×
Ad

ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫಲ: ಎಂ.ವಿ.ರಾಜಶೇಖರನ್

Update: 2018-01-30 19:18 IST

ಬೆಂಗಳೂರು, ಜ.30: ನಮ್ಮ ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಆದರೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಗಾಂಧಿ ಸ್ಮಾರಕ ನಿಧಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಗಾಂಧಿ ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಮಹಾನ್ ವ್ಯಕ್ತಿಗಳು ನಮ್ಮ ದೇಶದವರಾಗಿದ್ದಾರೆ. ಆದರೆ, ದೇಶದಲ್ಲಿಂದು ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ, ಪ್ರತಿಯೊಬ್ಬರೂ ಗಾಂಧಿ ತತ್ವಗಳನ್ನು ಪಾಲಿಸಬೇಕಾದ ಅಗತ್ಯವಿದೆ ಎಂದರು.

ಗ್ರಾಮಗಳು ಮುಂದುವರಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಗಾಂಧೀಜಿಯವರ ಆರ್ಥಿಕ ಕಲ್ಪನೆ ಪಾಲಿಸಿದರೆ ದೇಶ ಮುಂದುವರಿಯುತ್ತದೆ. 2001 ರ ಜನಗಣತಿ ಪ್ರಕಾರ 133 ಕೋಟಿ ಜನಸಂಖ್ಯೆಯಲ್ಲಿ ಶೇ.82 ರಷ್ಟು ಯುವ ಸಮೂಹ ಭಾರತದಲ್ಲಿದೆ. ಯುವ ಸಂಪನ್ಮೂಲ ಹೊಂದಿರುವ ದೇಶ ಭಾರತ ಎಂದು ಗುರುತಿಸಿಕೊಂಡಿದೆ. ಆದುದರಿಂದ ಯುವ ಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಾಂಧಿ ತತ್ವಗಳನ್ನು ತಲುಪಿಸಬೇಕು ಎಂದು ನುಡಿದರು.

ಮಹಾತ್ಮಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಭಾರತದ ಸಮಸ್ಯೆಗಳನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದರು. ಅಂದು ಗಾಂಧಿ ಚರಕವನ್ನು ಆರ್ಥಿಕ ಚಿಹ್ನೆಯಾಗಿ ಬಳಸಿಕೊಂಡಿದ್ದರು. ಅದನ್ನು ನಾವಿಂದು ಬಳಸಿಕೊಂಡರೆ ಕನಿಷ್ಠ ಪಕ್ಷ ಆರ್ಥಿಕ ಸುಧಾರಣೆ ಮಾಡಬಹುದಾಗಿದೆ ಎಂದು ಅವರು ಸಲಹೆ ನೀಡಿದರು.

ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಮಾತನಾಡಿ, ಸಂಯಮ ಮಂಡಳಿ ಮಹಾತ್ಮಗಾಂಧಿ ಹುಟ್ಟುಹಾಕಿದ ಸಂಸ್ಥೆಯಾಗಿದ್ದು, ಗಾಂಧಿ ಒಂದು ದಿನವಾದರೂ ಅಧಿಕಾರಕ್ಕೆ ಬಂದಿದ್ದರೆ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡುತ್ತಿದ್ದರು. ಆದರೆ, ಇಂದು ಅಧಿಕಾರದಲ್ಲಿರುವವರಿಗೆ ಮದ್ಯಪಾನ ನಿಷೇಧ ಮಾಡಬೇಕು ಎಂಬ ಮನಸ್ಸೇ ಇಲ್ಲ ಎಂದರು.

ದೇಶದಲ್ಲಿ ಜವಹರಲಾಲ್ ನೆಹರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮದ್ಯಪಾನ ಅಧಿಕೃತವಾಗಿರಲಿಲ್ಲ. ಆದರೆ, ಲಾಲ್ ಬಹುದ್ದೂರ್ ಶಾಸ್ತ್ರಿ ಪ್ರಧಾನಿಯಾದ ಮೇಲೆ ಅವರ ಮೇಲೆ ಕೆಲವರು ಒತ್ತಡ ಹಾಕಿ ಭಾರತದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದರು ಎಂದು ಹೇಳಿದರು. ಕುಡಿತದಿಂದ ನಮ್ಮ ಆಸೆ, ಕನಸುಗಳಿಗೆ ಭಂಗವಾಗುತ್ತದೆ. ಒತ್ತಡದಿಂದ ಅನಾರೋಗ್ಯ ಉಲ್ಬಣಗೊಳ್ಳುತ್ತದೆ ಎಂದು ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರ ನರಸಿಂಹಯ್ಯ, ತುಮಕೂರು ವಿವಿ ವಿಶ್ರಾಂತ ಕುಲಪತಿ ಅನಂತರಾಮಯ್ಯ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News