ಅಪ್ರಾಪ್ತ ಬಾಲಕಿಯ ಅಪಹರಣ: ಅಪರಾಧಿಗೆ 17 ವರ್ಷ ಜೈಲು
ಬೆಂಗಳೂರು, ಜ.30: ಅಪ್ರಾಪ್ತ ಬಾಲಕಿಯನ್ನು ಎರಡು ಬಾರಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 17 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಿ 54ನೆ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಕಳೆದ 2015ರಲ್ಲಿ ಹೊಸಕೆರೆಹಳ್ಳಿಯ ನಿವಾಸಿಯೊಬ್ಬರ 16 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿದ್ದ ಗುರು ಅಲಿಯಾಸ್ ಬೂಸಾ ಎಂಬಾತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ವಿವರ: ಅಪ್ರಾಪ್ತ ಬಾಲಕಿಯನ್ನು ಮನೆ ಬಳಿಯಿಂದ ಗುರು ಅಪಹರಿಸಿದ್ದ. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ 2015ರ ಜು.15 ರಂದು ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಆರೋಪಿಯನ್ನು ಪತ್ತೆಹಚ್ಚಿ ಬಾಲಕಿಯನ್ನು ರಕ್ಷಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಹೋಗಿದ್ದ ಎನ್ನಲಾಗಿದೆ. ಕೆಲ ದಿನಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ಎರಡು ತಿಂಗಳ ನಂತರ ಮತ್ತೆ ಕಾಲೇಜಿಗೆ ಹೋಗುತ್ತಿದ್ದ ಅದೇ ಬಾಲಕಿಯನ್ನು ಎರಡನೆ ಬಾರಿ ಅಪಹರಿಸಿದ್ದ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಈತನ ಅಪರಾಧ ಕೃತ್ಯಗಳು ಮತ್ತು ಅಸಭ್ಯ ವರ್ತನೆ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ನ್ಯಾಯಾಧೀಶರಾದ ಲತಾಕುಮಾರಿ ಅವರು ಆರೋಪಿ ಗುರು ಎರಡು ಪ್ರಕರಣಗಳಲ್ಲೂ ಅಪರಾಧಿ ಎಂದು ತೀರ್ಪು ನೀಡಿ ಮೊದಲನೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ ವಿಧಿಸಿದ್ದು, ಎರಡನೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಹಿರಿಯ ಸಾರ್ವಜನಿಕ ಅಭಿಯೋಜಕರಾದ ಚಿನ್ನವೆಂಕಟರಮಣಪ್ಪಅವರು ವಾದ ಮಂಡಿಸಿದ್ದಾರೆ.