ಮಹಾದಾಯಿ ನದಿ ಪಾತ್ರದಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ: ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು, ಜ.30: ಮಹಾದಾಯಿ ನದಿ ಪಾತ್ರದಲ್ಲಿ ಯಾವುದೇ ನಿಯಮದ ಉಲ್ಲಂಘನೆ ಆಗಿಲ್ಲ. ಒಂದು ವೇಳೆ ಯಾವುದಾದರೂ ಕಾಮಗಾರಿ ಆಗಿದ್ದರೆ ನ್ಯಾಯ ಮಂಡಳಿ ತೀರ್ಮಾನ ಹೇಳಲಿ. ಗೋವಾದ ಉಪಸಭಾಪತಿ ಹೇಳಿದ್ದೆಲ್ಲ ಕಾನೂನು ಅಥವಾ ತೀರ್ಮಾನ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂಟೆ ಮಾಡುವುದೇ ಗೋವಾದ ಕೆಲಸ. ನಮ್ಮ ನೀರು ನಮಗೆ ಕೊಡಿ ಎಂದು ಕೇಳಿದರೆ ಗೋವಾದವರು ಗಲಾಟೆ ಮಾಡುತ್ತಾರೆ. ನಾವು ಏನು ಮಾಡುವುದು ಎಂದು ಪ್ರಶ್ನಿಸಿದರು.
45 ಟಿಎಂಸಿ ನೀರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುತ್ತದೆ. 200 ಟಿಎಂಸಿ ಸಮದ್ರ ಸೇರುತ್ತಿದ್ದರೂ ಗೋವಾದವರು ಅದನ್ನು ಬಳಸಿಕೊಳ್ಳುತ್ತಿಲ್ಲ. ನಮಗೆ 7.5 ಟಿಎಂಸಿ ಕುಡಿಯಲು ಕೊಡಿ ಎಂದರೆ ಕ್ಯಾತೆ ತೆಗೆದಿದ್ದಾರೆ. ನಮ್ಮ ರಾಜ್ಯದ ಒಳಗೆ ಕದ್ದು ಬಂದಿದ್ದಾರೆ. ನಮಗೆ ಹೇಳಿ ಬಂದಿದ್ದರೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೆವು ಎಂದು ಸಿದ್ದರಾಮಯ್ಯ ಹೇಳಿದರು.
ಒಂದು ರಾಜ್ಯದ ಮುಖ್ಯಮಂತ್ರಿ, ಸಚಿವ, ಸಭಾಪತಿ, ಶಾಸಕರು ಮತ್ತೊಂದು ರಾಜ್ಯಕ್ಕೆ ಅಧಿಕೃತ ಭೇಟಿಗಾಗಿ ಹೋದಾಗ ಶಿಷ್ಟಾಚಾರ ಪ್ರಕಾರ ಮಾಹಿತಿ ಕೊಡಬೇಕು. ತಂಟೆ ಮಾಡುವುದೇ ಗೋವಾದವರ ಕಸುಬು. ನಮ್ಮ ರಾಜ್ಯಕ್ಕೆ ಕಳ್ಳತನವಾಗಿ ಬಂದು ನಾವೇನೋ ಅಪರಾಧ ಮಾಡಿದ್ದೇವೆ ಎಂಬಂತೆ ಬಿಂಬಿಸುವ ಗೋವಾದವರ ವರ್ತನೆಯನ್ನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಯಾವ ಕಾಮಗಾರಿಯೂ ಅಲ್ಲಿ ನಡೆಯುತ್ತಿಲ್ಲ. ನಮ್ಮ ರಾಜ್ಯ ಕಾನೂನು, ಸಂವಿಧಾನವನ್ನು ಯಾವಾಗಲೂ ಗೌರವಿಸುವ ರಾಜ್ಯ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.
ಗಾಂಧೀಜಿ ಹತ್ಯೆಯ ಸಮರ್ಥನೆ ದೊಡ್ಡ ದುರಂತ
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು, ಮತೀಯವಾದಿಗಳು ಸಮರ್ಥಿಸಿಕೊಳ್ಳುತ್ತಿರುವುದು ದೊಡ್ಡ ದುರಂತ. ಈ ದೇಶದಲ್ಲಿ ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ, ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಂಡು ಬದುಕಿದರು. ದೇಶದಲ್ಲಿ ಎಲ್ಲಿ ಕೋಮು ಸಂಘರ್ಷಗಳು ಸಂಭವಿಸಿದರೂ ಸಾಂತ್ವನ ಹೇಳುತ್ತಿದ್ದರು. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ಅವರ ಕೋಮು ಸೌಹಾರ್ದತಾ ದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ. ಜಾತ್ಯತೀತತೆಯನ್ನು ಎತ್ತಿಹಿಡಿದಿದ್ದರು. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ, ಗೋವಿಂದರಾಜು, ಶಾಸಕ ಶಿವಾನಂದ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.