ಲಿಫ್ಟ್ ಕೇಳಿ ದೇಶ ಸುತ್ತಿದ ಸಾಹಸಿಗ

Update: 2018-01-29 18:33 GMT

ಟ್ರಕ್, ಸ್ಕೂಟರ್, ಸೈಕಲ್, ಎತ್ತಿನಗಾಡಿ ಯಾವುದೇ ಇರಲಿ ಅವುಗಳ ಚಾಲಕರಲ್ಲಿ ಲಿಫ್ಟ್ ಕೇಳಿ, 24 ರಾಜ್ಯಗಳ ಪರ್ಯಟನೆ ನಡೆಸಿರುವ ಸಾಹಸಿಯೊಬ್ಬ ಈಗ ಇಡೀ ದೇಶದ ಗಮನಸೆಳೆದಿದ್ದಾರೆ. ಅಲಹಾಬಾದ್‌ನ 27 ವರ್ಷದ ಅಂಶ್ ಮಿಶ್ರಾ, ಕಳೆದ ವರ್ಷ 250 ದಿನಗಳ ಕಾಲ ಪ್ರಯಾಣಿಸಿ ಹೆಚ್ಚು ಕಮ್ಮಿ ಇಡೀ ಭಾರತವನ್ನು ಸುತ್ತಿಬಂದಿದ್ದಾರೆ.

ಅಲಹಾಬಾದ್‌ನ ನಿವಾಸಿಯಾದ ಅಂಶ್ ಮಿಶ್ರಾ ಬರೀ ಪುಡಿಗಾಸಿನೊಂದಿಗೆ ಭಾರತ ಪ್ರವಾಸವನ್ನು ಆರಂಭಿಸಿದ್ದರು. ಲಾರಿ, ಸ್ಕೂಟರ್, ಕಾರು ಮತ್ತಿತರ ವಾಹನಗಳಲ್ಲಿ ಉಚಿತವಾಗಿ ಲಿಫ್ಟ್ ಪಡೆದುಕೊಂಡು ಅವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಅಲಹಾಬಾದ್‌ನ ಟೆಕ್ನಿಕಲ್ ಕಾಲೇಜ್‌ನ ಎಂಬಿಎ ವಿದ್ಯಾರ್ಥಿ ಯಾಗಿರುವ ಮಿಶ್ರಾ 2017ರ ಫೆಬ್ರವರಿ 3ರಂದು ತನ್ನ ಪ್ರವಾಸ ಆರಂಭಿಸಿದ್ದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಂದ ಅವರು ಲಿಫ್ಟ್ ಪಡೆದುಕೊಂಡು ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸುತ್ತಿದ್ದರು. ತನ್ನ ಪ್ರಯಾಣ, ಆಹಾರ ಹಾಗೂ ವಸತಿಗಾಗಿ ಅಂಶ್, ಜನರ ನೆರವನ್ನೇ ಅವಲಂಭಿಸಿಕೊಂಡಿದ್ದರು. ತನ್ನ 250 ದಿನಗಳ ಸುದೀರ್ಘ ಯಾತ್ರೆಯಲ್ಲಿ ತನಗೆ ಸುಮಾರು 1800 ಮಂದಿ ಟ್ರಕ್ ಚಾಲಕರು ಲಿಫ್ಟ್ ನೀಡಿರುವುದಾಗಿ ಆತ ಹೇಳಿಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಟ್ರಕ್ ಚಾಲಕರು ಬೇಯಿಸಿದ ಆಡುಗೆ ಆಹಾರವನ್ನು ಉಂಡು, ಟ್ರಕ್‌ಗಳ ಕೆಳಗೆ ಆತ ಮಲಗಿದ್ದೂ ಉಂಟಂತೆ. ಆದಾಗ್ಯೂ ಅಂಶ್ ಮಿಶ್ರಾ, ತನ್ನ ಪ್ರವಾಸದಲ್ಲಿ ತೊಂದರೆಗಳನ್ನು ಎದುರಿಸಿದ ದಿನವೂ ಇದ್ದವು. ಒಮ್ಮೆ ಅವರು ಗುಜರಾತ್‌ನಲ್ಲಿ ಸೂರತ್‌ನಲ್ಲಿದ್ದಾಗ ವಾಹನದಲ್ಲಿ ಲಿಫ್ಟ್ ಪಡೆಯಲು ಅವರಿಗೆ 9 ತಾಸುಗಳು ಕಾಯಬೇಕಾಗಿತ್ತು ಹಾಗೂ ಸುಮಾರು 26 ತಾಸುಗಳ ಕಾಲ ಅವರಿಗೆ ತಿನ್ನಲು ಏನೂ ಇರಲಿಲ್ಲ. ಇದರಿಂದ ಅವರ ಆರೋಗ್ಯವೂ ಹದಗೆಟ್ಟಿತ್ತು. ಕೇರಳದಲ್ಲೂ ತನ್ನನ್ನು ಅನೇಕರು ಸಂದೇಹದೃಷ್ಟಿಯಿಂದ ಕಂಡಿದ್ದರು ಎಂದು ಅಂಶ್ ಹೇಳಿಕೊಂಡಿದ್ದಾರೆ.

ಮಾವೋವಾದಿಗಳ ಹಾವಳಿಯಿರುವ ಬಸ್ತಾರ್‌ಗೂ ಮಿಶ್ರಾ ಪ್ರಯಾಣಿಸಿದ್ದರು. ಆದರೆ ತಾನು ಅಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿಲ್ಲವೆಂದು ಮಿಶ್ರಾ ಹೇಳಿದ್ದಾರೆ.

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News