‘ಎಸ್ಸಿ ಎಸ್ಟಿ ಮಹಿಳಾ ಉದ್ಯಮಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಒತ್ತಾಯ’
ಬೆಂಗಳೂರು, ಜ.29: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳಾ ಉದ್ಯಮಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಹಾಗೂ ಪ್ರಕ್ಯೂರ್‌ಮೆಂಟ್ ಕಾಯಿದೆ ಜಾರಿ ಮಾಡಿ ಉದ್ಯಮಿಗಳು ಉತ್ಪಾದಿಸುವ ಉತ್ಪನ್ನಗಳನ್ನು ಸರಕಾರ ಕಡ್ಡಾಯವಾಗಿ ಖರೀದಿಸಬೇಕೆಂಬುದು ಸೇರಿದಂತೆ 7 ಅಂಶಗಳುಳ್ಳ ಬೇಡಿಕೆಗಳೊಂದಿಗೆ ಎಸ್ಸಿ, ಎಸ್ಟಿ ಎಂಟರ್‌ಪ್ರೂನರ್ಸ್, ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ಸರಕಾರಕ್ಕೆ ಒತ್ತಾಯಿಸಿದೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಎಂಟರ್‌ಪ್ರೂನರ್ಸ್, ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜವಳಿ ಇಲಾಖೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡುತ್ತಿರುವ ಸವಲತ್ತುಗಳ ಅರಿವು ಹಾಗೂ ಜನಾಂಗದ ಆರ್ಥಿಕ ಅಭಿವೃದ್ಧಿಗೆ 2018-19ನೇ ಸಾಲಿನ ರಾಜ್ಯದ ಆಯವ್ಯಯ ಪೂರ್ವಭಾವಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಉದ್ಯಮದಾರರ ಹಿತಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗೆ ಕೆಸ್‌ಎಫ್‌ಸಿ, ವಾಣಿಜ್ಯ ಬ್ಯಾಂಕುಗಳಿಂದ ಶೇ. 4ರ ಬಡ್ಡಿದರದಲ್ಲಿ ಸಾಲಸೌಲಭ್ಯ, ಕೈಗಾರಿಕಾ ನಿವೇಶನ-ಮಳಿಗೆ ನಿರ್ಮಿಸಲು ಸಬ್ಸಿಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಿದೆ. ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದ ಅವರು, ಸವಲತ್ತುಗಳನ್ನು ಪಡೆದವರು ಇನ್ನಿತರ ನೊಂದವರಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಜವಳಿ ಸಚಿವ ರುದ್ರಪ್ಪ ಲಮಾಣಿ ಜವಳಿ ಇಲಾಖೆಯ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಗೋ.ತಿಪ್ಪೇಶ್, ಕೈಗಾರಿಕಾಭಿವೃದ್ಧಿ ಆಯುಕ್ತ ದರ್ಪಣ್ ಜೈನ್, ಸಂಘದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಸೇರಿದಂತೆ ಪ್ರಮುಖರಿದ್ದರು.
ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಮೀಸಲಾತಿ ಮಿತಿಯನ್ನು 50ಲಕ್ಷ ರೂ.ನಿಂದ 1ಕೋಟಿ ರೂ.ಗಳಿಗೆ ಏರಿಸಲು ಸರಕಾರ ಚಿಂತನೆ ನಡೆಸಿದ್ದು, ಮುಂದಿನ ಬಜೆಟ್‌ನಲ್ಲಿ ಅನುಮೋದನೆ ಮಾಡಲಾಗುವುದು.
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ