‘ವಿರಾಟ್ ಕೊಹ್ಲಿ ತಾಳ್ಮೆ ಮೈಗೂಡಿಸಿಕೊಳ್ಳಲಿ’

Update: 2018-01-29 19:24 GMT

ಹೊಸದಿಲ್ಲಿ, ಜ.29: ‘‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಶೈಲಿ ಭಯ ಹುಟ್ಟಿಸುವಂತಹದ್ದು, ಆದರೆ, ಅವರು ಕ್ರಿಕೆಟ್‌ನಲ್ಲಿ ಬೆಳೆಯುತ್ತಿರುವ ಹಾಗೆ ಶಾಂತಚಿತ್ತವಾಗಿರುವುದನ್ನು ಕಲಿತರೆ ಅಸಾಧಾರಣ ಬ್ಯಾಟ್ಸ್‌ಮನ್ ಸರ್ ವಿವಿಯನ್ ರಿಚರ್ಡ್ಸ್ ಪ್ರತಿರೂಪ ಆಗಲಿದ್ದಾರೆ’’ ಎಂದು ವೆಸ್ಟ್‌ಇಂಡೀಸ್ ದಂತಕತೆೆ ಮೈಕಲ್ ಹೋಲ್ಡಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ‘‘ಕೊಹ್ಲಿ ಯುವ ನಾಯಕನಾಗಿರುವುದರಿಂದ ನಾಯಕನಾಗಿ ಕಲಿಯುವ ಛಲ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಹೊಂದಿರಬೇಕು. ಅವರು ಉತ್ಸಾಹಭರಿತವಾಗಿ ಆಡುತ್ತಾರೆ. ಅವರ ಅಬ್ಬರಕ್ಕೆ ಎದುರಾಳಿಗಳು ಭಯಪಡುತ್ತಾರೆ. ವಿವಿಯನ್ ರಿಚರ್ಡ್ಸ್ -ಕೊಹ್ಲಿ ನಡುವೆ ಬ್ಯಾಟಿಂಗ್ ಮಾತ್ರವಲ್ಲದೆ ನಾಯಕತ್ವದಲ್ಲಿ ಹೋಲಿಕೆಯಿದೆ’’ ಎಂದು ಹೋಲ್ಡಿಂಗ್ ತಿಳಿಸಿದರು.

   ‘‘ವಿವಿಯನ್ ನಾಯಕನಾಗಿದ್ದ ಸಮಯದಲ್ಲಿ ಆಕ್ರಮಣಕಾರಿಯಾಗಿದ್ದರು. ಅದರ ಜೊತೆಗೆ ಶಾಂತತೆಯನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಅವರೊಂದಿಗಿದ್ದ ಸಹ ಆಟಗಾರರು ಕೂಡ ನೆಮ್ಮದಿಯಿಂದ ಆಟವಾಡಿ ಪಂದ್ಯವನ್ನು ಜಯಿಸಲು ನೆರವಾಗುತ್ತಿದ್ದರು’’ ಎಂದರು. ದಕ್ಷಿಣ ಆಫ್ರಿಕ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಮೊದಲ 2 ಟೆಸ್ಟ್‌ಗಳಲ್ಲಿ ಸೋತಿತ್ತು. ವಾಂಡರರ್ಸ್‌ನಲ್ಲಿ ಆಡಿದ ಅಂತಿಮ ಟೆಸ್ಟ್‌ನಲ್ಲಿ 63 ರನ್‌ಗಳಿಂದ ಗೆಲುವು ಸಾಧಿಸಿತು.

‘‘ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯವರ ನಿರ್ಧಾರ ಹಾಗೂ ಆಟಗಾರರನ್ನು ಆಗಾಗ ಬದಲಾಯಿಸುವುದು ಸರಿಯಲ್ಲ’’ಎಂದು ವಿಂಡೀಸ್ ದಂತಕತೆೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News