ರೋಗಿಗಳ ಆರೈಕೆ ಮಾಡುವವರತ್ತ ‘ಕಾರುಣ್ಯ’ದ ನೋಟ ಬೀರಿದ ಎಂ ಫ್ರೆಂಡ್ಸ್

Update: 2018-01-30 06:10 GMT

ಮಂಗಳೂರು, ಜ.29: ಕಳೆದ ಐದಾರು ವರ್ಷಗಳಿಂದ ದ.ಕ.ಜಿಲ್ಲೆಯ ಮೂಲೆ ಮೂಲೆಗೂ ಸಂಚರಿಸಿ ಸಂಕಷ್ಟದಲ್ಲಿರುವ ಅರ್ಹರನ್ನು ಗುರುತಿಸಿ ವಿವಿಧ ರೀತಿಯಲ್ಲಿ ನೆರವಿನ ಹಸ್ತ ಚಾಚುತ್ತಿರುವ ‘ಎಂ ಫ್ರೆಂಡ್ಸ್’ ಎಂಬ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್ ಬಡರೋಗಿಗಳ ಉಪಚಾರ ಅಥವಾ ಆರೈಕೆ ಮಾಡುವವರತ್ತ ‘ಕಾರುಣ್ಯ’ರ ನೋಟ ಬೀರಿದೆ.

ನಗರದ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಉಪಚರಿಸುವವರಿಗೆ ಪ್ರತಿದಿನ ರಾತ್ರಿಯ ಆಹಾರದ ವ್ಯವಸ್ಥೆಯನ್ನು ‘ಕಾರುಣ್ಯ’ಎಂಬ ಹೆಸರಿನಲ್ಲಿ ವಾಟ್ಸ್ ಆ್ಯಪ್ ಬಳಗ ‘ಮರ್ಸಿ ಫ್ರೆಂಡ್ಸ್’ ಅಥವಾ ‘ಎಂ ಫ್ರೆಂಡ್ಸ್ ಟ್ರಸ್ಟ್ 2017ರ ಡಿಸೆಂಬರ್ 19ರಿಂದ ಆರಂಭಿಸಿದೆ. ಸದ್ಯ ಪ್ರತೀ ದಿನ ಸುಮಾರು 500 ಮಂದಿಗೆ ಆಹಾರ ಪೂರೈಸುತ್ತಿವೆ.

ದ.ಕ., ಉಡುಪಿ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಬಿಜಾಪುರ, ಕಾಸರಗೋಡು ಮತ್ತಿತರ ಜಿಲ್ಲೆಗಳಿಂದ ವೆನ್ಲಾಕ್ ಆಸ್ಪತ್ರೆಗೆ ಪ್ರತಿನಿತ್ಯ ರೋಗಿಗಳು ದಾಖಲಾಗುತ್ತಿದ್ದಾರೆ. ಈ ರೋಗಿಗಳಿಗೆ ದಿನನಿತ್ಯ ಆಸ್ಪತ್ರೆ ವತಿಯಿಂದ ಊಟ ನೀಡಲಾಗುತ್ತದೆ. ಆದರೆ ರೋಗಿಗಳನ್ನು ಉಪಚಾರ ಅಥವಾ ಆರೈಕೆಯಲ್ಲಿ ತೊಡಗಿದವರಿಗೆ ಆಹಾರ ನೀಡಲಾಗುತ್ತಿಲ್ಲ. ಹಾಗಾಗಿ ರೋಗಿಗಳಿಗೆ ನೀಡುವ ಆಹಾರವನ್ನೇ ಹಂಚಿ ತಿನ್ನುವ ಪರಿಸ್ಥಿತಿ ಇಲ್ಲಿತ್ತು. ಕೆಲವರು ಅರ್ಧ ಹೊಟ್ಟೆಯಲ್ಲಿದ್ದರೆ ಇನ್ನು ಕೆಲವರು ಭಿಕ್ಷೆ ಬೀಡಿ ತಿನ್ನುವ ಅಥವಾ ಬರೀ ಹೊಟ್ಟೆಯಲ್ಲಿ ಮಲಗುವ ಕರುಣಾಜನಕ ಪರಿಸ್ಥಿತಿಯೂ ಇಲ್ಲಿದೆ. ಇದನ್ನು ಕಂಡು ಕೆಲವರಿಗೆ ಕೆಲವು ವೈದ್ಯರು ರಾತ್ರಿ ಅನ್ನ ತಂದು ಕೊಡುತ್ತಿದ್ದುದೂ ಇದೆ.

2015ರ ಆಗಸ್ಟ್ 14ರಿಂದ ಜೋಸೆಫ್ ಕ್ರಾಸ್ತ ನೇತೃತ್ವದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ರೋಗಿಗಳ ಸಂಬಂಧಿಕರಿಗೆ ಮಧ್ಯಾಹ್ನದ ಊಟ ನಿರಂತರವಾಗಿ ನೀಡುತ್ತಿದೆ. ಇದೀಗ ಎಂ ಫ್ರೆಂಡ್ಸ್ ರೋಗಿಗಳ ಉಪಚಾರ ಅಥವಾ ಆರೈಕೆಯಲ್ಲಿ ತೊಡಗಿಸಿದವರಿಗೆ ರಾತ್ರಿ ಆಹಾರದ ವ್ಯವಸ್ಥೆ ಕಲ್ಪಿಸಿದೆ. ಅಂದರೆ ಮೂರು ಚಪಾತಿ ಮತ್ತು ದಿನಕ್ಕೊಂದು ಬಗೆ ಬಗೆಯ ತರಕಾರಿ ಪದಾರ್ಥ ನೀಡಲಾಗುತ್ತಿದೆ.

►ಕೂಪನ್ ವ್ಯವಸ್ಥೆ: ದಿನನಿತ್ಯ ಮಧ್ಯಾಹ್ನ ಎಂಫ್ರೆಂಡ್ಸ್ ನೇಮಿಸಿದ ಒಬ್ಬ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ರೋಗಿಗಳ ಆರೈಕೆ ಮಾಡುವವರಿಗೆ ಕೂಪನ್ ನೀಡುತ್ತಾರೆ. ಅದರ ಆಧಾರದ ಮೇಲೆ ಒಬ್ಬೊಬ್ಬರಿಗೆ ತಲಾ 3 ಚಪಾತಿ ನೀಡಲಾಗುತ್ತಿದೆ. ಚಪಾತಿ ಮತ್ತು ಪಲ್ಯ ತಯಾರಿಯ ಜವಾಬ್ದಾರಿಯನ್ನು ಕ್ಯಾಟರಿಂಗ್‌ವೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಕ್ಯಾಟರಿಂಗ್‌ನವರು ಮಿತದರದಲ್ಲಿ ರುಚಿಯಾದ ಚಪಾತಿ ಪೂರೈಸುತ್ತಿದ್ದಾರೆ. ಆಸ್ಪತ್ರೆಯ ಲಯನ್ಸ್ ಬರ್ನ್ ಸೆಂಟರ್ ಮತ್ತು ರೋಟರಿ ಫಿಸಿಯೋಥೆರಪಿ ವಿಭಾಗದ ಬಳಿ ಆಹಾರ ವಿತರಿಸಲಾಗುತ್ತಿದೆ. ಎಂಫ್ರೆಂಡ್ಸ್‌ನ ತಲಾ ನಾಲ್ಕು ಮಂದಿ ಒಂದೊಂದು ವಾರ ಇದರ ಉಸ್ತುವಾರಿ ವಹಿಸುತ್ತಿದ್ದಾರೆ.

►ಕಳೆದ ಐದಾರು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಬಡವರ ಸೇವೆಯಲ್ಲಿ ತೊಡಗಿರುವ ಎಂಫ್ರೆಂಡ್ಸ್ ನಲ್ಲಿ ವೈದ್ಯರು, ಪತ್ರಕರ್ತರು, ಇಂಜಿನಿಯರ್‌ಗಳು, ಉದ್ಯಮಿಗಳು, ಸಮಾಜ ಸೇವಕರು ಹೀಗೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸುಮಾರು 46 ಮಂದಿ ಸಮಾನಮನಸ್ಕ ಸದಸ್ಯರಿದ್ದಾರೆ. ಇದರಲ್ಲಿ 18 ಮಂದಿ ಅನಿವಾಸಿ ಭಾರತೀಯರಿದ್ದಾರೆ. ಈಗಾಗಲೇ ಇದು ಟ್ರಸ್ಟ್ ಆಗಿ ರೂಪುಗೊಂಡಿದೆ. ಆರಂಭದಲ್ಲಿ ಈ ಸಂಸ್ಥೆಯು ವೈದ್ಯಕೀಯ ಖರ್ಚು ಭರಿಸಲಾಗದೆ ಆಸ್ಪತ್ರೆಯಲ್ಲೇ ಸಹಾಯದ ನಿರೀಕ್ಷೆಯಲ್ಲಿದ್ದವರಿಗೆ ನೆರವು ನೀಡುತ್ತಿತ್ತು. ಬಳಿಕ ಜಮಾಅತ್ ಸರ್ವೇ ನಡೆಸಿ ಅಲ್ಲಿ ವೈದ್ಯಕೀಯ ಚಟುವಟಿಕೆ, ಬ್ಲಡ್ ಡೋನರ್ಸ್‌ ಗ್ರೂಪ್, ವಿಧವೆಯರಿಗೆ ಅಹಾರ ಸಾಮಗ್ರಿ ವಿತರಣೆ ಇತ್ಯಾದಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಕನಿಷ್ಠ 1 ವರ್ಷ ಈ ಜಮಾಅತ್‌ನ ಮೇಲ್ನೋಟ ಹರಿಸುತ್ತಿದೆ. ಈವರೆಗೆ 6 ಜಮಾಅತ್‌ಗಳ ಸರ್ವೇ ಮಾಡಿದೆ.

ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಉಪಚಾರ ಮಾಡುವ ಈ ಯೋಜನೆಗೆ ಮಾಸಿಕ 2.50 ಲಕ್ಷ ರೂ. ವೆಚ್ಚ ತಗಲಲಿದೆ. ಅಂದರೆ ಪ್ರತೀ ದಿನ 7,500 ರೂ. ಬೇಕಾಗಿದೆ. ಆರಂಭದ 3 ತಿಂಗಳು ಎಂಫ್ರೆಂಡ್ಸ್ ಈ ವೆಚ್ಚ ಭರಿಸುವ ನಿರ್ಧಾರಕ್ಕೆ ಬಂದಿತ್ತು. ಇದೀಗ ಐದಾರು ತಿಂಗಳಿಗೆ ಬೇಕಾಗುವಷ್ಟು ಹಣವನ್ನು ಎಂಫ್ರೆಂಡ್ಸ್ ಸಂಗ್ರಹಿಸಿದೆ. ಇದನ್ನು ಸ್ವತ: ಪದಾಧಿಕಾರಿಗಳು, ಸದಸ್ಯರು ಭರಿಸಿದ್ದಾರೆ. ಉಳಿದಂತೆ ಮುಂದಿನ ದಿನಗಳಲ್ಲಿ ನೆರವಿಗಾಗಿ ದಾನಿಗಳತ್ತ ಚಿತ್ತಹರಿಸಿದೆ.

ಹಸಿದವರಿಗೆ ಅನ್ನ ನೀಡಬೇಕು ಎಂಬ ಪ್ರವಾದಿ ಮುಹಮ್ಮದ್ ಅವರ ಬೋಧನೆಯಂತೆ ಜನ್ಮ ಮಾಸಾಚರಣೆಯ ಅಂಗವಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕಾರುಣ್ಯ ಯೋಜನೆ ಆರಂಭಿಸಿದ್ದೇವೆ. ಡಾ. ಮುಬಶ್ಶಿರ್ ಅವರು ಕೆಲವು ತಿಂಗಳ ಹಿಂದೆ ಸಂಸ್ಥೆಯ ಸಭೆಯ ಮುಂದೆ ಈ ಪ್ರಸ್ತಾಪವನ್ನಿಟ್ಟಾಗ ನಾವು ಈ ಬಗ್ಗೆ ಆಸಕ್ತಿ ವಹಿಸಿದೆವು. ಕಳೆದ 55 ದಿನಗಳಿಂದ ಈ ಸೇವೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.ಈಗಾಗಲೆ ಹಲವಾರು ದಾನಿಗಳು ನಮ್ಮೀ ಕಾರ್ಯವನ್ನು ಸ್ವತಃ ವೀಕ್ಷಿಸಿ ಸಹಾಯ ನೀಡಿದ್ದಾರೆ. ಹಲವರು ಹಣ್ಣು ಹಂಪಲನ್ನೂ ನೀಡಿ ಸಹಕರಿಸಿದ್ದಾರೆ. ಈ ಸೇವೆ ನಿರಂತರವಾಗಿ ಮುಂದುವರಿಯಬೇಕು ಎಂಬುದು ನಮ್ಮ ಅಭಿಲಾಶೆ. ಅಂದಹಾಗೆ, ಇದೊಂದು ಜಾತ್ಯತೀತ ತತ್ವದ ಆಧಾರದ ಮೇಲೆ ನಡೆಯುವ ಸೇವೆ. ಸರದಿ ಸಾಲಿನಲ್ಲಿ ನಿಂತು ಆಹಾರ ಪಡೆಯುವಾಗ ನಮ್ಮ ಕಣ್ಣಾಲಿಗಳು ತೇವಗೊಳ್ಳುತ್ತವೆ.

ಹನೀಫ್ ಹಾಜಿ ಗೋಳ್ತಮಜಲು - ಅಧ್ಯಕ್ಷರು, ಎಂಫ್ರೆಂಡ್ಸ್ ಟ್ರಸ್ಟ್

ಈ ಯೋಜನೆ ನಿರಂತರವಾಗಿ ಮುಂದುವರೆಯಲು ಸಹೃದಯರು ತಮ್ಮ ಅಥವಾ ಮಕ್ಕಳ, ಮನೆಯವರ, ಕುಟುಂಬಿಕರ ಹುಟ್ಟುಹಬ್ಬ, ವಿವಾಹ ವಾರ್ಷಿಕ ಅಥವಾ ಇನ್ನಿತರ ಕಾರ್ಯಕ್ರಮಗಳ ಅಂಗವಾಗಿ ವೆನ್ಲಾಕ್ ಕಾರುಣ್ಯ ಯೋಜನೆಗೆ ಸಹಕಾರ ನೀಡಿದರೆ ವಿಶಿಷ್ಟವಾಗಿ ಆಚರಿಸಬಹುದು.

ರಶೀದ್ ವಿಟ್ಲ- ಪ್ರಧಾನ ಕಾರ್ಯದರ್ಶಿ, ಎಂಫ್ರೆಂಡ್ಸ್ ಟ್ರಸ್ಟ್

ನನ್ನ ಮಾವನ ಆರೈಕೆ ಮಾಡಲು 15 ದಿನದ ಹಿಂದೆ ಇಲ್ಲಿ ದಾಖಲಾಗಿದ್ದಾರೆ. ನಾನು 15 ದಿನದಿಂದಲೂ ಇಲ್ಲಿ ಕೂಪನ್ ಪಡೆದು ಆಹಾರ ಪಡೆಯುತ್ತಿದ್ದೇನೆ. ಇದೊಂದು ಉತ್ತಮ ಸೇವೆ. ಮಂಗಳೂರಿನಲ್ಲಿ ಇಂಥದ್ದೊಂದು ಸೌಲಭ್ಯ ನಮಗೆ ಸಿಗಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ. ಅದೆಷ್ಟೋ ಮಂದಿ ದುಡ್ಡುಕೊಟ್ಟು ಹೊಟೇಲಿನಿಂದ ಆಹಾರ ಪಡೆಯಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಅಂಥವರಿಗೆ ಇದೊಂದು ‘ಕಾರಣ್ಯ’ವಾಗಿದೆ. ಜಾತಿ,ಧರ್ಮವನ್ನು ನೋಡದೆ ಅನ್ನದಾನ ಮಾಡುವ ಈ ಸಂಸ್ಥೆಯವರಿಗೆ ಒಳ್ಳೆಯದಾಗಲಿ.

ದಾಕ್ಷಾಯಿಣಿ ಅರಸೀಕೆರೆ, ಹಾಸನ

ನನ್ನ ಅಮ್ಮನ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಕಳೆದ ಶನಿವಾರ ಇಲ್ಲಿಗೆ ಕರೆದುಕೊಂಡು ಬರಲಾಗಿದೆ. ಅಮ್ಮನನ್ನು ನಾನೇ ಆರೈಕೆ ಮಾಡಬೇಕು. ಈ ಸಂದರ್ಭ ಇಲ್ಲಿ ಉಚಿತವಾಗಿ ಆಹಾರ ಪೂರೈಕೆ ಮಾಡುವ ವಿಷಯ ತಿಳಿದು ಈ ಕಡೆ ಬಂದೆ. ತುಂಬಾ ಖುಶಿಯಾಯಿತು. ಆಹಾರ ಕೂಡ ಚೆನ್ನಾಗಿದೆ. ಅನ್ನದಾನ ಮಾಡುವ ಈ ಸಂಸ್ಥೆಯವರ ಉದ್ದೇಶ ಈಡೇರಲಿ.

ಮೈಲಾರಪ್ಪ ಬಾಗಲಕೋಟೆ (ವಿಕಲಚೇತನ)

Full View

Writer - ವರದಿ : ಹಂಝ ಮಲಾರ್

contributor

Editor - ವರದಿ : ಹಂಝ ಮಲಾರ್

contributor

Similar News