್ಕೆ ನ್ಯಾಯಪೀಠ, ನಿಮ್ಮ ಹೇಳಿಕೆಯನ್ನು ನಾವು ದಾಖಲಿಸಿಕೊಳ್ಳುತ್ತೇವೆ. ನಿಮ್ಮ ಹೇಳಿಕೆಯಂತೆಯೇ ನೀವು ನಡೆದುಕೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಸಿದರೆ ನ್ಯಾಯಾಂಗ ನಿಂದನೆ ಹಾಗೂ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮೌಖಿಕ ಎಚ್ಚರಿಕೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣವೇನು: ಮಾಯಗಾನಹಳ್ಳಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ಎನ್.ಮುನಿಯಪ್ಪ ಅವರನ್ನು ಲಕ್ಷ್ಮೀಪುರ ಗ್ರಾಮ ಪಂಚಾಯತ್ ಗೆ ಹಾಗೂ ಲಕ್ಷ್ಮೀಪುರದಲ್ಲಿ ಕೆಲಸ ಮಾಡುತ್ತಿದ್ದ ಪಿಡಿಒ ಆರ್.ಎಂ.ಕಲಾವತಿ ಅವರನ್ನು ಮಾಯಗಾನಹಳ್ಳಿಗೆ ಅವಧಿಗೂ ಮುನ್ನ ವರ್ಗಾವಣೆ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ವಿಚಾರಣೆ ವೇಳೆ ಸರಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.