ಚರ್ಮದಲ್ಲಿನ ಕಪ್ಪುಕಲೆಗಳ ನಿವಾರಣೆಗೆ ಹೀಗೆ ಮಾಡಿ

Update: 2018-01-30 12:18 GMT

ನಿಮ್ಮ ಚರ್ಮದಲ್ಲಿ ಕಪ್ಪುಕಲೆಗಳಿವೆಯೇ? ಚಿಂತಿಸಬೇಡಿ, ಅವುಗಳನ್ನು ನಿವಾರಿಸಲು ಅತ್ಯುತ್ತಮ ನೈಸರ್ಗಿಕ ವಿಧಾನವಿಲ್ಲಿದೆ. ಶತಮಾನಗಳಿಂದಲೂ ಸೌಂದರ್ಯ ವರ್ಧನೆಗೆ ಬಳಕೆಯಾಗುತ್ತಿರುವ ಶ್ರೀಗಂಧ ನಿಮಗೆ ನೆರವಾಗಬಲ್ಲದು. ಶ್ರೀಗಂಧವು ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು, ಇದರೊಂದಿಗೆ ಅದರಲ್ಲಿರುವ ಬ್ಲೀಚಿಂಗ್ ಏಜೆಂಟ್‌ಗಳು ಚರ್ಮದಲ್ಲಿಯ ಕಪ್ಪುಕಲೆಗಳನ್ನು ಬಿಳಿಯಾಗಿಸು ತ್ತವೆ. ಈ ವಿಷಯದಲ್ಲಿ ಬೇರೆ ಯಾವುದೂ ಶ್ರೀಗಂಧಕ್ಕೆ ಸರಿಸಾಟಿಯಾಗುವುದಿಲ್ಲ. ಬಳಕೆಗೆ ಸುಲಭವಾಗಿರುವ ಜೊತೆಗೆ ಈ ಸಾಂಪ್ರದಾಯಿಕ ಸೌಂದರ್ಯ ವರ್ಧಕವು ಸುಲಭವಾಗಿ ಲಭ್ಯವಿದೆ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಹುಡಿಯ ರೂಪದಲ್ಲಿ ಬಳಸಲಾಗುವ ಶ್ರೀಗಂಧವು ಕಪ್ಪುಕಲೆಗಳ ನಿವಾರಣೆಯಿಂದ ಹಿಡಿದು ಮೊಡವೆಗಳ ಚಿಕಿತ್ಸೆಯವರೆಗೂ ಹಲವಾರು ವಿಧಗಳಲ್ಲಿ ನಿಮ್ಮ ಚರ್ಮಕ್ಕೆ ಲಾಭದಾಯಕವಾಗಿದೆ.

ನೈಸರ್ಗಿಕವಾದ ಶ್ರೀಗಂಧದ ಹುಡಿಯನ್ನು ಬಳಸಿ ಚರ್ಮದಲ್ಲಿಯ ಕಪ್ಪುಕಲೆಗಳನ್ನು ನಿವಾರಿಸಲು ಹಲವಾರು ವಿಧಾನಗಳಿವೆ. ಅಂತಹ ಕೆಲವು ವಿಧಾನಗಳಿಲ್ಲಿವೆ.

►ಹಾಲಿನೊಂದಿಗೆ ಶ್ರೀಗಂಧದ ಹುಡಿ

ಬೌಲ್‌ವೊಂದರಲ್ಲಿ ಅರ್ಧ ಚಮಚ ಶ್ರೀಗಂಧದ ಹುಡಿ ಮತ್ತು ಒಂದು ಚಮಚ ಹಸಿಹಾಲು ಹಾಕಿ ಚೆನ್ನಾಗಿ ಮಿಶ್ರಗೊಳಿಸಿ. ಈ ಪೇಸ್ಟ್‌ನ್ನು ಕಲೆಗಳಿರುವ ಜಾಗಕ್ಕೆ ಲೇಪಿಸಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಹಸಿಬಟ್ಟೆಯಿಂದ ಒರೆಸಿ ಲಘು ಮಾಯಿಶ್ಚರೈಸರ್ ಹಚ್ಚಿ.

►ಪನ್ನೀರಿನೊಂದಿಗೆ ಶ್ರೀಗಂಧದ ಹುಡಿ

ಅರ್ಧ ಚಮಚ ಶ್ರೀಗಂಧದ ಹುಡಿಯನ್ನು ಎರಡು ಚಮಚ ರೋಸ್‌ವಾಟರ್ ಅಥವಾ ಪನ್ನೀರಿನೊಂದಿಗೆ ಚೆನ್ನಾಗಿ ಬೆರೆಸಿ. ಹೀಗೆ ಸಿದ್ಧಗೊಂಡ ಪೇಸ್ಟ್‌ನ್ನು ಚರ್ಮದಲ್ಲಿನ ಕಪ್ಪುಕಲೆಗಳ ಮೇಲೆ ಲೇಪಿಸಿ. 10-15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

►ಲಿಂಬೆಯ ರಸದೊಂದಿಗೆ ಶ್ರೀಗಂಧದ ಹುಡಿ

ಎರಡು ಚಮಚ ಲಿಂಬೆಹಣ್ಣಿನ ರಸಕ್ಕೆ ಅರ್ಧ ಚಮಚ ಶ್ರೀಗಂಧದ ಹುಡಿಯನ್ನು ಚೆನ್ನಾಗಿ ಮಿಶ್ರ ಮಾಡಿ ಅದನ್ನು ಪೀಡಿತ ಭಾಗಕ್ಕೆ ಲೇಪಿಸಿ. 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ನೀರಿನಿಂದ ತೊಳೆದು ಲಘುವಾದ ಮಾಯಿಶ್ಚರೈಸರ್ ಹಚ್ಚಿ.

►ಶ್ರೀಗಂಧದ ಹುಡಿ ಮತ್ತು ವಿಟಾಮಿನ್ ಇ ತೈಲ

ವಿಟಾಮಿನ್ ಇ ಕ್ಯಾಪ್ಸೂಲ್‌ನಿಂದ ತೈಲವನ್ನು ತೆಗೆದು ಅದಕ್ಕೆ ಅರ್ಧ ಚಮಚ ಶ್ರೀಗಂಧದ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಪೇಸ್ಟ್‌ನ್ನು ಕಪ್ಪುಕಲೆಗಳಿರುವ ಜಾಗದಲ್ಲಿ ಲೇಪಿಸಿ. ಕೆಲವು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

►ಆಲಿವ್ ಎಣ್ಣೆ ಮತ್ತು ಸೌತೆಯೊಂದಿಗೆ ಶ್ರೀಗಂಧದ ಹುಡಿ

ಒಂದು ಚಮಚ ಸೌತೆರಸಕ್ಕೆ ಅರ್ಧ ಚಮಚ ಶ್ರೀಗಂಧದ ಹುಡಿ ಮತ್ತು ಅರ್ಧ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪೀಡಿತ ಜಾಗದಲ್ಲಿ ಹಚ್ಚಿ. ಕೆಲವು ನಿಮಿಷಗಳ ಕಾಲ ಒಣಗಲು ಬಿಟ್ಟು, ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

►ಶ್ರೀಗಂಧದ ಹುಡಿ ಮತ್ತು ಬಾದಾಮ್ ಎಣ್ಣೆ

ಒಂದು ಚಮಚ ಬಾದಾಮ್ ಎಣ್ಣೆಗೆ ಅರ್ಧ ಚಮಚ ಶ್ರೀಗಂಧದ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಕಪ್ಪುಕಲೆಗಳ ಮೇಲೆ ಲೇಪಿಸಿ. ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳುವ ಮುನ್ನ ಕೆಲವು ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ.

►ಕಿತ್ತಳೆ ರಸದೊಂದಿಗೆ ಶ್ರೀಗಂಧದ ಹುಡಿ

ಬೌಲ್‌ವೊಂದರಲ್ಲಿ ಒಂದು ಚಮಚ ಕಿತ್ತಳೆ ರಸದೊಂದಿಗೆ ಅರ್ಧ ಚಮಚ ಶ್ರೀಗಂಧದ ಹುಡಿಯನ್ನು ಬೆರೆಸಿ ಚೆನ್ನಾಗಿ ಕಲಕಿ. ಈ ಪೇಸ್ಟ್‌ನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಒಣಗಲು ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

►ಅಲೋವೆರಾ ಜೆಲ್ ಮತ್ತು ಶ್ರೀಗಂಧದ ಹುಡಿ

ಅಲೋವೆರಾ ಸಸ್ಯದಿದ ಎರಡು ಚಮಚಗಳಷ್ಟು ಜೆಲ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಶ್ರೀಗಂಧದ ಹುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ಇದನ್ನು ಪೀಡಿತ ಜಾಗದ ಮೇಲೆ ದಪ್ಪವಾಗಿ ಹಚ್ಚಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News