ಕಿತ್ತಳೆ ಬಣ್ಣದ ಪಾಸ್‌ಪೋರ್ಟ್: ಕೇಂದ್ರಕ್ಕೆ ಕೋರ್ಟ್ ನೋಟಿಸ್

Update: 2018-01-30 03:42 GMT

ತಿರುವನಂತಪುರ, ಜ.30: ಇಮಿಗ್ರೇಷನ್ ತಪಾಸಣೆ ಅಗತ್ಯವಿರುವ ಪಾಸ್‌ಪೋರ್ಟ್‌ದಾರರಿಗೆ ಕಿತ್ತಳೆ ಬಣ್ಣದ ರಕ್ಷಾಪುಟ ಹೊಂದಿರುವ ಪಾಸ್‌ಪೋರ್ಟ್ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇರಳ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕೇಂದ್ರದ ಈ ಕ್ರಮ ಕಡಿಮೆ ಶಿಕ್ಷಣ ಪಡೆದ ಮತ್ತು ಆರ್ಥಿಕವಾಗಿ ಹಿಂದುಳಿದ ಜನರನ್ನು ಪ್ರತ್ಯೇಕಿಸಲು ಕಾರಣವಾಗುತ್ತದೆ ಎಂದು ಅರ್ಜಿದಾರ ಹಾಗೂ ವಕೀಲ ಶಂಸುದ್ದೀನ್ ಕರುಣಾಪಲ್ಲಿ ಪ್ರತಿಪಾದಿಸಿದ್ದಾರೆ.

ಇನ್ನು ಮುಂದೆ ಇಸಿಆರ್ (ಇಮಿಗ್ರೇಷನ್ ಚೆಕ್ ರಿಕ್ವಯರ್ಡ್) ಪಾಸ್‌ಪೋರ್ಟ್‌ಗಳಿಗೆ ಕಿತ್ತಳೆ ಬಣ್ಣ ಹಾಗೂ ನಾನ್ ಇಸಿಆರ್ ಪಾಸ್‌ಪೋರ್ಟ್‌ಗಳಿಗೆ ನೀಲಿ ಬಣ್ಣ ಇರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿತ್ತು. ಇಸಿಆರ್ ಪಾಸ್‌ಪೋರ್ಟ್‌ದಾರರು 10ನೇ ತರಗತಿಗಿಂತ ಕಡಿಮೆ ಶಿಕ್ಷಣ ಹೊಂದಿರುತ್ತಾರೆ ಹಾಗೂ ತೆರಿಗೆ ವಿಧಿಸುವ ಮಟ್ಟಕ್ಕಿಂತ ಕಡಿಮೆ ಆದಾಯ ಹೊಂದಿರುತ್ತಾರೆ. ಸಾಮಾನ್ಯವಾಗಿ ಇವರು ಉದ್ಯೋಗಕ್ಕಾಗಿ ವಲಸೆ ಹೋಗುವ ವರ್ಗದವರು ಎಂದು ಅರ್ಜಿದಾರರು ವಿವರಿಸಿದ್ದಾರೆ.

ಈ ಪ್ರತ್ಯೇಕ ಬಣ್ಣದ ಸಂಕೇತದಿಂದಾಗಿ ಸಮಾಜದ ದುರ್ಬಲ ವರ್ಗದವರನ್ನು ಪ್ರತ್ಯೇಕವಾಗಿ ಗುರುತಿಸಿದಂತಾಗುತ್ತದೆ. ಇದು ಅವರ ಖಾಸಗಿತನ ಹಾಗೂ ಘನತೆಯ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎನ್ನುವುದು ಅವರ ವಾದ. ಈ ಬಣ್ಣ ಪ್ರತ್ಯೇಕಿಸುವಿಕೆಯ ಹಿಂದೆ ಯಾವ ತಾರ್ಕಿಕ ನೆಲೆಗಟ್ಟೂ ಇಲ್ಲ. ಇದು ಅರ್ಥಹೀನ ಮತತು ಸಮಾನತೆಯ ತತ್ವದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News