×
Ad

ಗಾಂಧೀಜಿಯ ಕನಸು ನನಸು ಮಾಡುತ್ತಿರುವ ಸರಕಾರ: ಕೆ.ಸಿ.ವೇಣುಗೋಪಾಲ್

Update: 2018-01-30 18:22 IST

ಬೆಂಗಳೂರು, ಜ.30: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು, ಮಹಾತ್ಮ ಗಾಂಧೀಜಿಯವರ ಕನಸಿನಂತೆ ಜನಪರವಾದ ಯೋಜನೆಗಳನ್ನು ರೂಪಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಕ್ಷೇತ್ರ ನಮ್ಮ ಹೊಣೆ’ ರಾಜ್ಯ ಕಾಂಗ್ರೆಸ್ ನಾಯಕರ ಕಾರ್ಯಕ್ರಮದ ನಡುವೆ ಆಯೋಜಿಸಿದ್ದ ಮಹಾತ್ಮಗಾಂಧೀಜಿಯವರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಸಾಧನೆ, ತತ್ವ, ಆದರ್ಶಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ವಿಪರ್ಯಾಸ ಎಂದರೆ, ಗಾಂಧೀಜಿಯನ್ನು ಕೊಂದಂತಹ ಗೋಡ್ಸೆಯನ್ನು ನಮ್ಮ ದೇಶದಲ್ಲೆ ನೆನಪಿಸಿಕೊಳ್ಳುತ್ತಿದ್ದಾರೆ. ಗೋಡ್ಸೆಗಾಗಿ ದೇವಸ್ಥಾನ ಕಟ್ಟುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.

ಅ.2ರಂದು ಗಾಂಧಿ ಜಯಂತಿಯನ್ನು ವಿಶ್ವಸಂಸ್ಥೆ ಆಚರಿಸುತ್ತಿದೆ. ಆದರೆ, ಬಿಜೆಪಿಯವರು ಗಾಂಧೀಜಿಯ ಸಿದ್ಧಾಂತಗಳನ್ನು, ನೆನಪುಗಳನ್ನು ಜನಮಾನಸದಿಂದ ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ಇದ್ದು, ಬಿಜೆಪಿ ನಡೆಸುವ ಹುನ್ನಾರಕ್ಕೆ ತಿರುಗೇಟು ನೀಡಬೇಕು ಎಂದು ಅವರು ಕರೆ ನೀಡಿದರು.

ಮತೀಯವಾದ ಹಾಗೂ ಜಾತಿವಾದದ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ತನ್ನ ಸಿದ್ಧಾಂತವನ್ನು ರಕ್ಷಿಸಲು ತಳಮಟ್ಟಕ್ಕೆ ಇಳಿಯಲು ಬಿಜೆಪಿ ಹಿಂಜರಿಯುವುದಿಲ್ಲ. ಹರಿಯಾಣದಲ್ಲಿ ಶಾಲಾ ಮಕ್ಕಳಿದ್ದ ಬಸ್‌ಗಳ ಮೇಲೆ ದಾಳಿ ಮಾಡುವಷ್ಟರ ಮಟ್ಟಿಗೆ ಬಲಪಂಥೀಯ ನಾಯಕರು ಮುಂದಾಗಿದ್ದಾರೆ ಎಂದು ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.

ಇಡೀ ವಿಶ್ವದಲ್ಲೆ ಗಮನ ಸೆಳೆದಿರುವ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿವೆ. ಆದರೆ, ಕಾಂಗ್ರೆಸ್ ಪಕ್ಷ ಎಂದಿಗೂ ಇಂತಹ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ವೇಣುಗೋಪಾಲ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಭಾರತವು ಹಲವಾರು ಜಾತಿ, ಧರ್ಮ, ಸಂಸ್ಕೃತಿ, ವೈವಿದ್ಯತೆಗಳ ನಡುವೆ ಏಕತೆಯನ್ನು ಸಾಧಿಸಿರುವ ದೇಶ. ಗಾಂಧೀಜಿ ಹಾಗೂ ಅಂಬೇಡ್ಕರ್ ಶೋಷಿತರ ಪರವಾದ ಧ್ವನಿಯಾಗಿದ್ದರು. ಅವರ ಸಿದ್ಧಾಂತಗಳನ್ನೆ ಪ್ರಶ್ನಿಸುವ ಮಟ್ಟಿಗೆ ಕೆಲವರು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳನ್ನು ಮುಂದುವರೆಸುತ್ತಿರುವ ಪಕ್ಷ ಕಾಂಗ್ರೆಸ್. ಚುನಾವಣೆಯಲ್ಲಿ ಕಾಂಗ್ರೆಸನ್ನು ಸೋಲಿಸಲು ನಮ್ಮ ಕಾಂಗ್ರೆಸ್ಸಿಗರೇ ಸಂಚು ಮಾಡುವ ಅಪಾಯವಿರುತ್ತದೆ ಎಂದರು.

ಉಸ್ತುವಾರಿ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಬೇಕು. ಜಿಲ್ಲಾ ಪ್ರವಾಸ ಕೈಗೊಂಡಾಗ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವವರು ಇದ್ದರೆ, ಅವರೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು.

ನಮಗೆ ವ್ಯಕ್ತಿ ಪೂಜೆಯ ಅಗತ್ಯವಿಲ್ಲ. ಪಕ್ಷದ ಪೂಜೆಯ ಅಗತ್ಯವಿದೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು. ಪ್ರಚಾರ ಸಮಿತಿಯು ಪ್ರತ್ಯೇಕವಾಗಿ ಕೆಲಸ ಮಾಡುವುದಿಲ್ಲ. ಕೆಪಿಸಿಸಿ ನೇಮಿಸಿರುವ ಪದಾಧಿಕಾರಿಗಳನ್ನೆ ಪ್ರಚಾರ ಸಮಿತಿಗೆ ಆಯ್ಕೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ಗುಂಡೂರಾವ್, ಎಸ್.ಆರ್.ಪಾಟೀಲ್, ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್, ಎಐಸಿಸಿ ಕಾರ್ಯಾದರ್ಶಿಗಳಾದ ಮಧುಯಕ್ಷಿ ಗೌಡ್, ಮಾಣಿಕ್ಯ ಠಾಗೂರ್, ವಿಶ್ವನಾಥನ್, ಶೈಲಜಾನಾಥ್, ಸತೀಶ್ ಜಾರಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News