ಸೌದಿಯಲ್ಲಿ ವಿದೇಶಿಯರಿಗೆ ಸಂಕಷ್ಟ: 12 ಉದ್ಯೋಗ ಕ್ಷೇತ್ರಗಳಲ್ಲಿ ಸ್ವದೇಶೀಕರಣ

Update: 2018-01-30 11:35 GMT

ಜಿದ್ದ,ಜ.30:  ಸೌದಿಅರೇಬಿಯದಲ್ಲಿ 12 ವಿವಿಧ ಉದ್ಯೋಗ ಕೇತ್ರಗಳಲ್ಲಿ ಈ ವರ್ಷದ ಸೆಪ್ಟಂಬರ್‍ನಿಂದ ಸ್ವದೇಶೀಕರಣ ಜಾರಿಗೆ ಬರಲಿದೆ. ಕೈಗಡಿಯಾರ, ಕನ್ನಡಕ, ಮೆಡಿಕಲ್ ಉಪಕರಣ, ಇಲೆಕ್ಟ್ರಿಕಲ್,ವಿದ್ಯುತ್ ಉಪಕರಣಗಳು, ಕಾರ್ಪೆಟ್, ಕಾರು, ಮೋಟಾರ್ ಸೈಕಲ್, ಫರ್ನಿಚರ್, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಕಚೇರಿ ಉಪಕರಣಗಳು, ರೆಡಿಮೆಡ್ ವಸ್ತ್ರಗಳು, ಮಕ್ಕಳ ಉಡುಪು, ಪುರುಷರ ವಸ್ತುಗಳು, ಮಿಠಾಯಿ ಅಂಗಡಿಗಳನ್ನು ಸ್ವದೇಶೀಕರಣಗೊಳಿಸಲಾಗುವುದು ಎನ್ನುವ ಪ್ರಕಟನೆ ಹೊರಡಿಸಲಾಗಿದೆ.

ಮಿಠಾಯಿ, ಕೈಗಡಿಯಾರ, ಸಿದ್ಧ ಉಡುಪುಗಳ ಕ್ಷೇತ್ರದಲ್ಲಿ ಹೆಚ್ಚಾಗಿ ಭಾರತೀಯರು ತೊಡಿಗಿಸಿಕೊಂಡಿದ್ದಾರೆ. ಕಾರ್ಮಿಕ ಸಚಿವ ಡಾ. ಅಲಿ ಅಲ್‍ಗಫೀಸ್ ಅಂಗೀಕಾರ ನೀಡಿದ ಕಾನೂನಿನ ಕುರಿತು ಸಚಿವಾಲಯದ ವಕ್ತಾರ ಖಾಲಿದ್ ಅಲ್‍ಬಲ್‍ಖೈಲ್ ಮಾಧ್ಯಮಗಳಿಗೆ ವಿವರಿಸಿದ್ದು, ಮುಂದಿನ ಸೆಪ್ಟಂಬರ್ ಹನ್ನೊಂದರಿಂದ ಈ ಕೆಲಸದಲ್ಲಿ ಸ್ವದೇಶೀಕರಣ ಜಾರಿಗೆ ಬರಲಿದೆ. ವಾಹನ ಮಾರಾಟ, ರೆಡಿಮೇಡ್, ಮನೆ ಉಪಕರಣ, ಪಾತ್ರೆ ಅಂಗಡಿಗಳಲ್ಲಿ  ಮೊದಲ ಹಂತದಲ್ಲಿ ಸ್ವದೇಶಿಕರಣ ಜಾರಿಗೊಳಿಸಲಾಗುವುದು.

ಇಲೆಕ್ಟ್ರಿಕ್ ಉಪಕರಣ, ವಾಚ್, ಕನ್ನಡಕ ಅಂಗಡಿಗಳ ಸ್ವದೇಶೀಕರಣ ನವಂಬರ್ ಒಂಬತ್ತರಿಂದ ಜಾರಿಗೆ ಬರಲಿದೆ. ಮೂರನೆ ಹಂತದಲ್ಲಿ 2019 ಜನವರಿ 7ರಿಂದ ಮೆಡಿಕಲ್ ಉಪಕರಣ, ಕಟ್ಟಡ ನಿರ್ಮಾಣ ವಸ್ತುಗಳು, ಬಿಡಿ ಭಾಗಗಳು, ಕಾರ್ಪೆಟ್, ಮಿಠಾಯಿ ಅಂಗಡಿಗಳಲ್ಲಿ ಸ್ವದೇಶೀಕರಣ ತರಲಾಗುವುದು. ಇದೇ ವೇಳೆ ಸ್ವದೇಶಿ ಮಹಿಳೆಯರಿಗೆ ಮೀಸಲಾತಿ ಜಾರಿಯಲ್ಲಿರುವುದು ಮುಂದುವರಿಯಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಆಯಾ ಕ್ಷೇತ್ರದ ಸರಕಾರದ ಅಧೀನದ ಸ್ವದೇಶೀಕರಣವು ನಿಗದಿತ ದಿನಾಂಕದ ಪ್ರಕಾರವೇ ನಡೆಯಲಿದ್ದು, ಮೊಬೈಲ್ ಮಾರಾಟ, ರಿಪೇರಿ, ಜ್ಯುವೆಲ್ಲರಿ, ಮಾಲ್‍ಗಳ ಕೆಲಸಗಳ ನಂತರ ಇದೀಗ ಮತ್ತಷ್ಟು ಉದ್ಯೋಗ ಕ್ಷೇತ್ರದತ್ತ ಸೌದಿ ಅರೇಬಿಯದ ಸ್ವದೇಶೀಕರಣ ಪ್ರಕ್ರಿಯೆ ವಿಸ್ತರಣೆಗೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News